ರಾಷ್ಟ್ರಕವಿ ಕುವೆಂಪುರವರ ೧೨೧ನೇ ಜನ್ಮ ದಿನಾಚರಣೆ ಅಂಗವಾಗಿ ಮಂಡ್ಯದ ನೆಲದನಿ ಬಳಗ ಆಯೋಜಿಸಿರುವ ನನ್ನ ತೇಜಸ್ವಿ ನಾಟಕ ಪ್ರದರ್ಶನ ಡಿ.೩೦ರಂದು ಸಂಜೆ ೬.೧೫ಕ್ಕೆ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕವಿ ಕುವೆಂಪುರವರ ೧೨೧ನೇ ಜನ್ಮ ದಿನಾಚರಣೆ ಅಂಗವಾಗಿ ಮಂಡ್ಯದ ನೆಲದನಿ ಬಳಗ ಆಯೋಜಿಸಿರುವ ನನ್ನ ತೇಜಸ್ವಿ ನಾಟಕ ಪ್ರದರ್ಶನ ಡಿ.೩೦ರಂದು ಸಂಜೆ ೬.೧೫ಕ್ಕೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅಧ್ಯಕ್ಷ ಎಂ.ಸಿ.ಲಂಕೇಶ್ ತಿಳಿಸಿದರು.

ಬಿ.ಎಂ.ಗಿರಿರಾಜ ಅವರು ರಂಗರೂಪ ನೀಡಿ ನಿರ್ದೇಶಿಸಿರುವ ಈ ನಾಟಕವನ್ನು ಬೆಂಗಳೂರಿನ ಕಲಾ ಮಾಧ್ಯಮ ತಂಡವರು ಅಭಿನಯಿಸುವರು. ವಿದೇಶದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕನ್ನಡ ನಾಟಕ ಮಂಡ್ಯದಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕಿ ರುಕ್ಮಿಣಿ ವಹಿಸಲಿದ್ದು, ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಮತ್ತು ಗೀತ ರಚನೆಕಾರ ಪೂರ್ಣಚಂದ್ರ ತೇಜಸ್ವಿ ನೆರವೇರಿಸಲಿದ್ದಾರೆ ಎಂದರು.

ಇದೇ ವೇಳೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಬಿ.ಎನ್.ಪ್ರಭಾವತಿ, ಕೀನ್ಯಾದ ನೈರೋಬಿಯಲ್ಲಿರುವ ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಅವರನ್ನು ರೈತ ನಾಯಕಿ ಸುನಂದಾ ಹಾಗೂ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಅಭಿನಂದಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಮೂಳೆ ಮತ್ತು ಕೀಲುರೋಗ ತಜ್ಞ ಡಾ.ಎಚ್.ಎಸ್.ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಬಿಡಿಎ ಆರಕ್ಷಕ ವೃತ್ತ ನಿರೀಕ್ಷಕ ಸಿ.ಸತೀಶ್, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ನಿವೃತ್ತ ಸಹ ಪ್ರಾಧ್ಯಾಪಕ ಮರೀಗೌಡ, ಮಹಿಳಾ ಮುನ್ನಡೆಯ ಬಿ.ಎಸ್.ಶಿಲ್ಪ ಭಾಗವಹಿಸುವರು ಎಂದು ನುಡಿದರು.

ಗೋಷ್ಠಿಯಲ್ಲಿ ರುಕ್ಮಿಣಿ, ಮಹಾಲಕ್ಷ್ಮೀ, ಸುಬ್ರಹ್ಮಣ್ಯ, ಟಿ.ಎನ್.ರಕ್ಷಿತ್‌ರಾಜ್, ಟಿ.ಎಸ್.ಮಂಜು ಇದ್ದರು.ನನ್ನ ತೇಜಸ್ವಿ ನಾಟಕ ಕುರಿತು ಪರಿಚಯ

ಪ್ರಕೃತಿಯ ಅಗಾಧತೆ ಮತ್ತು ಮನುಷ್ಯನ ಸಂಕಲ್ಪವನ್ನು ತಮ್ಮ ಬರಹದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವಷ್ಟು ಸಮರ್ಪಕವಾಗಿ ಯಾರೂ ಹಿಡಿದಿಲ್ಲ. ಕನ್ನಡ ನಾಡಿಗೆ ಅವರ ಕರ್ವಾಲೋ, ಜುಗಾರಿಕ್ರಾಸ್, ಚಿದಂಬರ ರಹಸ್ಯ, ಪರಿಸರದ ಕತೆ, ಅಣ್ಣನ ನೆನಪು, ಮಹಾಪಲಾಯನ ಮೊದಲಾದ ಕೃತಿಗಳು ಬದುಕನ್ನು ನೋಡಲು ಇರುವಂತಹ ಗ್ರೇಡ್. ತೇಜಸ್ವಿ ಎನ್ನುವ ವ್ಯಕ್ತಿ ಈ ನಾಡಿನ ಎಲ್ಲ ಸತ್ವವ ಹೀರಿ ಅನಂತಕ್ಕೆ ಕೈಚಾಚಿ ಕೊನೆಗೆ ಕಾಡೊಳಗೆಯೇ ವಿಶ್ವಮಾನವನಾದ ಒಂದು ಚೈತನ್ಯ. ನನ್ನ ತೇಜಸ್ವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ಏಜಸ್ವಿ ಅವರ ಚೆಂದದ ದಾಂಪತ್ಯ ಕಾವ್ಯ. ಬದುಕನ್ನು ಪ್ರೀತಿಸಲು ಪ್ರೇರೇಪಿಸುವಂತಹ ರೋಮಿಯೋ-ಜ್ಯೂಲಿಯೆಟ್, ರಾಧಾ-ಕೃಷ್ಣರಿಗಿಂತಗಿಲಾದ ಪ್ರೇಮಕಥೆ. ಈ ಪ್ರೇಮಕಥೆಯ ಸೋನೆ ಮಳೆಯಲ್ಲಿ ತೊಯ್ಯಲು ಕಲಾಮಾಧ್ಯಮ ತಂಡ ಆಹ್ವಾನಿಸುತ್ತಿದೆ ಎಂದು ಎಂ.ಸಿ.ಲಂಕೇಶ್ ವಿವರಿಸಿದರು.