ನನ್ನ ಸ್ಪರ್ಧೆ ನಿಶ್ಚಿತ, ಅನುಮಾನ ಬೇಡ: ಕೆ.ಎಸ್‌.ಈಶ್ವರಪ್ಪ

| Published : Apr 05 2024, 01:02 AM IST / Updated: Apr 05 2024, 08:58 AM IST

ನನ್ನ ಸ್ಪರ್ಧೆ ನಿಶ್ಚಿತ, ಅನುಮಾನ ಬೇಡ: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅಮಿತ್‌ ಶಾ ಅವರು ಸೇರಿ ಪಕ್ಷದ ಹಿರಿಯರಿಗೆ ಗೌರವ ಕೊಡುವುದು ನನಗೆ ಕಲಿಸಿರುವ ಸಂಸ್ಕೃತಿ.

 ಶಿವಮೊಗ್ಗ :  ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರೆದಾಗ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ಪರೋಕ್ಷವಾಗಿ ನನ್ನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ನನ್ನ ಸ್ಪರ್ಧೆ ನಿಶ್ಚಿತ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್‌ ಶಾ ಅವರು ಸೇರಿ ಪಕ್ಷದ ಹಿರಿಯರಿಗೆ ಗೌರವ ಕೊಡುವುದು ನನಗೆ ಕಲಿಸಿರುವ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಆದರೆ ಮಾತುಕತೆ ನಡೆಯಲಿಲ್ಲ. ಹೀಗಾಗಿ ನನ್ನ ಸ್ಪರ್ಧೆ ಕುರಿತು ಕಾರ್ಯಕರ್ತರು ಇನ್ನು ಯಾವ ಅನುಮಾನವನ್ನು ಕೂಡ ಇಟ್ಟುಕೊಳ್ಳುವುದು ಬೇಡ ಎಂದರು.

ದೆಹಲಿಯಲ್ಲಿ ಸಂಘಟನಾ ಕಾರ್ಯದರ್ಶಿ‌ ರಾಜೇಶ್ ಜೀ ಮನೆಗೆ ಬರುವಂತೆ ತಮಗೆ ತಿಳಿಸಲಾಗಿತ್ತು. ಶಾ ರವರ ಕಚೇರಿಯಿಂದ ಕರೆ ಬಂದ ಬಳಿಕ ಮನೆಗೆ ಕರೆಯುವುದಾಗಿ ತಿಳಿಸಲಾಯಿತು. ಕೆಲ ಹೊತ್ತಿನ ಬಳಿಕ ಅಮಿತ್‌ ಶಾ ಭೇಟಿಯಾಗುವುದಿಲ್ಲ ಎಂದು ಮಾಹಿತಿ ನೀಡಲಾಯಿತು. ಈ ಮೂಲಕ ಅರ್ಥ ಶಿವಮೊಗ್ಗಕ್ಕೆ ವಾಪಸ್‌ ಹೋಗು, ಹೋಗಿ ನೀನು ಸ್ಪರ್ಧಿಸಿ ಗೆಲ್ಲು ಎಂಬ ಸಂದೇಶ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಅವರು ನನಗೆ ಕರೆ ಮಾಡಿದಾಗ ನನ್ನ ಸ್ಪರ್ಧೆ ಉದ್ದೇಶವನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ. ನಾನು ಆಕ್ಷೇಪಿಸಿರುವ ಪ್ರಶ್ನೆಗೆ ಅಮಿತ್ ಶಾ ಬಳಿ ಯಾವುದೇ ಉತ್ತರ ಇರಲಿಲ್ಲ. ಹಾಗಾಗಿ ಅವರು ಹೊರಡು ಎಂದಿದ್ದಾರೆ ಎಂದು ನಾನು ಅಂದು ಕೊಂಡಿದ್ದೇನೆ ಎಂದು ಹೇಳಿದರು.

ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದಾನೆ. ಅಮಿತ್‌ ಶಾ, ಮೋದಿ ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿ, ಗೆದ್ದು ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.

ಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಇ. ವಿಶ್ವಾಸ್‌, ಸುವರ್ಣ ಶಂಕರ್‌, ಆರ್. ಕೆ. ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ , ಶ್ರೀಕಾಂತ್, ಜಾಧವ್ , ಉಮಾ ಮೂರ್ತಿ, ಕಾಂಚಿನಕಟ್ಟೆ ಸತ್ಯನಾರಾಯಣ, ಆರತಿ ಅ.ಮಾ.ಪ್ರಕಾಶ್, ಮಹಾಲಿಂಗಶಾಸ್ತ್ರಿ, ಶ್ರೀಪಾಲ್, ಅನಿತಾ, ಸತೀಶ್, ರೇಖಾ, ಲಕ್ಷ್ಮೀದೇವಿ, ರಾಧಾ ರಾಮಚಂದ್ರ, ಚಿದಾನಂದ್, ಮಹೇಶ್ ಮತ್ತಿತರರು ಇದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರನ್ನು ಡಮ್ಮಿ ಎಂದು ಹಗುರವಾಗಿ ಹೇಳಿಲ್ಲ. ಗೀತಾ ನನ್ನ ಸಹೋದರಿ. ಆದರೆ ವಾಸ್ತವ ಸ್ಥಿತಿಯ ಆಧಾರದಲ್ಲಿ ಹೇಳಿದ್ದೇನೆ ಎಂದು ಈಶ್ವರಪ್ಪ ಸ್ಪಷ್ಟನೆ ನೀಡಿದರು.

ನಾನು ಮೊದಲ ಬಾರಿ ಸಂಘಟನೆ ಸೂಚನೆಯನ್ನು ಮೀರಿ ಸ್ಪರ್ಧೆ ಮಾಡುತ್ತಿದ್ದೇನೆ. ಇದಕ್ಕೆ ಕ್ಷಮೆಯನ್ನೂ ಕೋರಿದ್ದೇನೆ. ಮತದಾರರೇ ನನ್ನ ಸ್ಟಾರ್ ಪ್ರಚಾರಕರು ಎಂದರು. ಮೋದಿ ಫೋಟೋ ಬಳಸಿಕೊಳ್ಳಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಮೋದಿ ವಿಶ್ವ ನಾಯಕ, ಅವರು ನನ್ನ ಹೃದಯದ ದೇವರು. ಹೀಗಾಗಿ ನಾನು ಅವರ ಫೋಟೋ ಇಟ್ಟುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಮತ್ತೆ ದೆಹಲಿಯಿಂದ ಕರೆ ಬಂದರೆ ಎಂಬ ಪ್ರಶ್ನೆಗೆ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.