ನನ್ನ ಸಾವು ರಾಜಕೀಯ ಪ್ರೇರಿತ : ಬಿಜೆಪಿ ಕಾರ್ಯರ್ಕರ್ತ ವಿನಯ್‌ ಸೋಮಯ್ಯ ಡೆತ್‌ನೋಟ್‌ ?

| N/A | Published : Apr 05 2025, 12:46 AM IST / Updated: Apr 05 2025, 10:53 AM IST

ನನ್ನ ಸಾವು ರಾಜಕೀಯ ಪ್ರೇರಿತ : ಬಿಜೆಪಿ ಕಾರ್ಯರ್ಕರ್ತ ವಿನಯ್‌ ಸೋಮಯ್ಯ ಡೆತ್‌ನೋಟ್‌ ?
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕಾರ್ಯರ್ಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಮುನ್ನ ಸುದೀರ್ಘವಾಗಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಮಾದರಿಯ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

  ಬೆಂಗಳೂರು : ಬಿಜೆಪಿ ಕಾರ್ಯರ್ಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಮುನ್ನ ಸುದೀರ್ಘವಾಗಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಮಾದರಿಯ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಲ್ಲಿ ನನ್ನ ಸಾವಿಗೆ ಕೊಡಗಿನ ಕಾಂಗ್ರೆಸ್‌ ಮುಖಂಡ ತೆನ್ನೇರಾ ಮಹೀನಾ, ಶಾಸಕರಾದ ಪೊನ್ನಣ್ಣ ಹಾಗೂ ಮಂಥರ್‌ ಗೌಡರ ಕಿರಕುಳವೇ ಕಾರಣ ಎಂದು ಆರೋಪಿಸಲಾಗಿದೆ.

ಎರಡು ತಿಂಗಳಿಂದ ನನ್ನ ಮನಸ್ಸು ಹತೋಟಿಗೆ ಬರುತ್ತಿಲ್ಲ. ಯಾರೋ ಒಬ್ಬರು ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಾಕಿದ ಸಂದೇಶಕ್ಕೆ ಆ ಗ್ರೂಪ್‌ನ ಅಡ್ಮಿನ್‌ ಆದ ನನ್ನನ್ನು ಹೊಣೆ ಮಾಡಿ ರಾಜಕೀಯ ಪ್ರೇರಿತ ಎಫ್‌ಐಆರ್ ಹಾಕಿದ್ದರು. ಈ ಮುಖಾಂತರ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಬಿಂಬಿಸಿದ್ದರು. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೇರಾ ಮಹೀನಾ ಅವರೇ ನನ್ನ ಸಾವಿಗೆ ನೇರ ಹೊಣೆ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.

ನನ್ನ ವಿರುದ್ಧ ಎಫ್‌ಐಆರ್ ಹಾಕಿಸಿ ಕಿಡಿಗೇಡಿಗಳು ಎಂದು ಇಡೀ ಕೊಡಗಿಗೆ ವೈರಲ್‌ ಮಾಡಿದ್ದು, ಇದೇ ತೆನ್ನೇರಾ. ಈತನ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿರುವ ಮೊದಲ ವ್ಯಕ್ತಿ ನಾನಲ್ಲ. ಈ ತೆನ್ನೇರಾನ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಗೂ ಮಹೀನಾ ಹಾಗೂ ಅವರ ಮಡದಿಗೂ ಏನು ಸಂಬಂಧ ಎಂದು ಅವನನ್ನೇ ಕೇಳಿ. ಆ ಆತ್ಮಹತ್ಯೆ ಬಗ್ಗೆ ತನಿಖೆಯಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಾಮೀನು ಸಿಕ್ಕ ಬಳಿಕವೂ ಕಿರುಕುಳ:

ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಕೆಲ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ನನ್ನ ಮೇಲೆ ಎಫ್‌ಐಆರ್‌ ಹಾಕಿದರು. ಜಾಮೀನು ಸಿಕ್ಕ ಬಳಿಕವೂ ಮಡಿಕೇರಿ ಪೊಲೀಸರು ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ತೆರಳಿ ನನ್ನ ಬಂಧಿಸಲು ಹುಡುಕಾಟ ನಡೆಸಿದ್ದರು. ಇದೆಲ್ಲ ವಿರಾಜಪೇಟೆಯ ಶಾಸಕ ಪೊನ್ನಣ್ಣ ಆದೇಶದಂತೆ ನಡೆಯಿತು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕ ಪೊನ್ನಣ್ಣ ಸುಳ್ಳು ಆರೋಪ:

ಶಾಸಕ ಪೊನ್ನಣ್ಣ ಅವರು ನನ್ನ ಸ್ನೇಹಿತನ ಜತೆಗೆ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ನಾನು ಅವರಿಗೆ ಕರೆ ಮಾಡಿದಲ್ಲಿ ಕಾಲ್‌ ರೆಕಾರ್ಡ್‌ ತೋರಿಸಲಿ. ನಾನು ಪೊನ್ನಣ್ಣಗೆ ಮೆಸೇಜ್‌ ಮಾಡಿದ್ದು ನಿಜ. ಅದು ಕೂಡ ಯಾರೋ ಕಳುಹಿಸಿದ್ದ ಅಕ್ಷೇಪಾರ್ಹ ವಾಯ್ಸ್‌ ಮೆಸೇಜ್‌ ಅವರಿಗೆ ಕಳುಹಿಸಿದ್ದೆ. ಅದರ ಸ್ಕ್ರೀನ್‌ಶಾಟ್‌ ಕೂಡ ಕಳುಹಿಸಿದ್ದೆ. ಆದರೆ, ಅದರ ಬಗ್ಗೆ ಎಫ್‌ಐಆರ್‌ ಮಾಡದೆ ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್‌ಐಆರ್‌ ಹಾಕಿದ್ದು ಯಾವ ನ್ಯಾಯ ಎಂದು ವಿನಯ್‌ ಪ್ರಶ್ನಿಸಿದ್ದಾರೆ.

ಶಾಸಕ ಮಂಥರ್‌ ಗೌಡ ಗದರಿದ್ದರು:

ನಾನು ಕುಶಾಲನಗರದ ಸರ್ಕಾರಿ ಆಸ್ಪತ್ರೆ ಬಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಕೇಳಿದ್ದಕ್ಕೆ ಮಡಿಕೇರಿ ಶಾಸಕ ಮಂಥರ್‌ ಗೌಡ ನನಗೆ ಕರೆ ಮಾಡಿ, ಹಾಗೆಲ್ಲ ಏಕೆ ಗ್ರೂಪ್‌ಗೆ ಮೆಸೇಜ್‌ ಹಾಕುವೆ ಎಂದು ಗದರಿದ್ದರು. ಏನೇ ಇದ್ದರೂ ನನಗೇ ಹೇಳು. ಗ್ರೂಪ್‌ನಲ್ಲಿ ಹಾಕಿದರೆ ಸರಿ ಇರಲ್ಲ ಎಂದು ಹೇಳಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಹರೀಶ್‌ ಪೂವಯ್ಯ ಮಾ.11ರಂದು ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತಾ ತೇಜೋವಧೆ ಮಾಡಿದ್ದಾರೆ. ನಮ್ಮ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದ ಬಳಿಕವೂ ನಮ್ಮನ್ನು ಕಿಡಿಗೇಡಿಗಳು ಎಂದು ಕರೆಯುವುದು ಎಷ್ಟು ಸರಿ? ಕೆಲ ಮೂಲಗಳ ಪ್ರಕಾರ ನಮ್ಮ ಮೇಲೆ ರೌಡಿ ಶೀಟರ್‌ ತೆರೆಯಲು ಹುನ್ನಾರ ನಡೆದಿದೆ. ಇವರಿಗೆಲ್ಲ ಸರಿಯಾದ ಶಿಕ್ಷೆಯಾದರೆ ನನ್ನ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಎಂದಿದ್ದಾರೆ.

ನನ್ನ ಸಾವು ಪಾಠ:

ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ ಎಫ್‌ಐಆರ್‌ಗೆ ಒಂದು ಪಾಠವಾಗಬೇಕು. ಪೊಲೀಸರು ಸ್ವಲ್ಪ ವಿಚಾರ ಮಾಡಿ ಎಫ್‌ಐಆರ್‌ ಹಾಕಬೇಕು. ಯಾರೋ ಒಬ್ಬರು ದೂರು ನೀಡಿದರೂ ಎಂದು ಸುಖಾಸುಮ್ಮನೆ ಎಫ್‌ಐಆರ್ ಹಾಕುವುದು ಎಷ್ಟು ಸರಿ? ಈ ಮೆಸೇಜ್‌ ಅನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹಾಕಿ. ಇದರಿಂದ ಅಮಾಯಕರ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕುವುದು ಕೊನೆಗೊಳ್ಳಲಿ. ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ವಿನಯ್‌ ಸೋಮಯ್ಯ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.