ಪಕ್ಷದ ಕಾರ್ಯಕರ್ತನ ಆತ್ಮಹತ್ಯೆಗೆ ಕಾಂಗ್ರೆಸ್‌ ಶಾಸಕರು, ಅವರ ಆಪ್ತ ತನ್ನೀರ್‌ ಮೈನಾ ಕಾರಣ : ಬಿಜೆಪಿ

| N/A | Published : Apr 05 2025, 12:47 AM IST / Updated: Apr 05 2025, 10:49 AM IST

ಪಕ್ಷದ ಕಾರ್ಯಕರ್ತನ ಆತ್ಮಹತ್ಯೆಗೆ ಕಾಂಗ್ರೆಸ್‌ ಶಾಸಕರು, ಅವರ ಆಪ್ತ ತನ್ನೀರ್‌ ಮೈನಾ ಕಾರಣ : ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಶಾಸಕರು, ಅವರ ಆಪ್ತ ತನ್ನೀರ್‌ ಮೈನಾ ನಿರಂತರ ಕಿರುಕುಳದಿಂದಾಗಿಯೇ ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಬಿಜೆಪಿ ಮುಖಂಡರು ರಾಜ್ಯಸರ್ಕಾರವನ್ನು ಆಗ್ರಹಿಸಿದ್ದಾರೆ.

 ಬೆಂಗಳೂರು:  ಕಾಂಗ್ರೆಸ್‌ ಶಾಸಕರು, ಅವರ ಆಪ್ತ ತನ್ನೀರ್‌ ಮೈನಾ ನಿರಂತರ ಕಿರುಕುಳದಿಂದಾಗಿಯೇ ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಬಿಜೆಪಿ ಮುಖಂಡರು ರಾಜ್ಯಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಆಸ್ಪತ್ರೆಗೆ ಭೇಟಿ ನೀಡಿ ವಿನಯ್‌ ಸೋಮಯ್ಯಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಆರ್‌. ಅಶೋಕ್‌, ಮರಣ ಪತ್ರದಲ್ಲಿ ಶಾಸಕರಾದ ಪೊನ್ನಣ್ಣ, ಮಂಥರ್‌ ಗೌಡ ಮತ್ತು ತನ್ನೀರ್ ಮೈನಾ ಹೆಸರು ಉಲ್ಲೇಖಿಸಲಾಗಿದೆ. ಎಫ್‌ಐಆರ್‌ನಲ್ಲಿ ಅವರ ಹೆಸರನ್ನು ದಾಖಲಿಸಬೇಕು. ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಜಾಲತಾಣದ ಒಂದು ಪೋಸ್ಟ್‌ ಅನ್ನು ಫಾರ್ವರ್ಡ್‌ ಮಾಡಿದ್ದಕ್ಕೆ ಕಿರುಕುಳ ನೀಡಲಾಗಿದೆ. ಇದಕ್ಕೆ ದಾಖಲೆಗಳಿದ್ದು, ಮರಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸಕರು ಸಹ ಬೆದರಿಕೆ ಹಾಕಿದ್ದಾರೆ. ಪೊಲೀಸ್‌ ಠಾಣೆಗಳನ್ನು ಕಾಂಗ್ರೆಸ್‌ ಕಚೇರಿ ಮಾಡಿಕೊಳ್ಳಲಾಗಿದೆ. ಪೊಲೀಸರ ಮೇಲೆ ಒತ್ತಡ ಹೇರುವ ಮೂಲಕ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ಎಸ್ಪಿ ನೇರ ಹೊಣೆ ಇದೆ ಎಂಬುದು ಗೊತ್ತಾಗಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಸಾವಿಗೆ ನ್ಯಾಯ ಒದಗಿಸಲಿ: ವಿಜಯೇಂದ್ರ

ಶಿಕಾರಿಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ವಿನಯ್ ಸೋಮಯ್ಯ ಆತ್ಮಹತ್ಯೆಗೆ ಅಲ್ಲಿನ ಶಾಸಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ವಿನಯ್ ಸೋಮಯ್ಯ ತಮ್ಮ ಸಾವಿಗೆ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರ ಕಿರುಕುಳ ಕಾರಣ ಎಂದು ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕಷವಾಗಿ ತನಿಖೆ ಕೈಗೊಂಡು ವಿನಯ್‌ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ವಿನಯ್‌ ಸೋಮಯ್ಯ ಅವರಿಗೆ ತೀವ್ರ ಕಿರುಕುಳ ನೀಡಿ ಅವರ ಆತ್ಮಹತ್ಯೆಗೆ ಕಾರಣವಾದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.