ಸಾರಾಂಶ
ಒಣಗುತ್ತಿರುವ ಬೆಳೆಗಳ ಸಂರಕ್ಷಿಸಿಕೊಳ್ಳಲು ತುರ್ತಾಗಿ ನಾರಾಯಣಪುರದ ಎಡ-ಬಲದಂಡೆ ಕಾಲುವೆಗಳಿಗೆ ಬಸವಸಾಗರ ಜಲಾಶಯದ ಮೂಲಕ ನೀರು ಹರಿಸುವ ವಿಚಾರ ರಾಜಕೀಯ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದ್ದು, ಆಡಳಿತ ಮತ್ತು ವಿಪಕ್ಷ ನಾಯಕರ ಹೈಡ್ರಾಮಾ ಬಳಿಕ ಕೊನೆಗೂ ನೀರು ಹರಿಸಲು ಸರ್ಕಾರ ಮುಂದಾಗಿದೆ.
ಯಾದಗಿರಿ/ಹುಣಸಗಿ : ಒಣಗುತ್ತಿರುವ ಬೆಳೆಗಳ ಸಂರಕ್ಷಿಸಿಕೊಳ್ಳಲು ತುರ್ತಾಗಿ ನಾರಾಯಣಪುರದ ಎಡ-ಬಲದಂಡೆ ಕಾಲುವೆಗಳಿಗೆ ಬಸವಸಾಗರ ಜಲಾಶಯದ ಮೂಲಕ ನೀರು ಹರಿಸುವ ವಿಚಾರ ರಾಜಕೀಯ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದ್ದು, ಆಡಳಿತ ಮತ್ತು ವಿಪಕ್ಷ ನಾಯಕರ ಹೈಡ್ರಾಮಾ ಬಳಿಕ ಕೊನೆಗೂ ನೀರು ಹರಿಸಲು ಸರ್ಕಾರ ಮುಂದಾಗಿದೆ.
ಗುರುವಾರ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠ ಏ.4 ರಿಂದ ಏ.6ರವರೆಗೆ ನೀರು ಹರಿಸುವಂತೆ ಆದೇಶಿಸಿತ್ತು. ಈ ಆದೇಶಕ್ಕೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿ ನೀರು ಹರಿಯದಂತೆ ಮಾಡಿತ್ತು. ಈ ನಡೆಯಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ನೀರು ಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಇತ್ತ ಮಾಜಿ ಸಚಿವ ರಾಜೂಗೌಡ ಅವರು ಸುದ್ದಿಗೋಷ್ಠಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿ, ರೈತರಿಗೆ ನೀರು ಹರಿಸುವ ವಿಚಾರದಲ್ಲಿ ಸರ್ಕಾರ ತಡೆ ತಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೈತರು ಹಾಗೂ ವಿಪಕ್ಷದವರ ಆಕ್ರೋಶದಿಂದ ಮಜುಗರಕ್ಕೊಳಗಾದ ಸರ್ಕಾರ, ಶುಕ್ರವಾರ ರಾತ್ರಿ ಮಧ್ಯಂತರ ತಡೆ ಅರ್ಜಿ ವಾಪಸ್ ಪಡೆದಿದ್ದು, ನೀರು ಹರಿಸಲು ಮುಂದಾಗಿದೆ.
ರೈತರು ಆತಂಕ ಪಡಬೇಕಿಲ್ಲ. ನೀರು ಹರಿಸಲಾಗುವುದು, ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸಚಿವ ದರ್ಶನಾಪುರ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಕಾವೇರಿಗೆ ನೀಡುವ ಮಹತ್ವ ಕೃಷ್ಣೆಗೇಕಿಲ್ಲ
ಕಾಲುವೆಗಳಿಗೆ ನೀರು ಹರಿಸುವ ಕುರಿತು, ಕಳೆದ 10-15 ದಿನಗಳಿಂದ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ ಭಾಗದಲ್ಲಿನ ರೈತ ಸಂಘಟನೆಗಳು ಹೋರಾಟ ನಡೆಸಿವೆ. ಜಲಾಶಯದಲ್ಲಿ ಕುಡಿವ ನೀರಿಗಾಗಿ ನೀರನ್ನು ಮೀಸಲಿಟ್ಟಿದೆ ಎಂದು ಸರ್ಕಾರ ಪ್ರತಿಕ್ರಿಯಿಸಿತ್ತು. ಕಾವೇರಿಗೆ ನೀಡುವ ಮಹತ್ವ ಕೃಷ್ಣೆಗೇಕಿಲ್ಲ ಎಂದು ರೈತ ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸರ್ಕಾರದ ನಡೆ ವಿರುದ್ಧ ಮಾಜಿ ಸಚಿವ ರಾಜೂಗೌಡ ಮತ್ತು ನಾಲ್ವರ ತಂಡ ಗುರುವಾರ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿ, ಒಣಗುತ್ತಿರುವ ಬೆಳೆಗಳ ರಕ್ಷಿಸಲು ತುರ್ತಾಗಿ ನೀರು ಬಿಡುವಂತೆ ಕೋರಿದ್ದರು.
ಸರ್ಕಾರದ ನಿದೇರ್ಶನ ನೀಡಿದ ಕೂಡಲೇ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ಪ್ರತಿದಿನ 0.8 ಟಿಎಂಸಿ ನೀರಿನಂತೆ 3 ದಿನ ಒಟ್ಟು 2.5 ಟಿಎಂಸಿ ನೀರು ಹರಿಸುತ್ತೇವೆ.
- ಮಂಜುನಾಥ್, ಅಧೀಕ್ಷಕ ಅಭಿಯಂತರ, ನಾರಾಯಣಪುರ ಜಲಾಶಯ.