ಸಾರಾಂಶ
ಬೆಳಗಾವಿ ಅಧಿವೇಶನ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮೇಲ್ಮನೆ ಸದಸ್ಯ ಸಿ.ಟಿ.ರವಿ ನಡುವಿನ ಆಕ್ಷೇಪಾರ್ಹ ಹೇಳಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿರುವ ಸರ್ಕಾರದ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಬೆಳಗಾವಿ ಅಧಿವೇಶನ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮೇಲ್ಮನೆ ಸದಸ್ಯ ಸಿ.ಟಿ.ರವಿ ನಡುವಿನ ಆಕ್ಷೇಪಾರ್ಹ ಹೇಳಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿರುವ ಸರ್ಕಾರದ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಕ್ರಮ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಸದನದಲ್ಲಿ ನಡೆದ ಘಟನೆಯಲ್ಲಿ ಸಭಾಪತಿ ತೀರ್ಪೇ ಅಂತಿಮ ಎಂದು ಹೇಳಿದ್ದಾರೆ.
ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿರುವ ಹೊರಟ್ಟಿ ಅವರು, ಅಧಿವೇಶನದಲ್ಲಿ ನಡೆದ ಯಾವ ವಿಷಯ ಸಿಐಡಿ ತನಿಖೆಗೆ ನೀಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದನದಲ್ಲಿ ನಡೆದ ಘಟನೆಯನ್ನು ಚರ್ಚಿಸುವ ಮತ್ತು ಮುಕ್ತಾಯ ಮಾಡುವ ಕುರಿತು ತೀರ್ಮಾನಿಸುವ ಸಾರ್ವಭೌಮತ್ವ ಅಧಿಕಾರ ಸದನಕ್ಕೆ ಇರುತ್ತದೆ. ಡಿ.19ರಂದು ನಡೆದ ಘಟನೆಗೆ ಸಂಬಂಧಿಸಿ ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ. ಸದನದ ಆವರಣದೊಳಗೆ ಶಿಸ್ತು ಸಂರಕ್ಷಿಸುವುದು, ಕಲಾಪ ವ್ಯವಹಾರ ನಿಯಂತ್ರಿಸುವ ಅಧಿಕಾರ ಸಭಾಪತಿಗಿದೆ. ಸಭಾಪತಿ ತೀರ್ಪೇ ಇದರಲ್ಲಿ ಅಂತಿಮ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂವಿಧಾನಿಕ ಹುದ್ದೆಯಾಗಿರುವ ಸಭಾಪತಿಯವರಿಗೆ ಸಂಸದೀಯ ಪದ್ಧತಿ ಮತ್ತು ಪ್ರಕ್ರಿಯೆಯಲ್ಲಿ ಸಾರ್ವಭೌಮತ್ವ ಅಧಿಕಾರ ಇದೆ. ಸದನದಲ್ಲಿ ಅವ್ಯವಸ್ಥಿತ ನಡತೆಗಾಗಿ ಅಥವಾ ಇತರೆ ನಿಂದನೆಗಳಿಗಾಗಿ ಅದರ ಸದಸ್ಯರನ್ನು ಶಿಕ್ಷಿಸುವ ಅಧಿಕಾರ ಸದನಕ್ಕೆ ಇರುತ್ತದೆ. ಆದರೆ, ಸಂಸದೀಯ ಪದ್ಧತಿ ಮತ್ತು ಪ್ರಕ್ರಿಯೆಯಲ್ಲಿ ಹಾಗೂ ಸಂವಿಧಾನದಲ್ಲಿ ಸಭಾಪತಿಯವರಿಗೆ ಇರುವ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷ ಉಂಟಾಗುವ ಪ್ರಮೇಯ ನಿರ್ಮಾಣವಾಗಬಾರದು. ವಿಧಾನಮಂಡಲದ ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ಬರುವುದು ತಮಗೂ ತಿಳಿದ ವಿಚಾರ. ಕಾರ್ಯಾಂಗ ಮತ್ತು ಶಾಸಕಾಂಗ ಸಂವಿಧಾನದ ಚೌಕಟ್ಟಿನಲ್ಲಿ ಪರಸ್ಪರ ಗೌರವದೊಂದಿಗೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ತಾವು ಸಹ ಸಂವಿಧಾನದ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವುಳ್ಳರಾಗಿದ್ದು, ಸಂವಿಧಾನದಡಿ ಕರ್ತವ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸ ಇದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಸಂವಿಧಾನದ ಚೌಕಟ್ಟಿನಲ್ಲಿ ಶಾಸಕರಿಗೆ ಕಲ್ಪಿಸಿರುವ ವಿಶೇಷ ಹಕ್ಕುಗಳು ಮತ್ತು ಸಂಸದೀಯ ಪದ್ಧತಿ ಮತ್ತು ಪ್ರಕ್ರಿಯೆಗಳಲ್ಲಿ ಸಭಾಪತಿಯವರಿಗೆ ಇರುವ ಹಕ್ಕುಗಳನ್ನು ಮತ್ತು ಸದನದ ಸಾರ್ವಭೌಮತ್ವವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ತಾವು ನಿರ್ವಹಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಡಾ.ಪರಮೇಶ್ವರ್ ಅವರಿಗೆ ಬರೆದ ಪತ್ರದಲ್ಲಿ ಹೊರಟ್ಟಿ ತಿಳಿಸಿದ್ದಾರೆ.