ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕರ್ನಾಟಕ ರಕ್ಷಣಾ ವೇದಿಕೆಯ ಅಶೋಕ ಹಾರಿವಾಳ ನೇತೃತ್ವದಲ್ಲಿ ಕೆಲವರು ಸೂಕ್ತ ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ನನ್ನ ವಿರುದ್ಧ ಸುಳ್ಳು, ಆಧಾರರಹಿತ ಹಾಗೂ ಮಾನಹಾನಿಕಾರಕ ಆರೋಪಗಳ ಪತ್ರ ಬಿಡುಗಡೆ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದೇನೆ ಎಂದು ಹೆಸ್ಕಾಂ ಇಲಾಖೆಯ ಬಸವನಬಾಗೇವಾಡಿ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರ ಸಿದ್ದರಾಮ ಬಿರಾದಾರ ತಿಳಿಸಿದರು.ಪಟ್ಟಣದ ಹೆಸ್ಕಾಂ ಇಲಾಖೆಯ ವಿಭಾಗದ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನಧಿಕೃತವಾಗಿ ಬಫರ್ ಸ್ಟಾಕ್ (ತುರ್ತು ಪರಿಸ್ಥಿತಿಯ) ಟಿಸಿ ದುರುಪಯೋಗ ಹಾಗೂ ಕೆ.ಇ.ಆರ್‌.ಸಿ ಎಸ್ಒಪಿ ಸಮಯದ ಸಂಪೂರ್ಣ ಉಲ್ಲಂಘನೆಯ ಆರೋಪ ಮಾಡಿ ನನ್ನನ್ನು ಅಮಾನತು ಮಾಡುವಂತೆ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಫೇಸ್‌ಬುಕ್ ಲೈವ್ ಮೂಲಕ ಸಾರ್ವಜನಿಕರು ಹಾಗೂ ರೈತ ಸಮುದಾಯದಲ್ಲಿ ನನ್ನ ಹಾಗೂ ಹೆಸ್ಕಾಂ ಇಲಾಖೆಯ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಅಪಪ್ರಚಾರ ನಡೆಸಲಾಗಿದೆ. ಇದರಿಂದ ನನ್ನ ವೈಯಕ್ತಿಕ ಗೌರವಕ್ಕೆ ಹಾಗೂ ಹೆಸ್ಕಾಂ ಇಲಾಖೆಯ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.

ಅಶೋಕ ಹಾರಿವಾಳ ಬಿಡುಗಡೆ ಮಾಡಿರುವ ಪತ್ರ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅವರ ಫೇಸ್ ಬುಕ್ ಲೈವ್ ವಿಡಿಯೋ ತನಿಖೆಗೆ ಒಳಪಡಿಸಿ ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಬೇಕು. ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳು, ಸಾಕ್ಷ್ಯಾಧಾರ ಸಲ್ಲಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.