ಬರದಿಂದ ರೈತರು ತತ್ತರಿಸಿದ್ದು ಎಕರೆಗೆ ₹ 50 ಸಾವಿರ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಸರ್ಕಾರಕ್ಕೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದರು.

ನವಲಗುಂದ:

ತಮ್ಮ ಉಸಿರುವ ವರೆಗೂ ರೈತ ಸಮುದಾಯದ ಪರವಾಗಿ ಹೋರಾಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.ಪಟ್ಟಣದಲ್ಲಿ ರೈತ ಹುತಾತ್ಮ ದಿನದ ಅಂಗವಾಗಿ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಈ ವೇಳೆ ರೈತರು ನೀಡಿದ ಮನವಿ ಸ್ವೀಕರಿಸಿದ ಅವರು, ಬರದಿಂದ ರೈತರು ತತ್ತರಿಸಿದ್ದು ಎಕರೆಗೆ ₹ 50 ಸಾವಿರ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಬೆಳೆವಿಮೆ ಹಣ ಪ್ರತಿಯೊಬ್ಬ ರೈತರಿಗೆ ಕೈಸೇರಬೇಕೆಂದ ಮುನೇನಕೊಪ್ಪ, ಕಂದಾಯ, ಕೃಷಿ, ಸಂಖ್ಯಾಶಾಸ್ತ್ರ ಹಾಗೂ ತೋಟಗಾರಿಕೆ ಇಲಾಖೆಗಳು ಯಾವುದೇ ಲೋಪವೆಸಗದೆ ನಿಖರ ವರದಿ ಸಲ್ಲಿಸಬೇಕು. ಈ 4 ಇಲಾಖೆಗಳು ತಪ್ಪು ಮಾಡದಂತೆ ಕಾಂಗ್ರೆಸ್ ಸರ್ಕಾರ ಜಾಗ್ರತೆ ವಹಿಸಬೇಕು. ರೈತರ ಹೊಟ್ಟೆಗೆ ಹೊಡೆಯುವ ಕೆಲಸವಾದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಳಸಾ-ಬಂಡೂರಿ ಯೋಜನೆಗೆ ಎದುರಾಗಿರುವ ವನ್ಯಜೀವಿ ಮಂಡಳಿಯ ತೊಡಕುಗಳನ್ನು ನಿವಾರಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜವಾಬ್ದಾರಿ ವಹಿಸಿಕೊಂಡು ಶ್ರಮಿಸುತ್ತಿದ್ದಾರೆ. ನಾವು ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದು, ತಾಂತ್ರಿಕ ಮತ್ತು ಕಾನೂನು ತೊಡಕು ನಿವಾರಿಸಲು ಶ್ರಮಿಸುತ್ತಿದ್ದೇವೆ. ಕಳಸಾ-ಬಂಡೂರಿ ನೀರು ರೈತರ ಜಮೀನಿಗೆ ಹರಿಯುವ ವರೆಗೆ, ನಾನು ನಿಮ್ಮ ಬೆನ್ನಲುಬಾಗಿ ನಿಲ್ಲುತ್ತೇನೆ ಎಂದರು.

​ರೈತ ಶಕ್ತಿಯ ಮಹಾಸಂಗಮ:

ಕಾರ್ಯಕ್ರಮದಲ್ಲಿ ನೂರಾರು ರೈತರು ಹಾಗೂ ಸ್ಥಳೀಯ ಮುಖಂಡರು ಒಂದಾಗಿ ರೈತ ಒಕ್ಕೂಟದ ಶಕ್ತಿಯನ್ನು ಪ್ರದರ್ಶಿಸಿದರು. ​ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ಶಂಕರಗೌಡ ಬಾಳಗೌಡ್ರ, ಷಣ್ಮುಖ ಗುರಿಕಾರ, ಗಂಗಣ್ಣ ಮನಮಿ, ಬಸಣ್ಣ ಬೆಳವಣಕಿ, ಮಲ್ಲನಗೌಡ ರಾಟಿಮನಿ, ಸಿದ್ದಣ್ಣ ಕಿಟಗೇರಿ ಸೇರಿದಂತೆ ರೈತಬಾಂಧವರು ಭಾಗವಹಿಸಿದ್ದರು.