ಸಮಾಜ ಕಲೆ ಸಂಸ್ಕೃತಿಗಾಗಿ ನನ್ನ ಬದುಕು: ಡಾ. ತಲ್ಲೂರು

| Published : Oct 09 2025, 02:01 AM IST

ಸಾರಾಂಶ

ಕೆಲವರಿಗೆ ಪ್ರಾಯವಾಗುವುದೇ ಒಂದು ಸಾಧನೆಯಾದರೇ, ಇನ್ನು ಕೆಲವರಿಗೆ ಸಾಧನೆಯೇ ಕಳಸಪ್ರಾಯವಾಗುತ್ತದೆ. ಅಂತಹ ವಿರಳರಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟರು ಒಬ್ಬರು. ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಶೆಟ್ಟರು ತಮ್ಮ ಬದುಕನ್ನು ಸಮಾಜ - ಕಲೆ - ಸಂಸ್ಕೃತಿಗಾಗಿ ಮುಡಿಪಾಗಿಟ್ಟವರು.

ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಾರ್ಥಕ ಬದುಕಿನಲ್ಲೀಗ ಅಮೃತ ಮಹೋತ್ಸವ

ಕೆಲವರಿಗೆ ಪ್ರಾಯವಾಗುವುದೇ ಒಂದು ಸಾಧನೆಯಾದರೇ, ಇನ್ನು ಕೆಲವರಿಗೆ ಸಾಧನೆಯೇ ಕಳಸಪ್ರಾಯವಾಗುತ್ತದೆ. ಅಂತಹ ವಿರಳರಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ಟರು ಒಬ್ಬರು. ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಶೆಟ್ಟರು ತಮ್ಮ ಬದುಕನ್ನು ಸಮಾಜ - ಕಲೆ - ಸಂಸ್ಕೃತಿಗಾಗಿ ಮುಡಿಪಾಗಿಟ್ಟವರು. ಆ ಮೂಲಕ ಜೀವನ ಸಾರ್ಥಕತೆಯನ್ನು ಕಂಡವರು. ಹತ್ತಾರು ಸಂಘಸಂಸ್ಥೆಗಳಲ್ಲಿ, ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ, ತಮ್ಮ ಜೀವನ - ಸಾಧನೆಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.ನಿಮ್ಮ ಹುಟ್ಟು, ಹಿನ್ನೆಲೆ ಏನು?

ನಾನು ಹುಟ್ಟಿದ್ದು ಕುಂದಾಪುರದ ತಲ್ಲೂರು ಗ್ರಾಮದಲ್ಲಿ. ತಂದೆ ಅಧ್ಯಾಪಕರಾಗಿದ್ದ ಅಣ್ಣಯ್ಯ ಶೆಟ್ಟಿ, ತಾಯಿ ಕನಕಾ ಶೆಟ್ಟಿ. ನಾನು ಅವರ ದ್ವಿತೀಯ ಪುತ್ರ. ನನ್ನ ಬಾಲ್ಯ, ಯೌವನ ಕಳೆದದ್ದು, ಉದ್ಯೋಗ ವ್ಯವಹಾರ ನಡೆಸಿದ್ದು ಎಲ್ಲವೂ ಉಡುಪಿಯಲ್ಲಿ. ಆದರೇ ‘ತಲ್ಲೂರು’ ಇಂದಿಗೂ ನನ್ನ ಹೆಸರಿನ ಜೊತೆ ಇದೆ.

ಉದ್ಯಮಿಯಾಗಿ ನಿಮ್ಮ ಅನುಭವ ಹೇಳಿ?

ನಾನು ಮೂಲತಃ ಹೋಟೆಲ್ ಉದ್ಯಮಿ. ಹತ್ತಾರು ಹೋಟೆಲ್‌ಗಳ ಮೂಲಕ ಸಾವಿರಾರು ಜನರಿಗೆ ಆತಿಥ್ಯದ ಭಾಗ್ಯ ನನಗೆ ಸಿಕ್ಕಿದೆ. ಜೊತೆಗೆ ಇತರ ಕ್ಷೇತ್ರಗಳ‍ಲ್ಲಿಯೂ ಯಶಸ್ವಿಯಾಗಿದ್ದೇನೆ. ನನ್ನ ಔದ್ಯಮಿಕ ಸಾಧನೆಗೆ 2016ರಲ್ಲಿ ‘ಕರ್ನಾಟಕ ಹೋಟೆಲ್‌ - ಉಪಾಹಾರ ಮಂದಿರಗಳ ಸಂಘದ ವತಿಯಿಂದ ‘ಉದ್ಯಮರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ ಅಸೋಸಿಯೇಶನ್‌ನ ಪ್ರಶಸ್ತಿಯೂ ಸಿಕ್ಕಿದೆ.

ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಹೇಗೆ ಸೇರಿದಿರಿ?

ಲಯನ್ಸ್ ಕ್ಲಬ್‌ನೊಂದಿಗೆ ನನ್ನ ಸಾಮಾಜಿಕ ಸೇವೆ ಆರಂಭವಾದದ್ದು. ಅದರಲ್ಲಿ ಸಕ್ರಿಯನಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ‘ಲಯನ್ಸ್ ಗವರ್ನರ್’ ಆಗಿಯೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಆಗ ಮಾಡಿದ ಸಾಧನೆಗಾಗಿ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ‘ಇಂಟರ್ ನ್ಯಾಶನಲ್ ಪ್ರೆಸಿಡೆಂಟ್ ಅಪ್ರಿಸಿಯೇಶನ್ ಅವಾರ್ಡ್’ ವಿಶ್ವಮಟ್ಟದ ಪ್ರಶಸ್ತಿಯೂ ಸಿಕ್ಕಿತು. ಇಂಟರ್ನ್ಯಾಶನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ವತಿಯಿಂದ ‘ಸ್ಮೈಲ್ ಫ್ಯೂಚರ್ ಅವಾರ್ಡ್’ ಕೂಡ ದೊರಕಿದೆ. ಈ ಸೇವೆಗಳು ನನಗೆ ಬಹಳ ತೃಪ್ತಿ ಕೊಟ್ಟಿವೆ.

ಯಕ್ಷಗಾನದಲ್ಲಿ ಹೇಗೆ ಆಸಕ್ತಿ ಮೂಡಿತು?

ನನಗೆ ಬಾಲ್ಯದಿಂದಲೂ ಯಕ್ಷಗಾನದ ಸೆಳೆತವಿತ್ತು. ಆದರೆ ಕಲಿಯುವ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಪ್ರಸಿದ್ಧ ಕಲಾವಿದರ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದೆ. ಉಡುಪಿಯ ‘ಯಕ್ಷಗಾನ ಕಲಾರಂಗ’ ಸಂಸ್ಥೆಯ ಅಧ್ಯಕ್ಷನಾಗಿ 7 ವರ್ಷ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದ ಪೋಷಕನಾಗಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶವಾಯಿತು.

ನೀವೂ ಯಕ್ಷಗಾನ ಕಲಿತಿದ್ದಿರಲ್ಲ?

ಯಕ್ಷಗಾನ ಕಲಾವಿದನಾಗಬೇಕೆಂಬ ಹಂಬಲ ಇತ್ತಾದರೂ ಅದು ವ್ಯವಹಾರಗಳ ಮಧ್ಯೆ ಸಾಧ್ಯವಾಗಲಿಲ್ಲ. ಆದರೆ ಆಸೆ ಬಿಡಲಿಲ್ಲ, 60ನೇ ವಯಸ್ಸಿನಲ್ಲಿ ಹಠ ಹಿಡಿದು ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ, ನಾಟ್ಯಾಭಿನಯ, ಮಾತುಗಾರಿಕೆ ಕಲಿತೆ. ಸುಮಾರು ನಾಲ್ನೂರಕ್ಕೂ ಅಧಿಕ ಪಾತ್ರಗಳನ್ನು ಮಾಡಿದ್ದೇನೆ. ಈ ಮೂಲಕವೂ ಯಕ್ಷಗಾನ ಕಲಾಮಾತೆಗೆ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ನನಗಿದೆ.

ನಾಟಕ - ಜನಪದದ ಸೆಳೆತ ಹೇಗಾಯಿತು?

ನಾಟಕ ನನ್ನ ಇನ್ನೊಂದು ಆಸಕ್ತಿಯ ಕ್ಷೇತ್ರ. 15 ವರ್ಷ ಪ್ರತಿಷ್ಠಿತ ‘ರಂಗಭೂಮಿ’ ಸಂಸ್ಥೆಯ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದೆ. ಅದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಈಗ ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷನಾಗಿಯೂ ರಾಜ್ಯಾದ್ಯಂತ ಜಾನಪದಕ್ಕೆ ಸೇವೆ ಸಲ್ಲಿಸುವ, ಕೋವಿಡ್ ಸಂಕಷ್ಟದಲ್ಲಿ ನೂರಾರು ಜಾನಪದ ಕಲಾವಿದರಿಗೆ ಸಹಾಯಹಸ್ತ ಚಾಚುವ ಅಪೂರ್ವಅವಕಾಶ ನನಗೆ ಸಿಕ್ಕಿದೆ.

ನಮಗೆ ಸಾಹಿತ್ಯಾಸಕ್ತಿ ಹೇಗೆ ಬೆಳೆಯಿತು?

ಕಲೆ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಸಾಹಿತಿಗಳ ಒಡನಾಟ ಸಹಜವಾಗಿಯೇ ಆಯಿತು. ಇದು ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು. ಸಾಮಾಜಿಕ ಜಾಲತಾಣದಲ್ಲಿ ಕಳೆದುಹೋಗುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶ್ರೀಮಂತ ಪರಂಪರೆಯನ್ನು ಮನದಟ್ಟು ಮಾಡುವ, ನೈತಿಕ, ಸಾಮಾಜಿಕ ಮೌಲ್ಯ ಬಿತ್ತುವುದಕ್ಕಾಗಿ ಒಂದಷ್ಟು ಕೃತಿಗಳನ್ನು ರಚಿಸಿದೆ.

ದಾರಿದೀಪ, ಬಾಳಬೆಳಕು, ಹೊಂಬೆಳಕು, ಮುಂಬೆಳಕು, ಪಾಥೇಯ, ಹೊಂಗಿರಣ, ಪಥದೀಪಿಕಾ, ಪರಂಪರಾಗತ, ಬರಹತರಹ, ಧರ್ಮಂಚರ, ಕಲಾಸಂಚಯ, ನಿತ್ಯಸತ್ಯ ಇತ್ಯಾದಿ ಕೃತಿಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನ ಮಾಡುತಿದ್ದೇನೆ. ‘ಕಲಾಸಂಚಯ’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಬಹುಮಾನ ಸಿಕ್ಕಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಡು’ ಗೌರವ ಕೂಡ ಸಿಕ್ಕಿದೆ. ಈ ಮಾನಸನ್ಮಾನಗಳಿಂದ ನಾನು ಕೃತಾರ್ಥನಾಗಿದ್ದೇನೆ.

ನಿಮಗೆ ಒಲಿದ ಪ್ರಶಸ್ತಿಗಳು ಯಾವುವು?

ಬೇಕಾದಷ್ಟು ಪ್ರಶಸ್ತಿಗಳು, ಸನ್ಮಾನಗಳಾಗಿವೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ 2022ರಲ್ಲಿ ಮತ್ತು 2018ರಲ್ಲಿ ಪುಣೆಯ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿವೆ.

ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕೈರಳಿ ಶ್ರೀ ಪ್ರಶಸ್ತಿ, ಕರ್ನಾಟಕ ರತ್ನ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ಸಮಾಜ ಸೇವಾರತ್ನ ಗೌರವ, ಬೆಂಗಳೂರಿನಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ‘ಸಿದ್ಧಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ’ಗಳು ಒಲಿದಿವೆ.

ಫ್ಯಾಮಿಲಿ ಟ್ರಸ್ಟ್ ನ ಆರಂಭ ಹೇಗೆ?

ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹುಟ್ಟು ಹಾಕಿದ್ದೇವೆ. ಇದರ ಮೂಲಕ ನನ್ನ ಪೂಜ್ಯ ಮಾತಾಪಿತರ ಸ್ಮರಣಾರ್ಥ ‘ಯಕ್ಷಗಾನ ವಿದ್ವಾಂಸ ಪ್ರಶಸ್ತಿ’ಯನ್ನು ನೀಡುತ್ತಿದ್ದೇವೆ. ‘ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದೇವೆ. ಟ್ರಸ್ಟ್ ಮೂಲಕ ಈಗಾಗಲೇ ಅನೇಕ ಕಲೆ ಸಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮುಂದೆ ಇನ್ನಷ್ಟು ಕಾರ್ಯಕ್ರಮಗಳು ನಡೆಸಲಿದ್ದೇವೆ. ನನ್ನ ಪತ್ನಿ ಗಿರಿಜಾ ಶಿವರಾಮ ಶೆಟ್ಟಿ ಮತ್ತು ನಾಲ್ವರು ಮಕ್ಕಳು ಸೇರಿ ಈ ಟ್ರಸ್ಟ್ ಮುನ್ನಡೆಸುತಿದ್ದೇವೆ.

ಗುರುತೇ ಇಲ್ಲದ ಯಕ್ಷ ಪ್ರತಿಭೆಗಳನ್ನು ಗುರುತಿಸಿದ್ದೇನೆ!ಪ್ರಸ್ತುತ ಕರ್ನಾಟಕ ಸರ್ಕಾರ ನನ್ನನ್ನು ‘ಕರ್ನಾಟಕ ಯಕ್ಷಗಾನ ಅಕಾಡೆಮಿ’ಯ ಅಧ್ಯಕ್ಷರನ್ನಾಗಿ ಮಾಡಿದೆ. ಅಕಾಡೆಮಿಯ ಸವಲತ್ತು, ಗೌರವಗಳು ಅರ್ಹ ಕಲಾವಿದರಿಗೆ ಸಿಗಬೇಕು, ಅಕಾಡೆಮಿಯ ಕಾರ್ಯ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತಿದ್ದೇನೆ.

ಅಕಾಡೆಮಿ ವ್ಯಾಪ್ತಿಯ ಕರಾವಳಿ, ಮಲೆನಾಡಿನ 5 ಜಿಲ್ಲೆಗಳಲ್ಲದೇ, ಹಾಸನ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ 2 ವರ್ಷಗಳಿಂದ 100ಕ್ಕೂ ಹೆಚ್ಚು ವಿಚಾರಗೋಷ್ಠಿ, ಕಮ್ಮಟ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಅಶಕ್ತ ಕಲಾವಿದರಿಗೆ ಸಹಾಯಹಸ್ತ ಸೇರಿ 1 ಕೋಟಿ ರು.ಗೂ ಹೆಚ್ಚುಅನುದಾನ ನೀಡಿದ್ದೇವೆ.

ಯಕ್ಷಗಾನ ರಂಗದಲ್ಲಿ ಗುರುತಿಸಲ್ಪಡದ ಪ್ರತಿಭೆಗಳನ್ನು ಗುರುತಿಸಿ, ಅವರಿಂದ ಅರ್ಜಿ ಪಡೆಯದೇ ಪ್ರಶಸ್ತಿಗಳನ್ನು ನೀಡಿದ್ದೇವೆ. ಅಕಾಡೆಮಿ ಇರುವುದೇ ಗೊತ್ತಿಲ್ಲದ ಯಕ್ಷ ಪ್ರತಿಭೆಗಳನ್ನು ಗುರುತಿಸಲು ಹಾಗೂ ಯಕ್ಷಗಾನಕ್ಕಾಗಿ ಕೆಲಸ ಮಾಡುವ ಸಂಘಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಮಾಡಿಸಿದ್ದೇವೆ. ಈ ಎಲ್ಲಾ ಕೆಲಸಗಳು ನನಗೆ ಬಹಳ ಆತ್ಮತೃಪ್ತಿ ನೀಡಿವೆ.