ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಾನು ಬರೆದಿರುವ ಮಕ್ಕಳ ಸಾಹಿತ್ಯ ಬರೀ ಮಕ್ಕಳಿಗಾಗಿ ರಚನೆ ಮಾಡಿದ್ದಲ್ಲ. ಎಲ್ಲರೂ ಓದಬಹುದಾದ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಉದ್ದೇಶವೂ ಸಹ ಇದುವೇ ಆಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯುವ ಲೇಖಕ ಡಾ. ಶಿವಲಿಂಗಪ್ಪ ಹಂದಿಹಾಳು ಸ್ಪಷ್ಟಪಡಿಸಿದರು."ನೋಟ್‌ಬುಕ್ " ಮಕ್ಕಳ ಕಥಾ ಸಂಕಲನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ದೊರೆತ ಹಿನ್ನೆಲೆ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯದ ಪರಿಭಾಷೆ ಬದಲಾಗಿದೆ. ಈ ಹಿಂದೆ ಮಕ್ಕಳ ಸಾಹಿತ್ಯ ಮಕ್ಕಳಿಗಾಗಿ ಮಾತ್ರ ಬರೆಯುವ ಸಾಹಿತ್ಯ ಎಂದೇ ತಿಳಿಯಲಾಗಿತ್ತು. ಆದರೆ, ಇತ್ತೀಚೆಗೆ ಬರುತ್ತಿರುವ ಬಾಲ್ಯ ಸಾಹಿತ್ಯವನ್ನು ಎಲ್ಲ ವಯೋಮಾನದವರೂ ಓದುತ್ತಿದ್ದಾರೆ. ನಾನು ಬರೆದಿರುವ ಹಾಗೂ ಬರೆಯುತ್ತಿರುವ ಸಾಹಿತ್ಯ ಮಕ್ಕಳನ್ನು ಗುರಿಯಾಗಿಸಿಕೊಂಡು ರಚನೆ ಮಾಡಿಲ್ಲ. ಪ್ರತಿಯೊಬ್ಬರಲ್ಲೂ ಮಗುತನ ಇರುತ್ತದೆ. ಮಗುತನ ಇರುವವರಿಗಾಗಿ ಸಾಹಿತ್ಯ ರಚನೆ ಮಾಡುತ್ತಿದ್ದೇನೆ. ನನ್ನೊಳಗಿನ ಬಾಲ್ಯತ್ವಕ್ಕೆ ಕಥಾ ರೂಪ ನೀಡುತ್ತಿದ್ದೇನೆ. ಹೀಗಾಗಿ ನನ್ನ ಕಥೆಗಳು ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತವೆ ಎಂದು ಹೇಳಿದರು.ಬಾಲ ಸಾಹಿತ್ಯ ಅಥವಾ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯ ಲೇಖಕರು ಬರುತ್ತಿದ್ದು ಓದುಗರ ಸಂಖ್ಯೆಯೂ ದೊಡ್ಡದಾಗುತ್ತಿದೆ. ಬೇರೆ ಬೇರೆಯ ಸಾಹಿತ್ಯ ಪ್ರಕಾರಗಳಂತೆಯೇ ಮಕ್ಕಳ ಸಾಹಿತ್ಯವೂ ಮುನ್ನಲೆಗೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಶಿವಲಿಂಗಪ್ಪ ಹಂದಿಹಾಳು ಉತ್ತರಿಸಿದರು.
ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದಿಂದ ಬಂದಿರುವ ನನಗೆ ನನ್ನ ಬಾಲ್ಯವೂ ಕಥೆಗಳ ರಚನೆಗೆ ಪೂರಕ ಹಾಗೂ ಪ್ರೇರಕವಾಗಿವೆ. ಬಾಲ್ಯದಲ್ಲಿದ್ದ ಅಮಾಯಕತೆ, ನಿಸ್ವಾರ್ಥ, ಸ್ವಾಭಾವಿಕ ಗುಣ, ಸಹಜತೆ, ಹೊಸದನ್ನು ತಿಳಿಯುವ ಇಚ್ಛೆ, ಸರಳ ವಿಷಯಗಳಿಗೂ ಖುಷಿಗೊಳ್ಳುವ ಗುಣ ಈ ಎಲ್ಲವೂ ಮಕ್ಕಳ ಕಥೆಗಳಿಗೆ ಹೂರಣವಾಗಿದೆ ಎಂದರು.ತೊಂಬತ್ತರ ದಶಕದ ಈಚೆಗೆ ಮಕ್ಕಳ ಸಾಹಿತ್ಯ ವಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಲೇಖಕರು ಬಂದಿದ್ದು ಒಬ್ಬೊಬ್ಬರು 200ರಿಂದ 300 ಪುಸ್ತಕಗಳನ್ನು ಬರೆದವರು ಇದ್ದಾರೆ. ಆದರೆ, ಮಕ್ಕಳ ಸಾಹಿತ್ಯ ಬರವಣೆಗೆಯಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರೂ ಈ ಪೈಕಿ ಬಹುತೇಕ ಲೇಖಕರು ಹೆಚ್ಚು ಪ್ರಚುರಗೊಂಡಿಲ್ಲ. ಸಾಹಿತ್ಯ ಬೆರವಣಿಗೆಯ ಆಳಕ್ಕಿಳಿಯದಿರುವುದು ಅಥವಾ ಅವರು ಶಾಲೆಗೆ ಸೀಮಿತಗೊಳಿಸಿಕೊಂಡು ಸಾಹಿತ್ಯ ರಚನೆ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತರಾದ ಎನ್.ವೀರಭದ್ರಗೌಡ, ಆರ್.ಹರಿಶಂಕರ್, ತಿಮ್ಮಪ್ಪ ಚೌದರಿ, ಕೆ.ಎಂ. ಮಂಜುನಾಥ, ಎಸ್.ನಾಗರಾಜ್, ವೆಂಕೋಬಿ ಸಂಗನಕಲ್ಲು, ಮಾರುತಿ ಸುಣಗಾರ, ಮೋಕಾ ಮಲ್ಲಯ್ಯ, ನರಸಿಂಹಮೂರ್ತಿ ಕುಲಕರ್ಣಿ, ಕೆ.ಎರಿಸ್ವಾಮಿ, ಪೀರಾಸಾಬ್, ರೇಣುಕಾರಾಧ್ಯ, ಅಮರೇಶ್, ವಿನಾಯಕ್ ಬಡಿಗೇರ, ಶ್ರೀನಿವಾಸ ಶೆಟ್ಟಿ, ಭರತ್, ಲೇಖಕರಾದ ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್, ವಿ.ಬಿ. ಮಲ್ಲಪ್ಪ ಮತ್ತಿತರರಿದ್ದರು. ಇದೇ ವೇಳೆ ಡಾ. ಶಿವಲಿಂಗಪ್ಪ ಹಂದಿಹಾಳು ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.ಪ್ರಶಸ್ತಿ ನನಗೆ ಬಂದಿಲ್ಲ; ನೋಟ್‌ಬುಕ್‌ಗೆ ಬಂದಿದೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಪ್ರಕಾಶನದ "ನೋಟ್‌ಬುಕ್ " ಕೃತಿ ಇಂಗ್ಲೀಷ್, ತೆಲುಗು ಭಾಷೆಯಲ್ಲಿ ಹೊರ ಬರಲಿದೆ. ಇನ್ನು ಎರಡು ತಿಂಗಳಲ್ಲಿ "ಖಾಲಿಹಾಳೆ " ಮಕ್ಕಳ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ ಎಂದು ಲೇಖಕ ಡಾ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಶಿವಲಿಂಗಪ್ಪ ಹಂದಿಹಾಳುಗೆ ಬಂದಿಲ್ಲ. ನೋಟ್‌ಬುಕ್ ಕೃತಿಗೆ ಬಂದಿದೆ. ನನಗೆ ಪ್ರಶಸ್ತಿ ಬಂದಿದೆ ಎಂದುಕೊಂಡರೆ ತಪ್ಪಾದೀತು. ಪ್ರಶಸ್ತಿ, ಪುರಸ್ಕಾರಗಳೆಲ್ಲವೂ ನೋಟ್‌ಬುಕ್ ಕೃತಿಗೆ ಸಲ್ಲುತ್ತದೆ ಎಂದು ಹಂದಿಹಾಳು ತಿಳಿಸಿದರು.