ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸಮಾಜದ ಎಲ್ಲಾ ವರ್ಗದ ಜನರಿಗೂ ಉಪಯುಕ್ತ ಕೊಡುಗೆ ನೀಡುತ್ತಾ ಬಂದಿರುವ ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಜನಾಂಗದ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಹಾಗೂ ಅಮರಶಿಲ್ಪಿ ಜಕಣಾಚಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಜಗತ್ ಸೃಷ್ಟಿಕರ್ತ ಶ್ರೀಭಗವಾನ್ ವಿಶ್ವಕರ್ಮರ ಜಯಂತಿಯಲ್ಲಿ ಮಾತನಾಡಿದರು.
ಗುಡಿ, ಗೋಪುರ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿ ದೇಶದ ಸಂಸ್ಕೃತಿ ಉಳಿಸಲು ಜೊತೆಗೆ ದೇಶದ ಸರ್ವ ಜನಾಂಗಕ್ಕಗೂ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡಿಕೊಡುವ ಕೊಡುತ್ತಾ ಬಂದಿರುವ ನಮ್ಮ ಸಮಾಜದ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗೂಡಿ ಹೋರಾಟ ಮಾಡಬೇಕಾಗಿದೆ ಎಂದರು.ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯ ಜನರು ಮೀಸಲಾತಿ ಪಡೆದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬುವುದನ್ನು ಮನಗಾಣಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಬೇಕಾದರೆ ಮೀಸಲಾತಿ ಮುಖ್ಯ. ಇದನ್ನು ಮನಗಂಡು ಸಮಾಜದ ಪ್ರತಿಯೊಬ್ಬರು ಸಾಂಘಿಕ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸರ್ಕಾರದ ಸವಲತ್ತುಗಳು ನೇರವಾಗಿ ಸಿಗದಿರುವ ಕಾರಣ ವಿಶ್ವಕರ್ಮ ಜನಾಂಗ ಹಿಂದುಳಿದಿರುವುದೇ ಕಾರಣ. ಮೀಸಲಾತಿ ಸಿಕ್ಕಿದರೆ ಸಮಾಜದ ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಬಹುದು. ರಾಜಕೀಯವಾಗಿ ಹಲವಾರು ಅವಕಾಶಗಳು ಸಿಗುತ್ತದೆ ಎಂದರು.ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದಿಂದ ವಿವಿಧ ಯೋಜನೆಗಳ ಮೂಲಕ ಸ್ವಾವಲಂಬಿ ಬದುಕಿಗಾಗಿ ಹಲವು ರೀತಿಯ ಸೌಲಭ್ಯ ಸಿಗುತ್ತದೆ. ಆದ್ದರಿಂದ ನನ್ನ ಮೀಸಲಾತಿ ಹೋರಾಟಕ್ಕೆ ಸಮಾಜದವರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮುದಾಯ ಮೂಢನಂಬಿಕೆಯಿಂದ ಹೊರಬರಬೇಕು. ಇಷ್ಟು ದಿನ ನಿವೇಶನಕ್ಕಾಗಿ, ಸಮುದಾಯ ಭವನ ನಿರ್ಮಿಸಿಕೊಡಿ ಎಂದು ಮನವಿ ಮಾಡಿದ್ದು ಸಾಕು. ನಾವು ಸಂವಿಧಾನದ ಬಗ್ಗೆ ತಿಳಿದು ವಿದ್ಯಾವಂತರಾಗಿ ರಾಜಕೀಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಮೀಸಲಾತಿ ಕುರಿತಾದ ಕಾರ್ಯಕ್ರಮ ಹಮ್ಮಿಕೊಂಡು ಜನಾಂಗದ ಜನರಿಗೆ ಮಾಹಿತಿ ತಿಳಿಸುವ ಕೆಲಸ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕದಲೂರು ಬಸವರಾಜು ಮಾತನಾಡಿ, ಪಟ್ಟಣದಲ್ಲಿ ಯಾವುದಾದರೂ ಒಂದು ಬಡಾವಣೆಗೆ ಅಥವಾ ಸರ್ಕಲ್‌ಗೆ ಅಮರ ಶಿಲ್ಪಿ ಜಕಣಾಚಾರಿ ಎಂದು ಹೆಸರಿಡಬೇಕು. ನಮ್ಮ ಜನಾಂಗಕ್ಕೆ ನಿವೇಶನ ನೀಡಿ ಸಮುದಾಯ ಭವನ ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆ ಕುರಿತು ಪುರಸಭೆಗೆ ಮನವಿ ಮಾಡಿದರು.
ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ಮಾತನಾಡಿ, ವಿಶ್ವ ಕರ್ಮ ಜನಾಂಗದವರ ಬೇಡಿಕೆಗಳ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಲಿಂಗಚಾರ್, ಜಯರಾಮಚಾರ, ಎಂ.ಸಿ.ಕೃಷ್ಣಚಾರ್, ಟಿ.ಬಿ.ಮೋಹನಕುಮಾರ ಚಾರ್, ಸಿ.ಎನ್.ರಂಗಚಾರ್ (ರಂಗಣ್ಣ), ರಾಮಾಚಾರಿ, ಕೃಷ್ಣಚಾರ್, ಸತೀಶ್, ವಿಜೇಶಚಾರ್, ಸ್ವಾಮಾಚಾರಿ, ಕುಮಾರ್ ಹಾಗೂ ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಆಗಮಿಸಿತು.ಶ್ರೀಕಾಳಿಕಾಂಭ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರುದ್ರಚಾರ್, ಉದ್ಯಮಿ ಕುಮಾರ್, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಮಾಜಿ ಅಧ್ಯಕ್ಷ ಎಂ.ಪಿ.ಮಹೇಶ್, ಮಾಜಿ ಪ್ರದಾನ ಕಾರ್ಯದರ್ಶಿ ಎನ್.ಎಸ್.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಮಹಾಸಭಾದ ಜಿಲ್ಲಾಧ್ಯಕ್ಷ ಹೇಮಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್, ಪುರಸಭೆ ಉಪಾಧ್ಯಕ್ಷ ಟಿ.ಅರ್.ಪ್ರಸನ್ನಕುಮಾರ್, ಮುಖಂಡರಾದ ಲಕ್ಷ್ಮಿಎಸ್.ಸ್ವಾಮಿ, ಪಾಪಾಚಾರ್, ನಟರಾಜು, ಈಶ್ವರಚಾರ್, ಲಕ್ಷ್ಮಣಚಾರ್ ಸೇರಿದಂತೆ ಇತರರು ಹಾಜರಿದ್ದರು.