- ನನ್ನ ಆರೋಪ ಸತ್ಯವೆಂದು ಒಪ್ಪಿದ ಸರ್ಕಾರ, ಡಿಸಿ ಯಾಕೆ ಭೇಟಿ ನೀಡಿಲ್ಲ? - ಕಾಡಜ್ಜಿ ಕೇಂದ್ರ ಮಣ್ಣು ಲೂಟಿ, ಹಳ್ಳ ಕಬಳಿಕೆ ವಿರುದ್ಧದ ಹೋರಾಟ ನಿಲ್ಲದು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ- ಹರಪನಹಳ್ಳಿ ತಾಲೂಕಿನ ಪರಿಶಿಷ್ಟ ಜಾತಿ-ಪಂಗಡಗಳ ಬಡ ರೈತರ ಜಮೀನುಗಳನ್ನು ಪ್ರಭಾವಿ ರಾಜಕಾರಣಿಗಳು ಅಕ್ರಮವಾಗಿ ಒತ್ತುವರಿ ಮಾಡಿ, ಹಳ್ಳದ ದಿಕ್ಕನ್ನೇ ಬದಲಿಸಿದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಈವರೆಗೆ ಸ್ಥಳ ವೀಕ್ಷಣೆ ಮಾಡದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾ. ಕಾಡಜ್ಜಿ ಗ್ರಾಮದ ಕೃಷಿ ಬೀಜ ಉತ್ಪನ್ನ ಕೇಂದ್ರದಿಂದ ಸಾವಿರಾರು ಲೋಡ್ ಮಣ್ಣನ್ನು ಜನವರಿ 2026ರಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ ಬಗ್ಗೆ ಸಾಕಷ್ಟು ಸಲ ಗಮನಕ್ಕೆ ತಂದರೂ, ಸೌಜನ್ಯಕ್ಕೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿಲ್ಲ. ಸಂಬಂಧಿಸಿದ ಇಲಾಖೆಯವರು ಈವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದರು.
ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಒಡೆತನದ ಕಾರ್ಖಾನೆ ಬಳಿಯ ಹಳ್ಳ ಮುಚ್ಚಿದ್ದ ಪ್ರಕರಣದ ಹೋರಾಟದಲ್ಲಿ ನಾನು ಗೆದ್ದಿದ್ದೇನೆ. ಹಳ್ಳವನ್ನು ಅಲ್ಲಿ ಮುಚ್ಚಲಾಗಿತ್ತು ಎಂಬುದಾಗಿ ಸರ್ಕಾರದ ವರದಿಯೇ ಹೇಳಿದೆ. ಹಳ್ಳವನ್ನು ಕಾಪಾಡುವುದಕ್ಕೆ ನನ್ನ ಹೋರಾಟ ನಡೆದಿದೆ. ನನ್ನ ಹೋರಾಟದ ನಂತರ ತನಿಖಾ ತಂಡವು ನನ್ನ ಆರೋಪ ಸತ್ಯವೆಂಬ ವರದಿಯನ್ನು ನೀಡಿದೆ. ಇಷ್ಟಾದ ನಂತರವೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಹಳ್ಳವನ್ನು ಸಂರಕ್ಷಿಸುವ ಕೆಲಸ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ತಮ್ಮ ಕ್ಷೇತ್ರದ ಗಡಿಭಾಗದ ಹಳ್ಳವನ್ನು ಮುಚ್ಚಿದ್ದ ಬಗ್ಗೆ ತಾವು ಮಾಡಿದ್ದ ಆರೋಪವನ್ನು ಸರ್ಕಾರದ ವರದಿಯೇ ಈಗ ಪುಷ್ಟೀಕರಿಸಿದೆ. ನನ್ನ ಹೋರಾಟದ ನಂತರ ಈಗ ಮುಚ್ಚಿದ್ದ ಹಳ್ಳವನ್ನು ತೆಗೆಯುವ ಕೆಲಸವಾಗುತ್ತಿದೆ. ಈ ವಿಚಾರದ ಬಗ್ಗೆಯೂ ಜಿಲ್ಲಾಡಳಿತ ಸ್ಥಳ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡಿಲ್ಲ. ಕಾಡಜ್ಜಿಯ ಸರ್ಕಾರಿ ಜಾಗದ ಮಣ್ಣು ಲೂಟಿ ಮಾಡಿದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಪೊಲೀಸ್ ಅಧಿಕಾರಿಗಳು, ಮೂರ್ನಾಲ್ಕು ಜನ ಕೃಷಿ ಅಧಿಕಾರಿಗಳ ಸಮ್ಮುಖದಲ್ಲೇ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದರು ಎಂದು ದೂರಿದರು.
ಸುಳ್ಳು ಕೇಸ್ ಹಾಕಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸವಾಗುತ್ತಿದೆ. 2-3 ತಿಂಗಳ ಕಾಲ ನಾನೂ ಸುಮ್ಮನಿದ್ದೆ. ಈ ವ್ಯವಸ್ಥೆ ಬಗ್ಗೆ ನನಗೆ ಅಸಹ್ಯವಾಗುತ್ತಿದೆ. ಹೋರಾಟಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಎರಡೂ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ. ನಮ್ಮ ಪಕ್ಷದ ಜೊತೆಗೆ ಮಾತನಾಡಿ ದಾವಣಗೆರೆ ಡಿಸಿ ಕಚೇರಿ ಎದುರು ಇನ್ನೊಂದು ವಾರದಲ್ಲೇ ಹೋರಾಟ ಆರಂಭಿಸಲಿದ್ದೇನೆ. ಮೊದಲ ಹಂತದಲ್ಲಿ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ಆರಂಭಿಸುತ್ತೇವೆ ಎಂದರು.ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತಂದವರು, ಸರ್ಕಾರದ ಆಸ್ತಿಯನ್ನು ಕದ್ದವರಿಗೆ ಶಿಕ್ಷೆ ಆಗಬೇಕೆಂಬುದಾಗಿದೆ. ಅನ್ಯಾಯ ಮಾಡಿದವರ ವಿರುದ್ಧ ಕಾನೂನು ಕ್ರಮ ಆಗಬೇಕು. ಶಾಸಕನಾದ ತಮ್ಮ ಮೇಲೆಯೇ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸುತ್ತಾರೆಂದರೆ, ಜನಸಾಮಾನ್ಯರ ಪಾಡೇನು ಎಂದು ಬಿ.ಪಿ.ಹರೀಶ ಪ್ರಶ್ನಿಸಿದರು.
ಈ ಸಂದರ್ಭ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ ಇತರರು ಇದ್ದರು.- - -
(ಬಾಕ್ಸ್) * ಶ್ರೀರಾಮನ ಬಗ್ಗೆ ಪ್ರೊ.ಭಗವಾನ್ ಹೇಳಿಕೆಗೆ ಹರೀಶ ಕಿಡಿ- ಹಿಂದೂಗಳ ಭಾವನೆಗೆ ನೋವುಂಟು ಮಾಡುವುದು ಶಿಕ್ಷಾರ್ಹ ಅಪರಾಧವಲ್ಲವೇ ಪ್ರಿಯಾಂಕ ಖರ್ಗೆಯವರೆ?! ದಾವಣಗೆರೆ: ಹರಿಹರದ ಪ್ರೊ. ಬಿ.ಕೃಷ್ಣಪ್ಪ ಸ್ಮಾರಕ ಭವನದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್.ಭಗವಾನ್ ಶ್ರೀರಾಮನ ಬಗ್ಗೆ ಆಡಿರುವ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಿ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆ, ಭಾಷಣಕ್ಕೆ ಶಿಕ್ಷೆ ನೀಡುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಹಿಂದೂಗಳ ಪೂಜಿಸುವ, ಆರಾಧಿಸುವ ಆರಾಧ್ಯದೈವ ಶ್ರೀರಾಮನ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ ಭಗವಾನ್ ಹೇಳಿಕೆ ಖಂಡಿಸುವುದು, ಆಕ್ಷೇಪಿಸುವುದೂ ಶಿಕ್ಷಾರ್ಹ ಅಪರಾಧವೇ ಎಂಬುದನ್ನು ಗೃಹ ಸಚಿವ ಖರ್ಗೆ ಸ್ಪಷ್ಟಪಡಿಸಲಿ ಎಂದರು.ಪ್ರೊ.ಭಗವಾನ್ ಹಿಂದೂಗಳ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡುವ ಜೊತೆ ವಾಲ್ಮೀಕಿ ಸಮಾಜಕ್ಕೂ ನೋವುಂಟು ಮಾಡಿದ್ದಾರೆ. ಭಗವಾನರಿಗೆ ವಯಸ್ಸು ಹೆಚ್ಚಾಗಿ, ಅರಳು ಮರಳು ಇರಬೇಕು. ಇಂತಹವರಿಗೆ ಸರ್ಕಾರ ಮೊದಲು ಕಡಿವಾಣ ಹಾಕಬೇಕು. ಏನಾದರೂ ಅನಾಹುತ ಆದ ನಂತರ ಕ್ರಮ ಏಕೆ? ಮುಂಚೆಯೇ ಇಂತಹವರಿಗೆ ತಿಳಿವಳಿಕೆ ನೀಡುವ ಜೊತೆಗೆ ಅಶಾಂತಿ ಸೃಷ್ಟಿಸುವುದನ್ನೂ ತಡೆಯಲಿ ಎಂದು ಅವರು ಹೇಳಿದರು.
ಆರೆಸ್ಸೆಸ್ ಬಗ್ಗೆ ಹಗುರ ಮಾತನಾಡಿದರೆ ಮಾಧ್ಯಮಗಳಲ್ಲಿ ಮುಖ್ಯ ಪುಟದಲ್ಲಿ ಬರುತ್ತೇನೆಂಬ ಭ್ರಮೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪದೇಪದೇ ಸಂಘದ ಬಗ್ಗೆ ಮಾತನಾಡುತ್ತಿದ್ದಾರೆ ಎನಿಸುತ್ತದೆ. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ 5 ದಶಕಗಳ ಹಿಂದೆಯೇ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನೆಹರೂ ಕುಟುಂಬದಿಂದಲೇ ಆರೆಸ್ಸೆಸನ್ನು ಓಡಿಸಲಾಗಿಲ್ಲ. 50 ದೇಶಗಳಲ್ಲಿರುವ ಸಂಘದ ಬಗ್ಗೆ ಹಗುರ ಮಾತನಾಡುವುದನ್ನು ಇನ್ನಾದರೂ ಬಿಡಿ ಎಂದು ಸಲಹೆ ನೀಡಿದರು.ಗೃಹ ಸಚಿವರೇ, ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್, ಬೆಟ್ಟಿಂಗ್‌ನಂತಹ ಜೂಜಾಟ ಹೆಚ್ಚಾಗಿದೆ. ಬಾಂಬೈನವರಿಂದ ತಪ್ಪಿ ಗೋವಾದವರು ಈಗ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಆನ್ ಲೈನ್ ಜೂಜಾಟದ ವ್ಯಸನಿಗಳಾಗಿ ಅಪರಾಧ ಕೃತ್ಯ ಎಸಗುವುದು, 18-20 ವರ್ಷದ ಮಕ್ಕಳು ಹೆತ್ತವರನ್ನು, ಕುಟುಂಬವನ್ನು ಹತ್ಯೆ ಮಾಡುವಂತಹ ಪ್ರಕರಣ ವರದಿಯಾಗುತ್ತಿವೆ. ಮೊದಲು ಅಂತಹವುಗಳನ್ನು ನಿರ್ಮೂಲನೆ ಮಾಡಿ. ಮಟ್ಕಾ, ಆನ್ ಲೈನ್ ಜೂಜಾಟಗಳಿಗೆ ಅಂತ್ಯ ಹಾಡಿ ಎಂದು ಬಿ.ಪಿ.ಹರೀಶ ಒತ್ತಾಯಿಸಿದರು.
- - -(ಕೋಟ್) ಸಂಘವನ್ನು ಟೀಕಿಸಿದ ಟಿಎಂಸಿ, ಡಿಎಂಕೆ ಕಥೆ ಏನಾಯಿತೆಂಬುದನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಮನಿಸಲಿ. ಕ್ರೈಸ್ತ ಧರ್ಮ ಪಾಲಿಸುವ ತಮಿಳುನಾಡು ಸಿಎಂ ಕೊಲ್ಲೂರಿಗೆ ಬಂದು ದರ್ಶನ ಮಾಡುತ್ತಾರೆಂಬುದನ್ನು ಮರೆಯಬೇಡಿ. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಆರೆಸ್ಸೆಸ್ ಬಗ್ಗೆ ತಮ್ಮ ಮಾತುಗಳನ್ನು ನಿಲ್ಲಿಸಿ, ಸಂಘ ಪರಿವಾರದ ಕೊಡುಗೆಯನ್ನು ಗಮನಿಸಲಿ. ಪ್ರಕೃತಿ ವಿಕೋಪ, ದೊಡ್ಡ ಅನಾಹುತ ಸಂಭವಿಸಿದಾಗ ಮೊದಲು ನೆರವಿಗೆ ನಿಲ್ಲುವುದೇ ಸಂಘ ಮತ್ತು ಸ್ವಯಂ ಸೇವಕರು ಎಂಬುದನ್ನೂ ಅರಿಯಲಿ.
- ಬಿ.ಪಿ.ಹರೀಶ, ಹರಿಹರ ಬಿಜೆಪಿ ಶಾಸಕ .- - -
-15ಕೆಡಿವಿಜಿ3: ದಾವಣಗೆರೆಯಲ್ಲಿ ಸೋಮವಾರ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.