ತಾಲೂಕಿನ ಮೈಲಾರ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ 1972ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಗೆ ಬರೋಬ್ಬರಿ 54 ವರ್ಷಗಳು ಸಂದಿವೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ವಿಜಯನಗರ-ಹಾವೇರಿ ಜಿಲ್ಲೆಗಳ ಸಂಪರ್ಕ ಕೊಂಡಿಯಾದ ತಾಲೂಕಿನ ಮೈಲಾರ ಸೇತುವೆ ಬುಡದಲ್ಲೇ ಹಾವೇರಿ ನಗರ ಸಭೆಯು ಕುಡಿವ ನೀರಿನ ನೆಪದಲ್ಲಿ ತುಂಗಭದ್ರಾ ನದಿಗೆ ಅಕ್ರಮ ಬಂಡು ನಿರ್ಮಾಣ ಮಾಡಿದ್ದಾರೆ.ತಾಲೂಕಿನ ಮೈಲಾರ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ 1972ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಗೆ ಬರೋಬ್ಬರಿ 54 ವರ್ಷಗಳು ಸಂದಿವೆ. ವಿಜಯನಗರ ಜಿಲ್ಲೆಯ ಸುಪರ್ದಿಗೆ ಒಳಪಟ್ಟಿರುವ ಈ ಸೇತುವೆ ಬುಡದಲ್ಲಿ ಯಾವ ಕೆಲಸ ಮಾಡಬೇಕಿದ್ದರೂ ಹೂವಿನಹಡಗಲಿಯ ಲೋಕೋಪಯೋಗಿ ಇಲಾಖೆಯ ಅನುಮತಿ ಕಡ್ಡಾಯ. ಆದರೆ ಯಾವುದೇ ಅನುಮತಿ ಇಲ್ಲದೇ ಹಾವೇರಿ ನಗರಸಭೆ ಎಂಜಿನಿಯರ್, ಕುಡಿವ ನೀರಿನ ನೆಪದಲ್ಲಿ ಸೇತುವೆ ಕಂಬಕ್ಕೆ ಪಕ್ಕದಲ್ಲೇ ಕಲ್ಲು ಮಣ್ಣಿನಿಂದ ಅಕ್ರಮವಾಗಿ ಬಂಡು ನಿರ್ಮಾಣ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಗುತ್ತಲ, ಹಾವೇರಿ ನಗರಗಳಿಗೆ ಕುಡಿವ ನೀರು ಪಂಪ್‌ಹೌಸ್ ನಿರ್ಮಿಸಿ, ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದು, ಈ ಕಾರಣಕ್ಕಾಗಿ ಹಾವೇರಿ ನಗರ ಸಭೆಯಿಂದ ಸೇತುವೆ ಬುಡದಲ್ಲೇ ಜೆಸಿಬಿಯಿಂದ ಅಕ್ರಮ ಬಂಡು ನಿರ್ಮಿಸುವ ಸಂದರ್ಭದಲ್ಲಿ ಸೇತುವೆಯ ಕಲ್ಲಿನ ಕಂಬಗಳಿಗೆ ಹಾನಿ ಮಾಡಿದ್ದಾರೆ. ಈಗಾಗಲೇ ಕುಸಿಯುವ ಭೀತಿಯಲ್ಲಿರುವ ಮೈಲಾರ ಸೇತುವೆ ಪ್ರತಿ ಬೇಸಿಗೆ ವೇಳೆ ನೀರು ನಿಲ್ಲಿಸುವ ನೆಪದಲ್ಲಿ ಸೇತುವೆಗೆ ಹಾನಿ ಉಂಟು ಮಾಡುತ್ತಿದ್ದಾರೆ.ಈ ಹಿಂದೆ ತಾಲೂಕಿನ ಲೋಕೋಪಯೋಗಿ ಇಲಾಖೆ ಒಂದಿಷ್ಟು ಸೇತುವೆ ದುರಸ್ತಿ ಕಾರ್ಯ ಮಾಡಿದ್ದಾರೆ. ಪ್ರತಿ ಬಾರಿಯೂ ನೀರು ನಿಲುಗಡೆ ಮಾಡುವಾಗ ಸೇತುವೆಗೆ ಹಾನಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಅನುಮತಿ ಇಲ್ಲದೇ ಯಾವ ಕೆಲಸ ಮಾಡುವಂತಿಲ್ಲ. ಆದರೂ ಸೇತುವೆ ಬುಡದಲ್ಲೇ ನೀರು ನಿಲ್ಲಿಸಿ, ಸೇತುವೆ ಕಂಬಗಳಿಗೆ ಹಾನಿ ಉಂಟು ಮಾಡಿದ್ದಾರೆಂಬ ದೂರು ಕೇಳಿ ಬರುತ್ತಿವೆ.
ಮೈಲಾರ ಬಳಿ ನಿರ್ಮಿಸಿದ ಸೇತುವೆ 54 ವರ್ಷ ಹಳೆಯದ್ದು. ಪ್ರತಿ ವರ್ಷವೂ ಹಾವೇರಿ ನಗರಸಭೆ ನೀರು ನಿಲ್ಲಿಸಲು ಬಂಡು ನಿರ್ಮಿಸುತ್ತಾರೆ. ಆದರೆ ನಮ್ಮ ಅನುಮತಿ ಪಡೆದಿಲ್ಲ. ಸೇತುವೆ ಪಕ್ಕದಲ್ಲೇ 20 ಅಡಿ ಆಳದಷ್ಟು ಗುಂಡಿ ತೋಡಿದ್ದಾರೆ. ಇದರಿಂದ ಸೇತುವೆಗೆ ಹಾನಿಯಾಗಲಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಈ ಕುರಿತು ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಲೋಕೋಪಯೋಗಿ ಇಲಾಖೆಯ ಎಇಇ ಬಿ.ರಾಜಪ್ಪ.ಹಾವೇರಿ, ಗುತ್ತಲ ಗ್ರಾಮಗಳಿಗೆ ಕುಡಿವ ನೀರು ಪೂರೈಕೆಗಾಗಿ ಸೇತುವೆ ಬುಡದಲ್ಲಿ ಬಂಡು ನಿರ್ಮಿಸಿದ್ದೇವೆ. ಲೋಕೋಪಯೋಗಿ ಇಲಾಖೆ ಅನುಮತಿ ಪಡೆದಿಲ್ಲ. ಆದರೆ ಹಾವೇರಿ ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಮಾಡಿದ್ದೇವೆ. ₹105 ಕೋಟಿ ಕುಡಿವ ನೀರಿನ ಕಾಮಗಾರಿಗಾಗಿ ಗುಂಡಿ ನಿರ್ಮಿಸಿದ್ದೇವೆ. ಬಂಡು ನಿರ್ಮಾಣದಿಂದ ಸೇತುವೆಗೆ ಯಾವುದೇ ಹಾನಿಯಾಗಿಲ್ಲ ಎನ್ನುತ್ತಾರೆ ಹಾವೇರಿ ನಗರಸಭೆ ಎಂಜಿನಿಯರ್ ಮುಹಮ್ಮದ್ ಸಮೀರ್.