ಮೈಲಾರ ಮಹದೇವಪ್ಪ ಧೀಮಂತ ನಾಯಕ: ಎಸ್.ಆರ್. ಪಾಟೀಲ

| Published : Apr 02 2025, 01:00 AM IST

ಸಾರಾಂಶ

ಮೈಲಾರ ಮಹದೇವಪ್ಪನವರು ಧೀಮಂತ ನಾಯಕ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ.

ಹಾವೇರಿ: ದೇಶದ ಸ್ವಾತಂತ್ರ್ಯ ಹೋರಾಟವೇ ರೋಚಕವಾಗಿತ್ತು. ಯುವಜನಾಂಗ ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನಗಳನ್ನು ತಿಳಿದುಕೊಳ್ಳಬೇಕು. ಜತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಪಾಟೀಲ ತಿಳಿಸಿದರು.ನಗರದ ಹುತಾತ್ಮರ ವೀರಸೌಧದಲ್ಲಿ ಮಂಗಳವಾರ ಹಾವೇರಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರ ಜೀವ ಬಲಿದಾನ ಮಾಡಿದ ಸ್ಮರಣೆಯ 82ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮೈಲಾರ ಮಹದೇವಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮೈಲಾರ ಮಹದೇವಪ್ಪನವರು ಧೀಮಂತ ನಾಯಕ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಹಾಗಾಗಿ ಯುವ ಜನಾಂಗ ಓದಿನೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಗಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ತಪಾತಗಳು ನಡೆದಿವೆ. ಆದರೆ ಭಾರತ ದೇಶಕ್ಕೆ ಮಾತ್ರ ಸತ್ಯ ಹಾಗೂ ಅಹಿಂಸಾ ತತ್ವದಡಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಲಗಂಗಾಧರ ತಿಲಕ್, ಭಗತ್‌ಸಿಂಗ್, ಸುಖದೇವ ಸೇರಿದಂತೆ ಲಕ್ಷಾಂತರ ತ್ಯಾಗ ಬಲಿದಾನ ಮರೆಯುವಂತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ಸಹಸ್ರಾರು ದೇಶಭಕ್ತರು ಪಾಲ್ಗೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಹಲಗಲಿ ಬೇಡರು ಸೇರಿದಂತೆ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ. ಮೈಲಾರ ಮಹಾದೇವಪ್ಪ ಅವರ ಜೀವನ ಚರಿತ್ರೆ ಕೇಳಿದರೆ ರೋಮಾಂಚನವಾಗುತ್ತದೆ. ಅಹಿಂಸಾತ್ಮಕ ಹೋರಾಟ ಮೈಲಾರ ಮಹಾದೇವಪ್ಪ ಅವರ ಧ್ಯೇಯವಾಗಿತ್ತು ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ಮಾತನಾಡಿ, ಮೈಲಾರ ಮಹದೇವಪ್ಪನವರ ಸ್ವಾತಂತ್ರ್ಯ ಹೋರಾಟ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೈಲಾರ ಮಹದೇವಪ್ಪ, ಸರ್ವಜ್ಞ, ಶಿಶುನಾಳ ಷರೀಫರ ಸೇರಿದಂತೆ ವಿವಿಧ ಮಹನೀಯ ಅಧ್ಯಯನ ಪೀಠ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ ಎಂದರು.

ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ಸಿ.ಎಸ್. ಮರಳಿಹಳ್ಳಿ ಕವನ ವಾಚನ ಮಾಡಿದರು. ಅಡಿವೆಪ್ಪ ಕುರಿ, ಹನುಮಂತಪ್ಪ ಧಾರವಾಡ, ಮಾರುತಿ ಬೆಟ್ಟಪ್ಪನವರ ಅವರು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲಾವಣಿ ಹಾಗೂ ಗೀಗೀ ಪದಗಳನ್ನು ಹಾಡಿದರು. ಜಿ.ಜಿ. ಮೇಹಂದಳೆ ಸಂಗ್ರಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ ಜರುಗಿತು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹೊರತರಲಾದ ಪುಸ್ತಕ ಬಿಡುಗಡೆಗೊಳಿಸಲಾಯಿತು. ಯೋಧರ ಜ್ಯೋತಿ ಸ್ವಾಗತ: ಕೋಗನೂರು ಹಾಗೂ ಹೊಸರಿತ್ತಿ ಗ್ರಾಮಗಳಿಂದ ಆಗಮಿಸಿದ ಹುತಾತ್ಮ ಸ್ವಾತಂತ್ರ್ಯ ಯೋಧರ ಜ್ಯೋತಿಯನ್ನು ವೀರಸೌಧದಲ್ಲಿ ಜಿಲ್ಲಾಧಿಕಾರಿ ಹಾಗೂ ಗಣ್ಯರು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಟ್ರಸ್ಟ್‌ನ ಸದಸ್ಯರಾದ ಎಚ್.ಎಸ್. ಮಹಾದೇವ, ಸತೀಶ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಜಾಬಿನ್, ಬಸವರಾಜ ಪೂಜಾರ, ತಹಸೀಲ್ದಾರ್ ಶರಣಮ್ಮ, ಪ್ರಾಂಶುಪಾಲ ಮಂಜುನಾಥ ವಡ್ಡರ ಇತರರು ಉಪಸ್ಥಿತರಿದ್ದರು. ಮಾಲಾರ್ಪಣೆ: ಕಾರ್ಯಕ್ರಮಕ್ಕೂ ಮೊದಲು ನಗರಸಭೆ ಎದುರಿಗೆ ಇರುವ ಹುತಾತ್ಮ ಮೈಲಾರ ಮಹದೇವಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಉಪವಿಭಾಗಾಧಿಕಾರಿ ಚೆನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಎಚ್.ಎಸ್. ಮಹಾದೇವ ಇತರರು ಉಪಸ್ಥಿತರಿದ್ದರು.