ಸಾರಾಂಶ
ಎನ್.ಗಿರೀಶ್, ಬೀರೂರು.
ಕನ್ನಡಪ್ರಭ ವಾರ್ತೆ ಬೀರೂರು‘ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮವಾಯಿತು, ಸರ್ವರು ಎಚ್ಚರದಿಂದಿರಬೇಕು ಪರಾಕ್...’ ಇದು ಮೈಲಾರಲಿಂಗ ಸ್ವಾಮಿ ದೇಗುಲದ ದಶರಥ ಪೂಜಾರರ ಬಾಯಿಂದ ಬಂದಂತಹ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳು.
ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು ಶುಕ್ರವಾರ ಬೆಳಗಿನ ಜಾವ 4.30ಕ್ಕೆ ಜರುಗಿದವು.ವಿಜಯದಶಮಿಯ ಸಡಗರ ಸಂಭ್ರಮದ ನಡುವೆ ಸಂಪ್ರದಾಯದಂತೆ ಸರಸ್ವತಿಪುರಂ ಬಡಾವಣೆಯಲ್ಲಿ ಪ್ರತಿವರ್ಷವೂ ಕಾರ್ಣಿಕ ನಡೆಯುತ್ತದೆ. ಕಾರ್ಣಿಕದ ದೈವ ಶ್ರೀ ಮೈಲಾರಲಿಂಗಸ್ವಾಮಿಯ ಉತ್ಸವ ಮೂರ್ತಿಯನ್ನು ಗುರುವಾರ ರಾತ್ರಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಾಲಯದ ಬಳಿಯಿಂದ ರಾತ್ರಿ 10.20ರ ಸುಮಾರಿಗೆ ಹೊರಟು ಬೀರೂರು ಪಟ್ಟಣದ ಹೊರವಲಯದ ಗಾಳಿಹಳ್ಳಿ ಬಳಿಯ ಪಾದದಕೆರೆಯಲ್ಲಿ ಬಳಿ ಇರುವ ಸ್ವಾಮಿಯ ಪಾದಗಳನ್ನು ಪೂಜಿಸಿದ ಭಕ್ತರು ಸ್ವಾಮಿಗೆ ಗಣಂಗಳ ಸೇವೆ ಮತ್ತು ಗೊರವಪ್ಪರೊಂದಿಗೆ 101 ದೋಣಿ ಸೇವೆ ಎಡೆ ಸಲ್ಲಿಸಿ ಬಳಿಕ ಬನ್ನಿಮುಡಿದು ಮೆರವಣಿಗೆಯಲ್ಲಿ ಮಹಾನವಮಿ ಬಯಲಿಗೆ ಶುಕ್ರವಾರ ನಸುಕಿನ ಜಾವ 4.10ರ ವೇಳೆಗೆ ಆಗಮಿಸಿತು.
ಈ ವೇಳೆಗಾಗಲಿ, ಆದಿದೈವ ವೀರಭದ್ರಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ ಮತ್ತು ಹಿರಿಯಂಗಳದ ರುದ್ರಸ್ವಾಮಿ ದೇವರ ಉತ್ಸವ ಮೂರ್ತಿಗಳು ಮಹಾನವಮಿ ಬಯಲಿನಲ್ಲಿ ಸ್ಥಾಪಿತವಾಗಿದ್ದವು.ಮೈಲಾರಲಿಂಗಸ್ವಾಮಿಯ ಅರ್ಚಕ ದಶರಥ ಪೂಜಾರರು ಉತ್ಸವದಲ್ಲಿ ಬಂದು ಬಾಳೆಮರದ ಅಂಬು ಮತ್ತು ಸ್ಥಾಪಿತವಾಗಿದ್ದ ದೇವರಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಂತರ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನು 4.30ಕ್ಕೆ ಏರಿ ತನ್ನ ಕೈಯಲ್ಲಿದ್ದ ಗಂಟೆಯನ್ನು ಬಾರಿಸಿದ ಕೂಡಲೇ ಸುತ್ತಲು ನೆರೆದಿದ್ದ ಜನರಲ್ಲಿ ಗಾಢ ಮೌನ ಆವರಿಸಿತು.
ನಂತರ ತನ್ನ ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ವರ್ಷದ ಭವಿಷ್ಯದ ನುಡಿಗಳನ್ನು ನ್ಯಾಯ ರೀತಿ ತೂಕ ಹಾಕಿದಾಗ ‘ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ.... ಪರಾಕ್” ಎಂದು ನುಡಿದು ಬಿಲ್ಲಪ್ಪನಿಂದ ಜಾರಿ ತಮ್ಮ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು.ಸ್ಥಳದಲ್ಲಿದ್ದ ನೆರೆದಿದ್ದ ಗೊರವರು ಗಂಟೆ ಮತ್ತು ಡಮರುಗಳ ಸಪ್ಪಳದೊಂದಿಗೆ ಏಳುಕೋಟಿಗೆ ಪರಾಕ್ ಎನ್ನುವ ಸದ್ದು ಮರ್ಧಾನಿಸಿತು. ನೆರದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಕಾರ್ಣಿಕದ ನುಡಿಮುತ್ತುಗಳನ್ನು ಸವಿದರು. ದೇವಾಲಯದ ಪೂಜಾರು ವಿಜೇತ ಹಾಗೂ ದೇವಾಲಯದ ಗೌಡರು ಉಸ್ತುವಾರಿ ವಹಿಸಿದ್ದರು.
ಕಾರ್ಣಿಕದ ಬಳಿಕ ವೀರಭದ್ರಸ್ವಾಮಿಯ ಗುರಿಕಾರ ಅಂಬು ಹೊಡೆಯುವ ಸಲುವಾಗಿ ನೆಟ್ಟಿದ್ದ ಬಾಳೆಕಂದಿ ಬಾಣಹೂಡಿ ಕತ್ತರಿಸಿದ ನಂತರ ಭಕ್ತರು ಉತ್ಸವ ಮೂರ್ತಿಗಳೊಂದಿಗೆ ತೆರಳಿದರು.ಶಾಸಕ ಕೆ.ಎಸ್.ಆನಂದ್ ವಿಜಯದಶಮಿಯ ಗುರುವಾರ ಸಂಜೆ ದೇವಾಲಯಕ್ಕೆ ಆಗಮಿಸಿ ಭಕ್ತರೊಂದಿಗೆ ಕಾರ್ಣಿಕದೊಡೆಯ ಮೈಲಾರಲಿಂಗ ಸ್ವಾಮಿ ದೇಶ ಮತ್ತು ರಾಜ್ಯಕ್ಕೆ ಉತ್ತಮವಾಗಿ ಹರಸಲಿ, ಕ್ಷೇತ್ರದ ಜನತೆಯ ರೈತಾಪಿ ವರ್ಗವನ್ನು ನೆಮ್ಮದಿ ಕರುಣಿಸುವಂತೆ ವಿಶೇಷ ಪೂಜೆ ಸಲ್ಲಿಸಿದರು. ಪಾದದ ಕೆರೆಗೆ ನೂತನ ರಸ್ತೆ ಮಾಡಲು 1 ಕೋಟಿ ರು. ನೀಡಲಾಗಿದ್ದು ಕಾಮಗಾರಿಯು ಸಹ ಮುಗಿದಿದೆ ಎಂದರು.
ಕಾರ್ಣಿಕ ಮಹೋತ್ಸವದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ವೃತ್ತ ನಿರೀಕ್ಷಕ ಶ್ರೀಕಾಂತ್, ಉಪ ನಿರೀಕ್ಷಕ ಡಿ.ವಿ.ತಿಪ್ಪೇಶ್ ನೇತೃತ್ವ ವಹಿಸಿದ್ದರು. ಭಕ್ತರು ಮೈಲಾರಲಿಂಗನ ಕಾರ್ಣಿಕದ ನುಡಿಮುತ್ತಗಳ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಶುಕ್ರವಾರ ಸಂಜೆ ದೇವಸ್ಥಾನದ ಆವರಣದೊಳಗೆ ವಿಜೃಂಭಣೆಯ ದೋಣಿ ಸೇವೆ ಸಾವಿರಾರು ಭಕ್ತರ ಸಮ್ಮಖದಲ್ಲಿ ಜರುಗಿತು.ಈ ಬಾರಿ ನುಡಿದ ಕಾರ್ಣಿಕದ ‘ಧರ್ಮ-ಅಧರ್ಮ ಸಂಕಷ್ಟವಾಯಿತು’ ಎಂದರೆ ದೇಶದಲ್ಲಿ ಕೆಲವರು ಧರ್ಮವನ್ನು ಉಳಿಸುವವರು ಒಂದೆಡೆ ಹೋರಾಟ ಮಾಡುತ್ತಿದ್ದರೆ ಮತ್ತೊಂಡೆದೆ ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನೆಪದಲ್ಲಿ ರಾಜ್ಯದಲ್ಲಿನ ನೆಮ್ಮದಿಯಲ್ಲಿದ್ದ ಜನರು ತಮ್ಮ ಜಾತಿಗಳಲ್ಲಿಯೇ ಗುರುತಿಸಿಕೊಳ್ಳುತ್ತಿರುವುದರ ಪರಿಣಾಮ ಜನ ಧರ್ಮ- ಅಧರ್ಮದ ಸಂಕಷ್ಟದಲ್ಲಿದ್ದಾರೆ. ‘ವಿಶ್ವಕ್ಕೆ ಶಾಂತಿಯ ಭಂಗವಾಯಿತು’ ಎಂದರೆ ಇಡೀ ವಿಶ್ವದ ಎಲ್ಲಾ ನಾಯಕರು ಒಗ್ಗೂಡಿದ್ದರು, ಸದ್ಯ ನಾನೇ ದೊಡ್ಡವನು ಎನ್ನುವ ಮೇಲಾಟದ ಪರಿಣಾಮ ಎಲ್ಲೆಡೆ ಅಶಾಂತಿ ಕಾಡುತ್ತಿದೆ. ಉದಾಹರಣೆಗೆ ರಷ್ಯಾ-ಉಕ್ರೆನ್, ಇಸ್ರೆಲ್, ಪ್ಯಾಲೆಸ್ತೀನ್, ಅಮೆರಿಕ, ಇರಾನ್ ದೇಶಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಪರಿಣಾಮ ಜಗತ್ತಿನಲ್ಲಿ ಯುದ್ದ ನಿರಂತರವಾಗಿ ಎಲ್ಲೆಡೆ ನಡೆಯುತ್ತಿದ್ದು, ಜಗತ್ತಿನಲ್ಲಿ ಶಾಂತಿ ಭಂಗವಾಗಿದೆ ಎಂಬುದು ಇದರ ಗೂಡಾರ್ಥ ಎನ್ನುತ್ತಾರೆ ಮಾಜಿ ಸೈನಿಕ ದಕ್ಷಿಣಮೂರ್ತಿ ಹಾಗೂ ದೇವಾಲಯದ ಗೌಡ.
‘ಧರೆಗೆ ವರುಣನ ಆಗಮವಾಯಿತು’ ಎಂದರೆ ಮುಂಗಾರು ಮಳೆ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿದೆ. ಅದರ ಅಬ್ಬರ ಇನ್ನು ಕಡಿಮೆಯಾಗಿಲ್ಲ. ಇನ್ನು ಮುಂದೆ ಹಿಂಗಾರು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ. ಮಳೆ ಸರಿಯಾದ ಸಮಯಕ್ಕೆ ಅಗತ್ಯಕ್ಕಿಂತ ಜಾಸ್ತಿ ಬಂದರೂ ಸಹ ನಷ್ಟವಾಗುವ ಸಂಭವವಿದೆ. ಮೈಲಾರಲಿಂಗ ರೈತರ ಕಡೆ ಕೃಪೆ ತೋರಿ ಅತಿವೃಷ್ಟಿ ಆಗದಂತೆ ಕಾಪಾಡಲಿ ಎನ್ನುತ್ತಾರೆ ದೇವಾಲಯದ ಗೌಡ ಹಾಗೂ ರೈತ ಬಿ.ಜಿ.ಮೈಲಾರಪ್ಪ.ಕಾರ್ಣಿಕಕ್ಕೆ 3 ದಿನ ಪೂಜಾರರ ಉಪವಾಸ
ಕಾರ್ಣಿಕದ ಮೂರು ದಿನಗಳ ಮುಂಚೆಯೇ ಪೂಜಾರಾದ ದಶರಥರು ಉಪವಾಸವಿರುವ ಕ್ರಮ ಅನುಸರಿಸುತ್ತಾರೆ. ಪ್ರತಿ ಬಾರಿಯಂತೆ ಆಯುಧಪೂಜೆ ಹಿಂದಿನ ದಿನ 3 ದಿನಗಳ ಕಾಲ ಪೂಜಾರರು ಉಪವಾಸ ವ್ರತಾಚರಣೆ ನಡೆಸಿ ಪೂಜಾ ಕೈಂಕರ್ಯ ನಡೆಸಿದರು. ವಿಜಯದಶಮಿಯ ರಾತ್ರಿ ಸೇವಂತಿಗೆ ಹೂವಿನಲ್ಲಿ ಅಲಂಕೃತಗೊಂಡ ಸ್ವಾಮಿಯು ಕಾರ್ಣಿಕ ಮತ್ತು ಬನ್ನಿಮುಡಿಯಲು ಪೂಜಾರರನ್ನು ಕರೆತರುವುದು ಇಲ್ಲಿನ ವಿಶೇಷ.ಕಾರ್ಣಿಕಕ್ಕೆ ಮೈಸೂರು ರಾಜರು ಆದ್ಯತೆ
ಈ ಹಿಂದೆ ಮೈಸೂರು ರಾಜರ ಆಳ್ವಿಕೆಯಲ್ಲಿ ಇಲ್ಲಿನ ಕಾರ್ಣಿಕವನ್ನು ಟೆಲಿಗ್ರಾಮ್ ಮುಖಾಂತರ ತರಿಸಿಕೊಂಡು ಆಸ್ಥಾನದ ಕವಿಗಳು ಮತ್ತು ವಿದ್ವಾಂಸರೊಂದಿಗೆ ವ್ಯಾಖ್ಯಾನಿಸಿ ತಮ್ಮ ರಾಜ್ಯಾಡಳಿತವನ್ನು ಸುಗಮವಾಗಿ ನಡೆಸಲು ರೂಪುರೇಷೆಗಳನ್ನು ಸಿದ್ಧತೆ ಮಾಡಿಕೊಳ್ಳುವ ಮೂಲಕ ಇಲ್ಲಿನ ಕಾರ್ಣಿಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು.