ಸಾರಾಂಶ
ಹಾಲಿ ಮೈಸೂರು ನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಪಂ ಹಾಗೂ ಗ್ರಾಪಂಗಳನ್ನು ವಿಲೀನ ಪಡಿಸಿಕೊಂಡು ಯೋಜನಾ ಬದ್ದ ಬೆಳವಣಿಗೆಗೆ ಉದ್ದೇಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸಿ ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಸಭೆ ಜರುಗಿತು.ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚನೆ ಮಾಡಿ ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾಪಿತ ಬೃಹತ್ ಮೈಸೂರು ಮಹಾನಗರ ಪಾಲಿಕೆಯ ಎಲ್ಲೆ (ಗಡಿ) ಯನ್ನು ಗುರುತಿಸಿ 2018ರ ವಾರ್ಡ್ಪುನರ್ ವಿಂಗಡನೆ ಅನ್ನು ಪರಿಗಣನೆಗೆ ತೆಗೆದುಕೊಂಡು, ಹಾಲಿ ಮೈಸೂರು ನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಪಂ ಹಾಗೂ ಗ್ರಾಪಂಗಳನ್ನು ವಿಲೀನ ಪಡಿಸಿಕೊಂಡು ಯೋಜನಾ ಬದ್ದ ಬೆಳವಣಿಗೆಗೆ ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಮೈಸೂರು ಸುತ್ತಮುತ್ತಲಿನ 20 ರಿಂದ 30 ಹಳ್ಳಿಗಳನ್ನು ಬೃಹತ್ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡು ಇದಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ಯೋಜನಾ ವರದಿ ಸಿದ್ದಪಡಿಸಿಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲೂ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ಜನಸಂಖ್ಯೆ 13.30 ಲಕ್ಷದಷ್ಟಿದ್ದು, ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಪಂ ಮತ್ತು ಗ್ರಾಪಂಗಳನ್ನು ಸೇರಿಸಿಕೊಂಡರೆ 16.80 ಲಕ್ಷ ಜನಸಂಖ್ಯೆ ಆಗುತ್ತದೆ ಎಂದು ಸಭೆಗೆ ಮೈಸೂರು ಜಿಲ್ಲಾಧಿಕಾರಿ ತಿಳಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕೊರತೆ ಇರುವುದಿಲ್ಲ, ಹೀಗಿರುವಾಗ ಬೃಹತ್ಮೈಸೂರು ಮಹಾನಗರ ಪಾಲಿಕೆಯನ್ನು ರಚಿಸಲು ಯಾವುದೇ ರೀತಿಯ ಅಡೆತಡೆ ಇಲ್ಲ ಎಂದು ಅವರು ಹೇಳಿದರು.ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳಿಗೆ ಪಾಲಿಕೆಯ ವತಿಯಿಂದಲೇ ಕುಡಿಯುವ ನೀರಿನ ಸವಲತ್ತನ್ನು ಒದಗಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬಡಾವಣೆಗಳು ಸಹ ಅಭಿವೃದ್ಧಿಗೊಂಡಿದ್ದು, ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬೇಡಿಕೆಯು ಹೆಚ್ಚಾಗಿರುತ್ತದೆ. ಅದರಂತೆ ಸೇವೆ ಪಾಲಿಕೆಯಿಂದ ವಿಸ್ತರಿಸಬೇಕಾಗಿದೆ ಎಂದು ಅಧಿಕಾರಿಗಳ ಸಭೆಗೆ ತಿಳಿಸಿದರು.ಮೈಸೂರು ಸುತ್ತಮುತ್ತಲಿನ ಗ್ರಾಮಗಳ, ಬಡಾವಣೆಗಳನ್ನು ಮೈಸೂರು ನಗರ ಪಾಲಿಕೆ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಎಂದು ಸಚಿವ ಬೈರತಿ ಸುರೇಶ ಸೂಚಿಸಿದರು.ಮೈಸೂರು ಮಹಾನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೋಳ ಮತ್ತು ಬೋಗಾದಿ ಪಪಂ, ಇಲವಾಲ ಗ್ರಾಪಂ, ಇಲವಾಲ ಗ್ರಾಮ, ಸಿದ್ದಲಿಂಗಪುರ ಗ್ರಾಪಂ, ಚಾಮುಂಡಿಬೆಟ್ಟ ಗ್ರಾಪಂ, ಆಲನಹಳ್ಳಿ ಗ್ರಾಪಂ ಮತ್ತು ನಾಗನಹಳ್ಳಿ ಗ್ರಾಪಂನ ಶ್ಯಾದನಹಳ್ಳಿ ಗ್ರಾಮ ಮೈಸೂರು ಮಹಾನಗರ ಪಾಲಿಕೆಯ ಸರಹದ್ದಿಗೆ ಹೊಂದಿಕೊಂಡಿದೆ.ಇವುಗಳಲ್ಲಿ ಕೆಲ ಸ್ಥಳೀಯ ಸಂಸ್ಥೆಯ ಕೌನ್ಸಿಲ್ ಸಭೆಯಲ್ಲಿ ಬೃಹತ್ಮೈಸೂರು ಮಹಾನಗರ ಪಾಲಿಕೆಗೆ ಸೇರಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿರುತ್ತಾರೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಬಾಕಿ ಉಳಿದ ಸ್ಥಳೀಯ ಸಂಸ್ಥೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆಯನ್ನು ಇರಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಅದಷ್ಟು ಬೇಗ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಅವರು ಅಧಿಕಾರಿಗಳಿಗೆ ಸೂಚಿಸಿದರು.ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳಾನ್, ಡಿಸಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಎಂಡಿ ಬಿ. ಶರತ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್. ಸೆಲ್ವಮಣಿ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತ ಆರ್. ವೆಂಕಟಾಚಲಪತಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ತನ್ವೀರ್ ಶೇಖ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಇದ್ದರು.