ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ರಂಗತಂಡದ ವತಿಯಿಂದ ಡಿ. 14 ರಿಂದ ಎರಡು ದಿನಗಳ ಕಾಲ ಶಾಲಾ ರಂಗ ಮಕ್ಕಳ ಹಬ್ಬವನ್ನು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.ಡಿ. 14 ರಂದು ಬೆಳಗ್ಗೆ 10.30ಕ್ಕೆ ಶಾಲಾರಂಗ ಮಕ್ಕಳ ಹಬ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಶಾಲಾರಂಗ ವಿಕಾಸ ಯೋಜನೆಯಲ್ಲಿ ತರಬೇತಿ ಹೊಂದಿದ ಮಕ್ಕಳು ಈ ಹಬ್ಬದಲ್ಲಿ ಪಾಲ್ಗೊಂಡು, ನಾಟಕಗಳ ಪ್ರದರ್ಶನದ ಜತೆಗೆ ಹಾಡು, ನೃತ್ಯ ಪ್ರದರ್ಶನ ನೀಡುವುದಾಗಿ ನಟ ಪ್ರಕಾಶ್ ರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಾಲಾರಂಗ ಮಕ್ಕಳ ಹಬ್ಬದ ಮೊದಲ ದಿನ ಉದ್ಘಾಟನಾ ಸಮಾರಂಭದ ನಂತರ ಬೆಳಗ್ಗೆ 11.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಮಕ್ಕಳಿಂದ ‘ರಿಂಗಿನಾಟ’ ನಾಟಕ ಪ್ರದರ್ಶನ, ಮಧ್ಯಾಹ್ನ 3ಕ್ಕೆ ಹೊನ್ನಾವರ ತಾಲೂಕಿನ ಅಳ್ಳಂಕಿಯ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಂದ ‘ಧರಣಿ ಮಂಡಲ’ ನಾಟಕ ಪ್ರದರ್ಶನ, ಸಂಜೆ 4ಕ್ಕೆ ವಿವಿಧ ಶಾಲಾ ಮಕ್ಕಳಿಂದ ರಂಗಶಿಬಿರ ಗೀತೆಗಳ ಪ್ರಸ್ತುತಿ, ಸಂಜೆ 5.30ಕ್ಕೆ ಪಿರಿಯಾಪಟ್ಟಣ ತಾಲೂಕಿನ ಗಿರಗೂರು ಮಿಳಿಂದ ಶಾಲೆಯ ಮಕ್ಕಳಿಂದ ‘ಚೋರ ಚರಣದಾಸ’ ನಾಟಕ ಪ್ರದರ್ಶನ, 6.30ಕ್ಕೆ ಮಕ್ಕಳಿಂದ ಕಥಾಭಿನಯ ಮತ್ತು ನೃತ್ಯ ಕಾರ್ಯಕ್ರಮ, ಸಂಜೆ 7.30ಕ್ಕೆ ನಿರ್ದಿಗಂತ ತಂಡದಿಂದ ಕಿಂದರಜೋಗಿ ಗೀತೆಗಳ ಪ್ರಸ್ತುತಿ ಇರುತ್ತದೆ ಎಂದು ಅವರು ತಿಳಿಸಿದರು.ಡಿ. 15ರಂದು ಬೆಳಗ್ಗೆ 10ಕ್ಕೆ ಮೈಸೂರಿನ ಕಲಿಯುವ ಮನೆ ಮಕ್ಕಳಿಂದ ಬೆಳಕಿನ ಕಡೆಗೆ ನಾಟಕ, ಮಧ್ಯಾಹ್ನ 12ಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ‘ಪ್ರೀತಿಯ ಕಾಳು’ ನಾಟಕ ಪ್ರದರ್ಶನ ಇರುತ್ತದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ಅವರು ಹೇಳಿದರು.
ಶಾಲಾರಂಗ ವಿಕಾಸ ಎಂಬ ಪ್ರಾಯೋಗಿಕ ಯೋಜನೆಯಡಿ ಐದು ಮಂದಿ ರಂಗ ಶಿಕ್ಷಕರನ್ನು ರಾಜ್ಯದ 5 ವಸತಿ ಶಾಲೆಗಳಿಗೆ ನಿರ್ದಿಗಂತ ಸಂಸ್ಥೆಯಿಂದ ಕಳುಹಿಸಿ, ಅವರು 6 ತಿಂಗಳ ಕಾಲ ಶಾಲೆಯಲ್ಲಿ ಶಿಕ್ಷಣ ಮತ್ತು ರಂಗಭೂಮಿಯ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸುತ್ತಾ, ಅಲ್ಲಿ ಪ್ರತಿ ವಾರಾಂತ್ಯ ರಂಗ ಪ್ರದರ್ಶನ, ಬಣ್ಣದ ಹೆಜ್ಜೆ ಶಿಬಿರ, ಕಾವ್ಯರಂಗ ಮುಂತಾದ ಚಟುವಟಿಕೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.ಸಮಾರೋಪ ಸಮಾರಂಭ ಶಾಲಾರಂಗ ಮಕ್ಕಳ ಹಬ್ಬವಾಗಿದೆ. 6 ತಿಂಗಳು ಕಲಿತಿರುವುದನ್ನು ಸುಮಾರು 150 ಮಕ್ಕಳು ರಂಗದ ಮೇಲೆ ಪ್ರಸ್ತುತಪಡಿಸುವುದಾಗಿ ಅವರು ಹೇಳಿದರು.
ಶಾಲಾರಂಗ ಯೋಜನೆಯಲ್ಲಿ 10 ಜನರನ್ನೊಳಗೊಂಡ ನಮ್ಮ ರಂಗತಂಡವು ರಾಜ್ಯದ ಸುಮಾರು 110 ಶಾಲೆಗಳಲ್ಲಿ 30 ನಿಮಿಷದ 3 ಕಿರುನಾಟಕ. ಗೊಂಬೆಯಾಟ, ಅಭಿನಯಗೀತೆ, ಕಥಾಭಿನಯ, ಮಕ್ಕಳ ಹಾಡುಗಳು ಇವೆಲ್ಲವನ್ನೂ ಪ್ರದರ್ಶಿಸಿದೆ. ಜತೆಗೆ ಮಕ್ಕಳಿಗೆ ನೆರವಾಗಬಲ್ಲ ರಂಗಾಟಿಕೆ, ಹಾಡುಗಳು, ಲೇಖನಗಳ ಹೊತ್ತಿಗೆಯನ್ನು ಆಯಾ ಶಾಲೆಗಳಿಗೆ ಕೊಡುಗೆಯಾಗಿ ನೀಡಿದೆ ಎಂದರು.ನಿರ್ದಿಗಂತ ರಂಗಹಬ್ಬ
ಡಿ. 1 5ರಿಂದ 17 ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ನಿರ್ದಿಗಂತ ರಂಗಹಬ್ಬ ಆಯೋಜಿಸಲಾಗಿದೆ.ಡಿ. 15 ರಂದು ಸವಿತಾ ರಾಣಿ ನಿರ್ದೇಶನದ ರಸೀದಿ ಟಿಕೆಟ್, ಡಿ. 16ರಂದು ಶಕೀಲ್ ಅಹ್ಮದ್ ನಿರ್ದೇಶನದ ಅನಾಮಿಕನ ಸಾವು ಹಾಗೂ ಡಿ. 17 ರಂದು ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಇರುತ್ತದೆ. ನಾಟಕ ಪ್ರದರ್ಶನಗಳು ಪ್ರತಿ ದಿನ ಸಂಜೆ 7ಕ್ಕೆ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.
ಪಂಚತಂತ್ರ ಪರಿಚಯಪಂಚತಂತ್ರವನ್ನು ರಂಗದ ಮೇಲೆ ತರುವ ಉದ್ದೇಶ ನಮಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಏಳೆಂಟು ರಂಗ ನಿರ್ದೇಶಕರು 6 ತಿಂಗಳ ಕಾಲ ಸಂಶೋಧನೆ ನಡೆಸಿ, ನಾಟಕಕ್ಕೆ ಒಂದು ರೂಪ ಕೊಡುವರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲೋಕದ ಜ್ಞಾನದ ಅರಿವು ಮೂಡಿಸುವಲ್ಲಿ ಈ ನಾಟಕ ಸಹಕಾರಿಯಾಗಬೇಕು ಎನ್ನುವ ಉದ್ದೇಶದಿಂದ ದೀರ್ಘವಾದ ನಾಟಕಗಳನ್ನು ಮಾಡದೇ ಬಿಡಿ- ಬಿಡಿಯಾಗಿ ನಾಟಕ ಮಾಡುವ ಯೋಜನೆ ಇದೆ. ಈ ನಾಟಕಗಳನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ ಎಂದು ತಮ್ಮ ಮುಂದಿನ ಯೋಜನೆ ಕುರಿತು ಪ್ರಕಾಶ್ ರಾಜ್ ತಿಳಿಸಿದರು.
ಇದೇ ತಿಂಗಳ 26 ರಿಂದ 3 ದಿನಗಳ ಕಾಲ ನಿರ್ದಿಗಂತದಲ್ಲಿ ದೇಶದ ವಿವಿಧ ಕಡೆಯ ವಿಷಯ ತಜ್ಞರು, ಮಕ್ಕಳ ಮನಃಶಾಸ್ತ್ರಜ್ಞರು, ರಂಗಭೂಮಿಗೆ ಸಂಬಂಧಿಸಿದವರು ಒಂದೆಡೆ ಕುಳಿತು ಮಕ್ಕಳಿಗೆ ರಂಗ ಶಿಕ್ಷಣ ಕುರಿತು ಚರ್ಚೆ- ಸಂವಾದ ನಡೆಸುವರು. ಆ ಸಭೆಯಲ್ಲಿ ಹೊರಬರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.ಮಕ್ಕಳಿಗೆ ರಂಗ ಶಿಕ್ಷಣದ ಅವಶ್ಯಕತೆ ಬಹಳ ಇದೆ. ಇದರಿಂದ ಮಕ್ಕಳು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತಾರೆ. ವಿಜ್ಞಾನ- ಗಣಿತಗಳ ಬಗ್ಗೆ ಏಕಾಗ್ರತೆ ಮೂಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕೀಳರಿಮೆ ಹೋಗುತ್ತದೆ. ನಾಲ್ಕು ಜನರ ಮುಂದೆ ನಿಲ್ಲುವ ಧೈರ್ಯ ಬರುತ್ತದೆ. ಆದ್ದರಿಂದ ಶಾಲೆಯಲ್ಲಿ ರಂಗ ಶಿಕ್ಷಣ ನೀಡಬೇಕು. ಸರ್ಕಾರ ಸುಮಾರು 65 ಜನ ರಂಗ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ ಅವರಿಗೆ ಕಲಿಸುವುದಕ್ಕೆ ಪಠ್ಯಕ್ರಮವಿಲ್ಲ. ಆ ಶಿಕ್ಷಕರನ್ನು ನಿರ್ದಿಗಂತ ಸಂಸ್ಥೆಗೆ ಕಳುಹಿಸಿಕೊಡಿ, ಅವರನ್ನು ತರಬೇತಿಗೊಳಿಸಿ, ಪಠ್ಯ ನೀಡುತ್ತೆವೆ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಏಕೆಂದರೆ ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ ಸಮಾಜವು ಮಾಡಬೇಕು ಎಂದರು.