ಬೆಳಗಾವಿ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಮೈಸೂರು ದಸರಾ ಮಾದರಿ ದೀಪಾಲಂಕಾರ

| Published : Dec 21 2024, 01:16 AM IST

ಬೆಳಗಾವಿ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಮೈಸೂರು ದಸರಾ ಮಾದರಿ ದೀಪಾಲಂಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ ಅವರು 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ. 26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮೈಸೂರು ದಸರಾ ಮಾದರಿ ದೀಪಾಲಂಕಾರ ಮಾಡಲಾಗುತ್ತದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ.

ಹಾವೇರಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ದಸರಾ ಮಾದರಿ ದೀಪಾಲಂಕಾರ ಮಾಡಲಾಗುವುದು. ಇದರ ಜವಾಬ್ದಾರಿಯನ್ನು ಹೆಸ್ಕಾಂಗೆ ನೀಡಲಾಗಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಮಹಾತ್ಮ ಗಾಂಧೀಜಿಯವರು 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ. 26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮೈಸೂರು ದಸರಾ ಮಾದರಿ ದೀಪಾಲಂಕಾರ ಜವಾಬ್ದಾರಿಯನ್ನು ಹೆಸ್ಕಾಂಗೆ ನೀಡಲಾಗಿದೆ. ಮೈಸೂರು ದಸರಾಕ್ಕೆ ದೀಪಾಲಂಕಾರ ಮಾಡುವವರೇ ಬೆಳಗಾವಿಯಲ್ಲಿ ದೀಪಾಲಂಕಾರ ಮಾಡುತ್ತಿದ್ದಾರೆ. ಬೆಳಗಾವಿ ನಗರದ ರಸ್ತೆಗಳು, ಉದ್ಯಾನ, ವೃತ್ತಗಳು, ಕಟ್ಟಡಗಳಿಗೆ ಅತ್ಯಂತ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಇಂತಹ ಅವಕಾಶ ಸಿಕ್ಕಿದೆ ಎಂದರು.

ಸೋಲಾರ್ ಅಳವಡಿಕೆಗೆ ಸಲಹೆ: ರೈತರ ಪಂಪಸೆಟ್‌ಗಳಿಗೆ ಸೋಲಾರ್‌ ಅಳವಡಿಕೆ ಖರ್ಚು ಕಡಿಮೆಯಾಗಿದೆ ಹಾಗೂ ಅಂದಾಜು 12 ತಾಸು ನೀರು ಎತ್ತಬಹುದು. ರೈತರು ಸೋಲಾರ್‌ ಅಳವಡಿಕೆಗೆ ಹಿಂದೇಟು ಹಾಕುತ್ತಿರುವುದು ತಿಳಿದುಬಂದಿದೆ. ಆದರೆ ಸೋಲಾರ್‌ ಅಳವಡಿಕೆಗೆ ಕೇಂದ್ರ ಶೇ. 30 ಹಾಗೂ ರಾಜ್ಯ ಶೇ. 50ರಷ್ಟು ವೆಚ್ಚ ಭರಿಸಲಿದ್ದು, ಫಲಾನುಭವಿಗಳು ಶೇ. 20ರಷ್ಟು ಭರಿಸಬೇಕಾಗುತ್ತದೆ. ಈಗಾಗಲೇ 740 ಅರ್ಜಿಗಳು ಬಂದಿದ್ದು, ಕೆಲವು ಪ್ರಗತಿಯಲ್ಲಿವೆ. ಸೋಲಾರ್‌ ಶಕ್ತಿ ಅಳವಡಿಕೆಯಿಂದ ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ರೈತರು ಸೋಲಾರ್‌ ಶಕ್ತಿ ಅಳವಡಿಕೆ ಮಾಡಿಕೊಳ್ಳಬೇಕು ಎಂದರು.

ರೈತರಿಗೆ ಕಡಿಮೆ ಖರ್ಚಿನಲ್ಲಿ ವಿದ್ಯುತ್ ನೀಡುವ ಯೋಜನೆಯಾಗಿದ್ದು, ಇದು ಇಂಧನ ಸಚಿವರಾದ ಜಾರ್ಜ್ ಅವರ ಕನಸಾಗಿದೆ. ರೈತರ ಜಮೀನುಗಳಿಗೆ ಅಧಿಕಾರಿಗಳೊಂದಿಗೆ ತೆರಳಿ, ಸೋಲಾರ್‌ ಶಕ್ತಿ ಕುರಿತು ಜಾಗೃತಿ ಮೂಡಿಸಲಾಗುವುದು. ಇದು ಜನಪ್ರಿಯ ಯೋಜನೆಯಾಗಲಿದೆ ಎಂದು ಹೇಳಿದರು.

ರೈತರ ಅಕ್ರಮ ಕೊಳವೆಬಾವಿ ವಿದ್ಯುತ್ ಸಂಪರ್ಕ ಸಕ್ರಮಗೊಳಿಸುವ ಯೋಜನೆ ಸ್ಥಗಿತಗೊಳಿಸಲಾಗಿದ್ದು, ಈ ಯೋಜನೆಯನ್ನು ಪುನಃ ಆರಂಭಿಸುವಂತೆ ಸಿಎಂ, ಡಿಸಿಎಂ ಅವರ ಗಮನಕ್ಕೆ ತರಲಾಗಿದೆ. ಇದನ್ನು ಸರ್ಕಾರ ತೀರ್ಮಾನ ಮಾಡಬೇಕಾಗಿದೆ ಎಂದರು.

ಶೇ. 98.17ರಷ್ಟು ಸಾಧನೆ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗ ಗೃಹಜ್ಯೋತಿ ಯೋಜನೆಯಡಿ ಶೇ. 98.17ರಷ್ಟು ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಇದನ್ನು ನೂರಕ್ಕೆ ನೂರರಷ್ಟು ಸಾಧಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯುತ್ ಬಿಲ್ ಪಾವತಿ ಮಾಡಿ: ಹೆಸ್ಕಾಂ ಸಾರ್ವಜನಿಕ ಆಸ್ತಿಯಾಗಿದ್ದು, ಅದನ್ನು ಉಳಿಸುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ. ಹಾಗಾಗಿ ಖಾಸಗಿ ಕಂಪನಿಗಳು, ವ್ಯಾಪಾರಸ್ಥರು ಸೇರಿದಂತೆ ಕೈಗಾರಿಕೆಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡರು.

ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆಯನ್ನು ಇಂಧನ ಸಚಿವರು ಹಾವೇರಿ ಜಿಲ್ಲೆಯಿಂದ ಆರಂಭಿಸುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ದಿನಾಂಕ ನಿಗದಿಯಾಗಿಲ್ಲ, ಸಚಿವರು ನಡೆಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಶಿಥಿಲಾವಸ್ಥೆ ಕಂಬಗಳ ಸರ್ವೇ: ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳ ಹಾಗೂ ತುಕ್ಕು ಹಿಡಿದಿರುವ ವಿದ್ಯುತ್ ತಂತಿಗಳ ಬದಲಾವಣೆ ಮಾಡಲು ಸರ್ವೇ ಮಾಡಲು ಸೂಚನೆ ನೀಡಲಾಗಿದೆ. ಈ ಕಾರ್ಯಕ್ಕೆ ವಿಶೇಷ ಅನುದಾನದ ಅವಶ್ಯಕತೆ ಇದ್ದು, ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗುವುದು. ಜೀವ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುಂಜಾಗ್ರತೆ ಕೈಗೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಸಾರ್ವಜನಿಕರು ಸಹ ಅಕ್ರಮವಾಗಿ ಜಂಪ್ ಹಾಕುವುದು, ಕತ್ತಲಲ್ಲಿ ವಿದ್ಯುತ್ ತಂತಿಗಳನ್ನು ಮುಟ್ಟುವುದಾಗಲಿ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಪರಮೇಶಪ್ಪ ಎಣ್ಣಿ, ಬಸವರಾಜ ಹೆಡಿಗ್ಗೊಂಡ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ. ಹೊಸಮನಿ ಇದ್ದರು.