ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಏಕೀಕರಣ ಟ್ರಸ್ಟ್, ಮೈಸೂರು ಹಾಗೂ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಲೇಖಕಿ, ರಂಗಕರ್ಮಿ ಡಾ. ಸುಜಾತ ಅಕ್ಕಿ ಅವರ ಮೂರು ಏಕವ್ಯಕ್ತಿ ಪ್ರದರ್ಶನಗಳ ಮಹಿಳಾ ನಾಟಕೋತ್ಸವವು ಭಾನುವಾರ ''ಅಘಲೆ'' ನಾಟಕದ ಮನೋಜ್ಞ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಮಾರೋಪಗೊಂಡಿತು.ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ. ಭಾಗ್ಯಲಕ್ಷ್ಮಿ, ನಿಸರ್ಗ ಡಾ. ದಿವ್ಯ ಹಾಗೂ ಲೇಖಕಿ ಡಾ. ಸುಜಾತ ಅಕ್ಕಿ ಮಾತನಾಡಿ, ಮಹಿಳಾ ಬದುಕಿನ ಹೋರಾಟ, ಸಮಾನತೆ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅಗತ್ಯವನ್ನು ಒತ್ತಿ ಹೇಳಿದರು.ಈ ವಿಶೇಷ ನಾಟಕೋತ್ಸವದಲ್ಲಿ ಮಹಿಳಾ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಮೂರು ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಂಡವು. ಸಮಾರೋಪದ ಅಘಲೆ ನಾಟಕವು ಮಹಿಳೆಯ ಇತಿಹಾಸ, ನಾಗರಿಕತೆಯ ಬೆಳವಣಿಗೆ ಹಾಗೂ ಇಂದಿನ ಸಾಮಾಜಿಕ ವಾಸ್ತವವನ್ನು ಒಟ್ಟುಗೂಡಿಸಿದ ಚಿಂತನಾತ್ಮಕ ಕೃತಿಯಾಗಿದೆ. ಮಾನವ ವಿಕಾಸದ ಪಥದಲ್ಲಿ ಕೃಷಿಯನ್ನು ಕಂಡುಹಿಡಿದು, ಜೋಗುಳದ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿದವಳು ಸ್ತ್ರೀ ಎಂಬ ಸತ್ಯವನ್ನು ನಾಟಕ ನೆನಪಿಸುತ್ತದೆಮಹಿಳಾ ಲೇಖಕಿಯೇ ರಚಿಸಿ, ವಿನ್ಯಾಸಗೊಳಿಸಿ, ಮಹಿಳಾ ಕಲಾವಿದೆಯರಿಂದಲೇ ಪ್ರದರ್ಶಿಸಲ್ಪಟ್ಟ ಈ ವಿಶಿಷ್ಟ ನಾಟಕೋತ್ಸವ ಮೈಸೂರಿನ ರಂಗಭೂಮಿಯಲ್ಲಿ ಅಪರೂಪದ ಕಲಾ ಪ್ರಯೋಗವಾಗಿ ಪ್ರಶಂಸೆಗೆ ಪಾತ್ರವಾಯಿತು.ಮೂರು ನಾಟಕಗಳ ರಂಗಪಠ್ಯವನ್ನು ರೂಪಿಸಿ ನಿರ್ದೇಶಕ ಅರಸೀಕೆರೆ ಯೋಗಾನಂದ ಯಶಸ್ವಿಯಾಗಿ ರಂಗದ ಮೇಲೆ ತಂದರು. ಸಂಗೀತವನ್ನು ಸಿದ್ದೇಶ್ವರ ಬದನವಾಳು ಹಾಗೂ ಸುಬ್ರಮಣ್ಯ ಸಂಯೋಜಿಸಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಕುಮಾರ್ ಬಿ. ಹೆಗ್ಗೋಡು ನಿರ್ವಹಿಸಿದ್ದರು. ಮೂರು ನಾಟಕಗಳ ರಚನೆ ಡಾ. ಸುಜಾತ ಅಕ್ಕಿ ಅವರದ್ದಾಗಿದೆ.