ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ

| Published : Apr 28 2024, 01:19 AM IST

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಿತು. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಬಿ. ಶೇಖರ್ ಗೋಪಿನಾಥಂ ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡುಗು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.

ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಮತದಾನ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳು ಮತ್ತು ವಿವಿ ಪ್ಯಾಟ್ ಗಳನ್ನು ಆಯಾಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ ಮಸ್ಟರಿಂಗ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಒಪ್ಪಿಸಿದರು.

ಮೈಸೂರು- ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ ಮಸ್ಟರಿಂಗ್ ಆದ ಬಳಿಕ ಪೊಲೀಸ್ ಭದ್ರತೆಯಲ್ಲಿ ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂಗೆ ಇವಿಎಂ, ವಿವಿ ಪ್ಯಾಟ್ ಗಳನ್ನು ಸೀಲ್ ಮಾಡಿ ರವಾನಿಸಿದ್ದಾರೆ.

ಸ್ಟ್ರಾಂಗ್ ರೂಂಗೆ 3 ಹಂತದ ಭದ್ರತೆ: ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಂಗೆ (ಭದ್ರತಾ ಕೊಠಡಿ) 3 ಹಂತದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ.

ಮೊದಲ ಹಂತದಲ್ಲಿ ಸಿಎಪಿಎಫ್ ತುಕಡಿಯಿಂದ, 2ನೇ ಹಂತದಲ್ಲಿ ಸಶಸ್ತ್ರ ಮೀಸಲು ಪಡೆ ಹಾಗೂ 3ನೇ ಹಂತದಲ್ಲಿ ಸ್ಥಳೀಯ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಅಲ್ಲದೆ, ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದ್ದು ಹಾಗೂ ಭದ್ರತಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಲಾಗ್ ಬುಕ್ ನಲ್ಲಿ ನಮೂದಿಸಿವುದನ್ನು ಸಹ ಕಡ್ಡಾಯಗೊಳಿಸಲಾಗಿದೆ.

38 ದಿನ ಕಾಯಬೇಕು: ಈ ಬಾರಿ ಲೋಕಸಭಾ ಚುನಾವಣೆಯು ದೇಶಾದ್ಯಂತ 7 ಹಂತಗಳಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ ರಾಜ್ಯ ಮೊದಲ ಹಂತದ ಚುನಾವಣೆಯು ಶುಕ್ರವಾರ ಜರುಗಿದ್ದು, 2ನೇ ಹಂತದ ಚುನಾವಣೆಯು ಮೇ 7 ರಂದು ನಡೆಯಲಿದೆ. ಏಳು ಹಂತಗಳ ಚುನಾವಣೆಯು ಮುಗಿದ ಬಳಿಕ ದೇಶಾದ್ಯಂತ ಜೂ.4 ರಂದು ಏಕಕಾಲದಲ್ಲಿ ಮತ ಎಣಿಕೆ ಕಾರ್ಯವು ಜರುಗಲಿದೆ. ಹೀಗಾಗಿ, ಏ.26 ರಂದು ನಡೆದ ಚುನಾವಣೆಯ ಮತ ಎಣಿಕೆಯು ಜೂ.4 ರಂದು ನಡೆಯಬೇಕಿದೆ. ಅಂದರೆ ಇನ್ನೂ 38 ದಿನ ಕಾಯಬೇಕಿದೆ. ಅಲ್ಲಿಯವರೆಗೂ ಮತಯಂತ್ರಗಳಲ್ಲಿ ಅಭ್ಯರ್ಥಿಯ ಭವಿಷ್ಯವು ಭದ್ರವಾಗಿರಲಿದೆ.

ಜಿಲ್ಲಾಧಿಕಾರಿಯಿಂದ ಪರಿಶೀಲನೆ: ಸ್ಟ್ರಾಂಗ್ ರೂಂ ಸ್ಥಾಪಿಸಲಾಗಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಮತಯಂತ್ರಗಳಿಗೆ ಮೂರು ಹಂತದ ಭದ್ರತೆ ನೀಡಲಾಗುತ್ತಿದೆ. ಕಟ್ಟಡದ ಎಲ್ಲಾ ಸ್ಟ್ರಾಂಗ್ ರೂಂಗಳು, ಮತ ಎಣಿಕಾ ಕೇಂದ್ರಗಳಿಗೆ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಡಿಸಿಪಿ ಎಂ. ಮುತ್ತುರಾಜು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಹೇಶ್ ಹಾಗೂ ಇತರೆ ಚುನಾವಣಾಧಿಕಾರಿಗಳು ಇದ್ದರು.