ರಾಜ್ಯಮಟ್ಟದ ವ್ಹಾಲಿಬಾಲ್‌ ಪಂದ್ಯಾವಳಿ: ಮೈಸೂರು ಎಂಎಂಸಿ ತಂಡಗಳು ಚಾಂಪಿಯನ್‌

| Published : Jul 05 2024, 12:54 AM IST

ರಾಜ್ಯಮಟ್ಟದ ವ್ಹಾಲಿಬಾಲ್‌ ಪಂದ್ಯಾವಳಿ: ಮೈಸೂರು ಎಂಎಂಸಿ ತಂಡಗಳು ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಜರುಗಿದ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಾಜ್ಯಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಎಂಎಂಸಿ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದವು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತೇರದಾಳದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಜರುಗಿದ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಾಜ್ಯಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಒಟ್ಟು ೯೪ ಮಹಾವಿದ್ಯಾಲಯಗಳ ತಂಡಗಳ ನಡುವೆ ನಡೆದ ರಣರೋಚಕ ಹಣಾಹಣಿ ನಡೆದ ಫೈನಲ್‌ ಪಂದ್ಯದಲ್ಲಿ ಮೈಸೂರಿನ ಎಂಎಂಸಿ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದವು.

ಪುರುಷರ ಫೈನಲ್‌ನಲ್ಲಿ ಶಿವಮೊಗ್ಗದ ಶರಾವತಿ (ಡೆಂಟಲ್) ತಂಡವನ್ನು ಎದುರಿಸಿದ ಮೈಸೂರು ಎಂಎಂಸಿ ತಂಡ ೨೫-೧೮, ೨೫-೧೯ ಅಂಕಗಳ ಅಂತರದಿಂದ ಮಣಿಸಿ ವಿಜಯದ ನಗೆ ಬೀರಿತು. ತೃತೀಯ ಸ್ಥಾನ ಬೆಂಗಳೂರಿನ ತಂಡದ ಪಾಲಾದರೆ, ಆತಿಥೇಯ ದಾನಿಗೊಂಡ ಮೆಡಿಕಲ್ ಕಾಲೇಜು ನಾಲ್ಕನೇ ಸ್ಥಾನಕ್ಕೆ ತೃಪ್ತವಾಯಿತು.

ಮಹಿಳಾ ವಿಭಾಗದಲ್ಲಿ ತೇರದಾಳದ ದಾನಿಗೊಂಡ ಮೆಡಿಕಲ್ ಕಾಲೇಜು ತಂಡವನ್ನು ಮೈಸೂರಿನ ಎಂಎಂಸಿ ಮಹಿಳಾ ತಂಡ ೨೫-೨೧, ೨೫-೧೯ ಅಂಕಗಳ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿತು. ಮೂರನೇ ಸ್ಥಾನಕ್ಕೆ ನಡೆದ ಸೆಣಸಾಟದಲ್ಲಿ ಬೆಂಗಳೂರಿನ ಶ್ರೀ ಶ್ರೀ ತಂಡದ ವಿರುದ್ಧ ದಾವಣಗೆರೆಯ ತಂಡ ೨೫-೨೪, ೨೫-೧೮ ಅಂಕಗಳ ಅಂತರದಲ್ಲಿ ಮಣಿಸಿತು. ಕ್ವಾಟರ್, ಸೆಮಿಫೈನಲ್ ಹಂತದಲ್ಲಿ ರೋಚಕತೆಯಿಂದ ನಡೆದ ತಂಡಗಳ ಸೆಣಸಾಟ ಪ್ರೇಕ್ಷಕರನ್ನು ರಂಜಿಸಿದವು. ಸರ್ವೀಸ್, ಬ್ಲಾಕ್, ಬಿಗ್ ಶಾಟ್ ಮತ್ತು ಪ್ಲೇಸಿಂಗ್ ನೀಡುವ ಮೂಲಕ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ, ತಂಡಗಳ ಗೆಲುವಿಗೆ ಕಾರಣರಾದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾವೀರ ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ, ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ, ದೈಹಿಕ ಶಿಕ್ಷಣ ನಿರ್ದೇಶಕ ರಾಮು ಹಾಡಕರ, ಆಡಳಿತಾಧಿಕಾರಿ ರಾಜೇಂದ್ರ ಪರೀಟ ಪಂದ್ಯಾವಳಿಗಳ ಯಶಸ್ಸಿಗೆ ಅಹೋರಾತ್ರಿ ಶ್ರಮಿಸಿದ್ದನ್ನು ವಿ.ವಿ. ಸಂಯೋಜಕ ಡಾ. ಜೋಸೆಫ್ ಪ್ರಶಂಸಿದರು. ಅಂತಾರಾಷ್ಟ್ರೀಯ ತೀರ್ಪುಗಾರ ಜಹಾಗೀರದಾರ, ಸುರೇಶ ಮರಡಿ, ಲಕ್ಕಪ್ಪ ಗಂಟಿ, ಫೆಂಡಾರಿ ಸೇರಿದಂತೆ ಶಿಕ್ಷಣ ಇಲಾಖೆಯ ಇತರೆ ನಿರ್ಣಾಯಕರು ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಟ್ರೋಫಿ ಜೊತೆಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಆತಿಥ್ಯಕ್ಕೆ ಮನಸೋತ ಕ್ರೀಡಾಪಟುಗಳು:

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಸಂಘಟನೆಗೊಂಡ ಪಂದ್ಯಾವಳಿಯಲ್ಲಿ ೯೪ ಕಾಲೇಜುಗಳಿಂದ ಬಂದಿದ್ದ ೧೫೦೦ ಕ್ರೀಡಾಳುಗಳು ಉತ್ತರ ಕರ್ನಾಟಕದ ಭೋಜನ, ವಸತಿ, ಉಪಹಾರ, ಉಪಚಾರಗಳಿಂದ ಮತ್ತು ರಾತ್ರಿ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಮನರಂಜನೆ ಕಾರ್ಯಕ್ರಮದಿಂದ ಸಂತುಷ್ಟಗೊಂಡು ಸಂಸ್ಥೆಯ ಅಚ್ಚುಕಟ್ಟುತನದ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದರು.