ಸಾರಾಂಶ
-ನಂದಗುಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಕನ್ನಡಪ್ರಭ ವಾರ್ತೆ ಹೊಸಕೋಟೆ
ಬಿಜೆಪಿ, ಜೆಡಿಎಸ್ ಕೈಗೊಂಡಿರುವ ಮೈಸೂರು ಪಾದಯಾತ್ರೆ ವಿಘ್ನಗಳಿಂದಲೇ ಆರಂಭಿಸಿದ್ದು ದೋಸ್ತಿಗಳಲ್ಲಿ ಬಿರುಕು ಉಂಟಾಗಿದೆ ಶಾಸಕ ಶರತ್ ಬಚ್ಚೇಗೌಡ ಹೇಳಿದರು.ನಂದಗುಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಚಾಲನೆ ನೀಡಿ ಮಾತನಾಡಿ, ಬಿಜೆಪಿಯಲ್ಲೂ ಒಳ ಜಗಳ ಪ್ರಾರಂಭವಾಗಿದ್ದು ಗುಂಪುಗಳಾಗಿ ವಿಭಜನೆಯಾಗಿದೆ. ಒಂದೇ ಒಂದು ದಾಖಲೆಯೂ ಇಲ್ಲದೆ ಸುಳ್ಳು ಆರೋಪ ಮಾಡಿ ರಾಜ್ಯ ಕಂಡ ಜನಸ್ನೇಹಿ ಮುಖ್ಯಮಂತ್ರಿಯವರ ಆಡಳಿತವನ್ನು ಸಹಿಸಲಾರದೇ ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯಿಂದ ರಾಜ್ಯದ ಯಾರಿಗೂ ಅನುಕೂಲವಾಗುವುದಿಲ್ಲ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾದರೆ, ಅಭಿವೃದ್ಧಿ ಪಥದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಲ್ಲಿ ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲಿ ಬದ್ದರಾಗಿದ್ದೇವೆ ಎಂದರು.ರಾಜ್ಯದಿಂದ ಕೇಂದ್ರಕ್ಕೆ ಅನೇಕ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನುದಾನ ನೀಡದೆ, ಕೇವಲ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಅನುದಾನ ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯ ಧೋರಣೆ ವಿರುದ್ಧ ಮಂಗಳವಾರ ಮಂಡ್ಯದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹೊಸಕೋಟೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಆವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಸದಸ್ಯ ಬೀರಪ್ಪ, ಹಿರಿಯ ಮುಖಂಡ ಮುನಿಶಾಮಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷರಾದ ಚಾಂದ್ ಸುಲ್ತಾನ್, ಮುನಿವೆಂಕಟಮ್ಮ, ವಸಂತಾ, ಮಾಜಿ ಅಧ್ಯಕ್ಷರಾದ ಮುರಳಿಮೋಹನ್, ಶಾರದಮ್ಮ, ಬಿಂದು, ಸದಸ್ಯ ಇಟ್ಟಸಂದ್ರ ರಮೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣಪ್ಪ, ಮುಖಂಡರಾದ ಮಂಜುನಾಥ್, ನಾರಾಯಣಗೌಡ, ಶ್ರೀನಿವಾಸ್, ಚೊಕ್ಕಸಂದ್ರ ದೇವರಾಜ್, ಮಂದೀಪ್‌ಗೌಡ, ತಮ್ಮಣ್ಣಗೌಡ, ಚನ್ನಕೇಶವ ಇತರರು ಹಾಜರಿದ್ದರು.