ಆಸ್ಪತ್ರೆ ವೆಚ್ಚ ಭರಿಸಲು ಒತ್ತಾಯಿಸಿ ಪ್ರತಿಭಟನೆ

| Published : Aug 04 2024, 01:19 AM IST

ಸಾರಾಂಶ

ಈಗಾಗಲೇ ಆಸ್ಪತ್ರೆಗೆ ವಿದ್ಯಾರ್ಥಿ ಕುಟುಂಬದವರು ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ವಿದ್ಯಾರ್ಥಿನಿ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಲು ಒಪ್ಪಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುತ್ತೇವೆ

ಮುಂಡರಗಿ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಪದವಿ ಓದುತ್ತಿರುವ ವಿದ್ಯಾರ್ಥಿನಿ ಚೈತ್ರಾ ಗಡಾದ ಬಸ್‌ ನಿಲ್ಲಿಸುವಂತೆ ಕೇಳಿದಾಗ ಬಸ್‌ ಬೇರೆ ಡಿಪೋಗೆ ಸೇರಿದ್ದು. ಬಸ್‌ ಇಲ್ಲಿ ನಿಲ್ಲುವುದಿಲ್ಲ, ನಿಧಾನವಾಗಿ ಚಲಿಸುತ್ತದೆ ಇಳಿದುಕೋಳ್ಳಿ ಎಂದು ಹೇಳಿ ಜೋರಾಗಿ ಚಲಿಸಿದ್ದರಿಂದ ವಿದ್ಯಾರ್ಥಿ ಬಿದ್ದು, ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ಮುಂಡರಗಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ನರೇಗಲ್ ಮಾತನಾಡಿ, ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ವಿದ್ಯಾರ್ಥಿನಿಯ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗಲಿದ್ದು, ಅವರ ಕುಟುಂಬಸ್ಥರಲ್ಲಿ ಹಣ ಇಲ್ಲದೇ ತೊಂದರೆಯಲ್ಲಿದ್ದಾರೆ. ಹೀಗಾಗಿ ಚೈತ್ರಾ ಚಿಕಿತ್ಸೆಗೆ ಬೇಕಾದ ಎಲ್ಲ ವೆಚ್ಚವನ್ನು ಸಂಬಂಧಿಸಿದ ಸಾರಿಗೆ ಸಂಸ್ಥೆಯೇ ಸಂಪೂರ್ಣ ಭರಿಸಬೇಕು. ಭರಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

ಶನಿವಾರ ಬೆಳಗ್ಗೆ 11 ಗಂಟೆಗೆ ಘಟನೆ ಖಂಡಿಸಿ ಮತ್ತು ವಿದ್ಯಾರ್ಥಿನಿ ಚಿಕಿತ್ಸೆಗೆ ಹಣ ಭರಿಸಲು ಆಗ್ರಹಿಸಿ ಬಸ್ ನಿಲ್ದಾಣ ಎದುರು ರಸ್ತೆ ತಡೆ ನಡೆಸಿ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಬರುವವರೆಗೆ ಪ್ರತಿಭಟನೆ ವಾಪಸ್‌ ಪಡೆಯುವದಿಲ್ಲ ಎಂದು ಪಟ್ಟುಹಿಡಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಗದಗ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಸಾರಿಗೆ ಡಿಸಿ ದೇವರಾಜ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಸಾರಿಗೆ ಡಿಸಿ ದೇವರಾಜ, ಸಾರಿಗೆ ಸಂಸ್ಥೆಯ ನಿಯಮಾವಳಿ ಸುತ್ತೋಲೆ ಪ್ರಕಾರ ವೈದ್ಯರ ಸರ್ಟಿಫಿಕೇಟ್ ಆಧರಿಸಿ ₹25 ಸಾವಿರ ಜತೆಗೆ ₹5 ಸಾವಿರ ಸೇರಿದಂತೆ ಒಟ್ಟು ₹30 ಸಾವಿರ ಕೊಡಲು ಅವಕಾಶ ಇದೆ ಎಂದರು.

ಇದಕ್ಕೆ ಒಪ್ಪದ ವಿದ್ಯಾರ್ಥಿಗಳು, ಈಗಾಗಲೇ ಆಸ್ಪತ್ರೆಗೆ ವಿದ್ಯಾರ್ಥಿ ಕುಟುಂಬದವರು ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ವಿದ್ಯಾರ್ಥಿನಿ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಲು ಒಪ್ಪಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ಹೀಗೆ ಮುಂದುರೆಸುವುದರ ಜತೆಗೆ ರಾಜ್ಯಾದ್ಯಂತ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಕೆಎಸ್ಆರ್‌ಟಿಸಿ ಡಿಸಿ ದೇವರಾಜ ಮಾತನಾಡಿ, ತಮ್ಮ ಬೇಡಿಕೆ ಎಂಡಿ ಗಮನಕ್ಕೆ ತರಲಾಗುವದು, ಅಲ್ಲಿಂದ ಅನುಮತಿ ಮತ್ತು ಒಪ್ಪಿಗೆ ಕೊಟ್ಟರೆ ಖರ್ಚು ಭರಿಸಲಾಗುತ್ತದೆ. ನಮ್ಮ ವ್ಯಾಪ್ತಿ ಇಷ್ಟೆ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಸಂಪೂರ್ಣ ಚಿಕಿತ್ಸೆ ವೆಚ್ಚ ನೀವೇ ನೋಡಿಕೊಳ್ಳಬೇಕು ಎಂದು ಪಟ್ಟು ಹಿಡಿದಾಗ ಮೇಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಹೇಳಲಾಗುವದು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ, ಡಿವೈಎಸ್‌ಪಿ, ಪ್ರಭುಗೌಡ, ಸಿಪಿಐ ಮಂಜುನಾಥ ಕುಸುಗಲ್ ವಿದ್ಯಾರ್ಥಿಗಳ ಮನೊಲಿಸಲು ಯತ್ನಿಸಿದರೂ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆಯಿತು. ನಂತರ ಸಾರಿಗೆ ಡಿಸಿ ಖರ್ಚು ಸಾರಿಗೆ ಸಂಸ್ಥೆ ನಿಯಮಾನುಸಾರ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ನೋಡಿಕೊಳ್ಳಲಾಗುವದು ಎಂಬ ಭರವಸೆ ನೀಡಿದ ನಂತರ ಮದ್ಯಾಹ್ನ 2 ಗಂಟೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಪಟ್ಟಣದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆ, ರೈತ ಸಂಘ ಹಾಗೂ ಇತರ ಸಂಘಟನೆ ಪ್ರತಿಭಟನೆಗೆ ಬೆಂಬಲಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಹನುಮಂತ ಅಳ್ಳೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರವಿಂದ ಬಾರ್ಕಿ, ಕೊಟ್ರಪ್ಪ ಹೈದರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸಿಪಿಐ ಮಂಜುನಾಥ ಕುಸುಗಲ್ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.