ಸಾರಾಂಶ
ಊಟದ ಸಮಸ್ಯೆ ವಿಚಾರವಾಗಿ ನಗರದ ಕ್ರೀಡಾ ಶಾಲೆ/ ಕ್ರೀಡಾ ವಸತಿ ನಿಲಯದ ಕ್ರೀಡಾ ವಿದ್ಯಾರ್ಥಿಗಳು ನಿಲಯದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ ಊಟದ ಸಮಸ್ಯೆ ವಿಚಾರವಾಗಿ ನಗರದ ಕ್ರೀಡಾ ಶಾಲೆ/ ಕ್ರೀಡಾ ವಸತಿ ನಿಲಯದ ಕ್ರೀಡಾ ವಿದ್ಯಾರ್ಥಿಗಳು ನಿಲಯದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಿಲಯದಲ್ಲಿ ಕ್ರೀಡಾಪಟುಗಳಿಗೆ ಮೆನು ಪ್ರಕಾರ ಕೊಡಬೇಕಾದ ಪೋಷಕಾಂಶಯುಕ್ತ ಆಹಾರ ನೀಡುತ್ತಿಲ್ಲ. ದಿನಂಪ್ರತಿ ಕ್ರೀಡಾಭ್ಯಾಸಕ್ಕೆ ಹೋಗಬೇಕಾದರೆ ಊಟ ಮಾಡಿ ಹೋಗಬೇಕಿರುತ್ತೆ. ಆದರೆ, ಸರಿಯಾದ ಸಮಯಕ್ಕೆ ನಿಲಯದಲ್ಲಿ ಊಟವನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಗುರುವಾರ ರಾತ್ರಿ ಕೂಡ ಊಟ ನೀಡಿಲ್ಲ. ಬೆಳಗ್ಗೆ ತಡವಾಗಿ ತಿಂಡಿ ನೀಡಿದ್ದಾರೆ. ಮೆಸ್‌ನಿಂದ ನಿಲಯಕ್ಕೆ ಬರುವ ಊಟದಲ್ಲಿ ಯಾವುದೇ ರೀತಿಯ ಪೋಷಕಾಂಶಗಳೇ ಇರುವುದಿಲ್ಲ. ಈ ಕುರಿತು ನಿಲಯದ ವಾರ್ಡನ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾದರೆ ಕ್ರೀಡಾ ಸಾಧನೆ ಹೇಗೆ ಸಾಧ್ಯ ಎಂದು ಕಬಡ್ಡಿ ಕ್ರೀಡಾಪಟು ಜಗದೀಶ್ ಕಿಡಿಕಾರಿದರು.
ವಾರದಲ್ಲಿ ಎರಡು ದಿನ ಮಟನ್ ಊಟ ಕೊಡಬೇಕು. ಆದರೆ, ಚಿಕನ್ ಊಟ ನೀಡುತ್ತಾರೆ. ಡ್ರೈಫ್ರೂಟ್ಸ್ ಸೇರಿದಂತೆ ಇನ್ನಿತರೆ ಪೋಷಕಾಂಶಯುಕ್ತ ಆಹಾರವನ್ನು ಸರಿಯಾಗಿ ನೀಡುತ್ತಿಲ್ಲ. ಊಟದ ಸಮಸ್ಯೆ ಕುರಿತು ಪ್ರಶ್ನೆ ಮಾಡಿದ ಎರಡು ಮೂರು ದಿನ ಸರಿಯಾದ ರೀತಿಯಲ್ಲಿ ಊಟ ನೀಡುತ್ತಾರೆ. ಆದರೆ, ಮತ್ತೆ ಊಟದ ಸಮಸ್ಯೆ ಸೃಷ್ಟಿಸುತ್ತಾರೆ. ನಿಲಯದಲ್ಲಿ ಊಟದ ಸಮಸ್ಯೆ ಸುಧಾರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮನೋಜ್ ಕುಮಾರ್, ಜಗದೀಶ್ ಎನ್, ಶರತ್, ಹನುಮಂತ, ರಾಘವೇಂದ್ರ, ಅರ್ಜುನ್, ಮೊಹಮ್ಮದ್ ತಸೀನ್, ಆಸಿಫ್ ಕೊಣ್ಣೂರ, ಸಿದರೋಡ ಇತರರು ಇದ್ದರು.