ಸಾರಾಂಶ
ರಾಜ್ಯಪಾಲರು ಅಗತ್ಯ ಇರುವೆಡೆ ನಿಷ್ಕ್ರೀಯ, ಅನಗತ್ಯ ಎನಿಸುವೆಡೆ ಸಕ್ರೀಯರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ ವಿಷಾಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇಂದಿನ ದಿನಗಳಲ್ಲಿ ಭಾರತದ ಕೆಲವು ರಾಜ್ಯಪಾಲರು ಅಗತ್ಯ ಇಲ್ಲದ ಕಡೆ ಸಕ್ರಿಯವಾಗಿದ್ದು, ಅಗತ್ಯ ಇರುವ ಕಡೆ ನಿಷ್ಕ್ರೀಯರಾಗಿರುವುದು ದುರಾದೃಷ್ಟಕರ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದ್ದಾರೆ.ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ಭಾರತೀಯ ಮಹಿಳೆಯರ ಸಂವಿಧಾನಿಕ ಕಲ್ಪನೆಗಳು’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಖ್ಯಾತ ವಕೀಲರು, ಸಾಮಾಜಿಕ ಕಾರ್ಯಕರ್ತೆಯಾದ ದುರ್ಗಬಾಯಿ ದೇಶ್‌ಮುಖ್ ಅವರು ಹೇಳುವಂತೆ, ಸಂವಿಧಾನದ ಪ್ರಕಾರ ರಾಜ್ಯಪಾಲರು ಕೆಲವು ಜವಾಬ್ದಾರಿಗಳು ನಿಭಾಯಿಸಬೇಕಾಗುತ್ತದೆ. ಅವರ ಉಪಸ್ಥಿತಿಯಿಂದ ರಾಜ್ಯದಲ್ಲಿ ಪರಸ್ಪರ ತಿಳುವಳಿಕೆ, ಸೌಹಾರ್ದತೆಯನ್ನು ನಿರೀಕ್ಷಿಸಲಾಗುತ್ತದೆ. ರಾಜ್ಯಪಾಲರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ಪ್ರಜ್ಞಾಪೂರ್ವಕವಾಗಿ ಕರ್ತವ್ಯ ನಿಭಾಯಿಸಿದರೆ ಆಡಳಿತದಲ್ಲಿ ಸಂಘರ್ಷ ಉಂಟಾದ ಸಂದರ್ಭದಲ್ಲಿ ಅದನ್ನು ಪರಿಹರಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ರಾಜ್ಯಪಾಲರ ಕರ್ತವ್ಯವು ಪಕ್ಷ, ರಾಜಕೀಯ ಗುಂಪುಗಾರಿಕೆ, ರಾಜಕೀಯ ಪಕ್ಷದ ಚಟುವಟಿಕೆಗಳಿಂದ ದೂರವಾಗಿರಬೇಕು. ಆದರೆ, ಇಂದು ಸಾಂವಿಧಾನಿಕ ಸ್ಥಾನದಲ್ಲಿರುವ ರಾಜ್ಯಪಾಲರ ವಿರುದ್ಧವೇ ಸುಪ್ರೀಂಕೋರ್ಟ್‌ನಲ್ಲಿ ದೂರುಗಳು ಸಲ್ಲಿಕೆಯಾಗುತ್ತಿರುವುದು ಕೆಟ್ಟ ಬೆಳವಣಿಗೆ’ ಎಂದು ನ್ಯಾ.ಬಿ.ವಿ.ನಾಗರತ್ನ ಹೇಳಿದರು.ದೇಶದಲ್ಲಿ ಶಿಕ್ಷಣದ ಅಲಭ್ಯತೆ ಮತ್ತು ಗುಣಮಟ್ಟ ಶಿಕ್ಷಣದ ಕೊರತೆಯು ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿ, ಬೆಳವಣಿಗೆಗೆ ಅಡ್ಡಿಯಾಗಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಪರದೆ ಪದ್ಧತಿಗಳು ನಿರ್ಮೂಲನೆಯಾಗಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಹೆಚ್ಚಿನ ಪ್ರಮಾಣದಲ್ಲಿ ಸ್ಕಾಲರ್‌ಶಿಪ್ ಒದಗಿಸಬೇಕು. ಬರೀ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ಆಗಬೇಕು ಎಂದು ನ್ಯಾ.ಬಿ.ವಿ.ನಾಗರತ್ನ ಒತ್ತಾಯಿಸಿದರು.
ಮಕ್ಕಳ ಪಾಲನೆ ಪೋಷಣೆಯಲ್ಲಿ ಹೆಣ್ಣಿನ ಜೊತೆಗೆ ಕುಟುಂಬ ಎಲ್ಲರೂ ಸಮಾನ ಪಾತ್ರ ವಹಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸಬಾರದು. ಹೆರಿಗೆ ಜವಾಬ್ದಾರಿ ನಿರ್ವಹಿಸಿದ ಬಳಿಕ ಅವರು ಕೆಲಸ ಮುಂದುವರೆಸಲು ಪೂರಕ ವಾತಾವರಣ ಕಲ್ಪಿಸಬೇಕು. ಕೆಲಸದಿಂದ ಹೆಣ್ಣುಮಕ್ಕಳು ವಿಮುಖರಾಗುವಂತೆ ಮಾಡಬಾರದು. ಆರ್ಥಿಕವಾಗಿ ಸಬಲೀಕರಣಗೊಳಿಸಲು ಪೂರಕವಾದ ನೀತಿಗಳನ್ನು ತರಲು ಒತ್ತು ನೀಡಬೇಕು ಎಂದು ನ್ಯಾ.ಬಿ.ವಿ.ನಾಗರತ್ನ ನುಡಿದರು.ಕಾರ್ಯಕ್ರಮದಲ್ಲಿ ಕಾನೂನು ಶಾಲೆಯ ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.