ಚಳ್ಳಕೆರೆಯಲ್ಲಿ ಮಳೆ ಕುಂಠಿತ: ಬಿತ್ತನೆನೂ ಕಡಿಮೆ

| Published : Aug 04 2024, 01:18 AM IST

ಚಳ್ಳಕೆರೆಯಲ್ಲಿ ಮಳೆ ಕುಂಠಿತ: ಬಿತ್ತನೆನೂ ಕಡಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಕೊರತೆ ಉಂಟಾಗಿ ರೈತರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತಿಕಡಿಮೆ ನೀರಿನ ವ್ಯವಸ್ಥೆಯಲ್ಲೇ ಉತ್ತಮ ಬೆಳೆ ಬೆಳೆಯುವಂತೆ ಸಲಹೆ ನೀಡಿದೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನಾದ್ಯಂತ ಮಳೆ ಕೊರತೆಯಿಂದ ಭೂಮಿ ತೇವಾಂಶ ಸಂಪೂರ್ಣ ಒಣಗಿದ ಹಿನ್ನೆಲೆ ಈ ಬಾರಿ ಬಿತ್ತನೆಯಲ್ಲಿ ಕುಂಠಿತವಾಗಿದ್ದು, ರೈತರು ಶೇಂಗಾ ಬೆಳೆಗೆ ಪರ್ಯಾಯವಾಗಿ ಸಿರಿಧಾನ್ಯ ಬೆಳೆದು ಆರ್ಥಿಕ ಲಾಭಪಡೆಯುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರತಿವರ್ಷ ವಾಡಿಕೆ ಮಳೆ ೪೮೪.೩ ಮೀಮೀ ಇದ್ದು, ಪ್ರಸ್ತುತ ಈ ಬಾರಿ ೨೬೧ ಮೀಮೀ ಮಳೆಯಾಗಿದೆ. ೨೨೩ ಮೀಮೀ ಮಳೆ ಕೊರತೆ ಉಂಟಾಗಿ ರೈತರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತಿಕಡಿಮೆ ನೀರಿನ ವ್ಯವಸ್ಥೆಯಲ್ಲೇ ಉತ್ತಮ ಬೆಳೆ ಬೆಳೆಯುವಂತೆ ಸಲಹೆ ನೀಡಿದೆ.

ತಾಲೂಕಿನಾದ್ಯಂತ ೮೭೭೬೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪ್ರದೇಶವಿದ್ದು, ಈ ಪೈಕಿ ೪೯೮೩೬ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತೆನೆಯಾಗಿದೆ. ಉಳಿದಂತೆ ೩೭೯೨೯ ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ಈಗಾಗಲೇ ರೈತರು ಮಳೆ ಕೈಕೊಟ್ಟ ಹಿನ್ನೆಲೆ ಶೇಂಗಾ ಬೆಳೆ ಬಿತ್ತನೆಗೆ ಸಹ ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ.

ಕಡಿಮೆ ಫಲವತ್ತೆ ಮಣ್ಣಲ್ಲಿ ಔಡಲ, ಎರೆ ಮತ್ತು ಕಪ್ಪು ಮಣ್ಣಿನನಲ್ಲಿ ಸೂರ್ಯಕಾಂತಿ, ರಾಗಿ, ನವಣೆ, ಹುರುಳಿ, ಸಾಸಿವೆ, ಅವರೆ, ಎಳ್ಳು, ಹೆಬ್ಬಾಳ ಮುಂತಾದ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಿ, ತಮ್ಮ ಜಾನುವಾರುಗಳಿಗೂ ಮೇವಿನ ಸೌಲಭ್ಯ ದೊರಕಿದಂತಾಗುತ್ತದೆ. ಕೃಷಿ ಇಲಾಖೆ ಸಲಹೆಯಂತೆ ರೈತರು ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆಯಲು ಮುಂದಾಗಬೇಕಿದೆ. ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆ ತನ್ನ ಎಲ್ಲಾ ರೈತ ಸಂಫರ್ಕ ಕೇಂದ್ರಗಳಲ್ಲಿ ರೈತರಿಗೆ ಬೆಳೆ ಬೆಳೆಯುವ ಬಗ್ಗೆ ಸಲಹೆ ಸೂಚನೆ ನೀಡಲಿದೆ ಎಂದು ತಿಳಿಸಿದ್ದಾರೆ.

ತಾಲೂಕಿನ ತಳಕು ಹೋಬಳಿ ದೇವರೆಡ್ಡಿಹಳ್ಳಿ ಗ್ರಾಮದ ರೈತ ನಾಗೇಶ್ ಎಂಬಾತನು ಕಳೆದ ವರ್ಷದಿಂದ ಎರಡು ಬಾರಿ ತನ್ನ ಜಮೀನಿನಲ್ಲಿ ಔಡಲ ಬೆಳೆಯಲು ಆರಂಭಿಸಿ, ಪ್ರಾರಂಭದಲ್ಲಿ ನಷ್ಟ ಅನುಭವಿಸಿದ್ದು, ಈ ಸಾರಿ ಛಲಬಿಡದೇ ತಮ್ಮ ೨೫ ಎಕರೆ ಜಮೀನಿನಲ್ಲಿ ಔಡಲ ಬೆಳೆಯನ್ನು ಕೃಷಿ ಇಲಾಖೆ ಸಲಹೆಯಂತೆ ಬೆಳೆದು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು.

ಎರಡು ವರ್ಷಗಳಿಂದ ರೈತ ನಾಗೇಶ ಜಮೀನಿಗೆ ಹಾಕಿದ್ದ ಔಡಲ ಬೆಳೆ ಕೈಕೊಟ್ಟ ಹಿನ್ನೆಲೆ ಮತ್ತೊಮ್ಮೆ ಔಡಲ ಬೆಳೆಯುವ ಬಗ್ಗೆ ನಿರಾಸಕ್ತಿ ಹೊಂದಿದ್ದ. ಆದರೆ, ಅವನಿಗೆ ಸೂಕ್ತ ಮಾರ್ಗದರ್ಶನ ನೀಡಿ ಔಡಲ ಬೆಳೆ ಯಾವುದೇ ರೋಗ ವ್ಯಾಪಿಸದು, ಮಾರುಕಟ್ಟೆಯಲ್ಲೂ ಔಡಲಕ್ಕೆ ಉತ್ತಮ ಬೆಲೆ ಇದ್ದು, ಬೆಳೆಯುವಂತೆ ಸಲಹೆ ನೀಡಲಾಗಿತ್ತು. ಕೃಷಿ ಇಲಾಖೆ ಸಲಹೆಯಂತೆ ಈ ಬಾರಿ ತನ್ನ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಹಾಕಿದ್ದು ಸಮೃದ್ಧ ಔಡಲ ಬೆಳೆ ಬೆಳೆದಿದ್ದು ಅನೇಕ ರೈತರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

- ಜೆ.ಅಶೋಕ್, ಸಹಾಯಕ ಕೃಷಿ ನಿರ್ದೇಶಕ

ನಾನು ಎರಡು ಬಾರಿ ನನ್ನ ಜಮೀನಿಗೆ ಔಡಲ ಬೆಳೆದು ನಷ್ಟ ಅನುಭವಿಸಿದ್ದೆ. ಈ ಬಾರಿ ಬೇರೆ, ಬೇರೆ ಬೆಳೆ ಬೆಳೆಯುವ ಚಿಂತನೆಯಲ್ಲಿದ್ದೆ ಆದರೆ, ಕೃಷಿ ಅಧಿಕಾರಿಗಳು ಔಡಲ ಬೆಳೆಯುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ₹೧.೨೫ ಲಕ್ಷ ವೆಚ್ಚದಲ್ಲಿ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆದಿದ್ದು ಸುಮಾರು ೪ರಿಂದ ೫ಲಕ್ಷ ರು. ಲಾಭಪಡೆಯುವ ವಿಶ್ವಾಸವಿದೆ.

- ರೈತ ನಾಗೇಶ್ ದೇವರೆಡ್ಡಿಹಳ್ಳಿ