ಪ್ರಕೃತಿ ವಿಕೋಪ ತಡೆಗೆ ಕಾನೂನು ಕ್ರಮ ಅಗತ್ಯ: ಡಾ. ಉಯದಶಂಕರ್

| Published : Aug 04 2024, 01:18 AM IST

ಪ್ರಕೃತಿ ವಿಕೋಪ ತಡೆಗೆ ಕಾನೂನು ಕ್ರಮ ಅಗತ್ಯ: ಡಾ. ಉಯದಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ, ಕೃತಕ ನೆರೆ ಹಾವಳಿ-ಬೆಂಕಿ ದುರಂತ- ಭೂಕುಸಿತ ಬಗ್ಗೆ ಚರ್ಚೆ ಕಾರ್ಯಕ್ರಮದಲ್ಲಿ ಮಣಿಪಾಲದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ. ಉದಯಶಂಕರ್ ಭಾಗವಹಿಸಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಅದರ ತಪ್ಪಲಿನಲ್ಲಿ ಭೂಕುಸಿತ ದುರಂತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಮೇಲೆ ಹೆಚ್ಚುತ್ತಿರುವ ಯಂತ್ರಗಳ ದಾಳಿಯಾಗಿದೆ ಎಂದು ಮಣಿಪಾಲದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ. ಉದಯಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ, ಕೃತಕ ನೆರೆ ಹಾವಳಿ-ಬೆಂಕಿ ದುರಂತ- ಭೂಕುಸಿತ ಬಗ್ಗೆ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತ್ಯಂತ ಹೆಚ್ಚು ಮಳೆಯಾಗುವ ಪಶ್ಚಿಮಘಟ್ಟಗಳಲ್ಲಿ ಮರಗಳ ನಾಶದಿಂದ ಮಳೆ ನೀರು ಭೂಮಿಯ ಒಳಗೆ ತುಂಬಾ ಸುಲಭವಾಗಿ ಪ್ರವೇಶಿಸುತ್ತಿದೆ. ಹೇರಳವಾಗಿ ಒಳಗಡೆ ಹೋದ ಈ ನೀರು ಹೊರಗಡೆ ಬರಲೇ ಬೇಕು. ಪಶ್ಚಿಮಘಟ್ಟಗಳ ರಚನೆಯಲ್ಲಿ ತುಂಬಾ ಸ್ತರಗಳಿವೆ. ಈ ಸ್ತರಭಂಗವಾದರೆ ಭೂಕಂಪ ಆಗುವ ಸಾಧ್ಯತೆ ಜಾಸ್ತಿ. ಇತ್ತೀಚಿನ ದಿನಗಳ ಮಳೆಗಾಲದಲ್ಲಿ ಪಶ್ಚಿಮಘಟ್ಟದ ಕೇಳುತ್ತಿರುವ ಸ್ಫೋಟದಂತಹ ಶಬ್ದಕ್ಕೆ ಈ ಸ್ತರಭಂಗವೇ ಕಾರಣ. ಅದರ ಜೊತೆಗೆ ಮಳೆಯ ನೀರು ಅಂತರ್ಜಲವಾಗಿ ಒತ್ತಡವನ್ನು ಕೊಡುತ್ತದೆ. ಆಗ ವಯನಾಡಿನಲ್ಲಿ ಆಗಿರುವಂತಹ ದುರಂತಗಳು ಸಂಭವಿಸುತ್ತವೆ ಎಂದವರು ಹೇಳಿದರು.

ಭೂಮಿಯ ರಚನೆಯ ಅಧ್ಯಯನ ಮಾಡದೆ ರಸ್ತೆ ನಿರ್ಮಾಣಕ್ಕೆ ಗುಡ್ಡಗಳನ್ನು ಕೊರೆದ ಪರಿಣಾಮ ಅಂಕೋಲದ ಶಿರೂರಿನಲ್ಲಿ ಆಗಿರುವಂತಹ ದುರಂತಗಳು ಸಂಭವಿಸುತ್ತವೆ. ಭೂಮಿಯ ಮೇಲೆ ಇರುವ ಮುರಕಲ್ಲು ಬಹಳಷ್ಟು ಗಟ್ಟಿಮುಟ್ಟಾಗಿರುತ್ತದೆ. ಅದರ ಕೆಳಗಿನ ಪದರದಲ್ಲಿ ಇರುವುದು ಕೇವಲ ಜೇಡಿ ಮಣ್ಣು. ಇದು ಬಹಳಷ್ಟು ಅಪಾಯವಾಗಿದೆ. ಮಣಿಪಾಲದಲ್ಲಿಯೂ ಅವೈಜ್ಞಾನಿಕವಾಗಿ ಮುರಕಲ್ಲು ಕೊರೆಯಲಾಗುತ್ತದೆ. ಮಾನವ ನಿರ್ಮಿತ ಭೂಕುಸಿತಗಳು ಆಗದಂತೆ ತಡೆಯುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಸರ್ಕಾರ ಭೂಮಿಯನ್ನು ಕೊರೆಯಲು ಕಾನೂನಾತ್ಮಕವಾದ ನಿಯಮಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.

ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಮಾತನಾಡಿ, ನಗರದಲ್ಲಿ ಸರಾಗವಾಗಿ ಮಳೆಯ ನೀರು ಹರಿದು ಹೋಗುವ ತೋಡನ್ನು ಮುಚ್ಚಿ ಕಟ್ಟಡ ಕಟ್ಟಿದ ಪರಿಣಾಮವಾಗಿ ಈ ಬಾರಿ ಗುಂಡಿಬೈಲು ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕಳೆದ 15 ವರ್ಷಗಳಲ್ಲಿ ಈ ಬಾರಿ ಅತೀಹೆಚ್ಚು ಮಳೆ ಸುರಿದಿದ್ದು, ಮುಂಜಾಗೃತ ಕ್ರಮಗಳನ್ನು ಕೈಗೊಂಡ ಪರಿಣಾಮ ಯಾವುದೇ ಪ್ರಾಣಾ ಪಾಯಗಳು ಉಂಟಾಗಿಲ್ಲ ಎಂದು ತಿಳಿಸಿದರು.

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಮಾತನಾಡಿದರು.

ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಸ್ವಾಗತಿಸಿದರು. ಪತ್ರಿಕಾ ಭವನದ ಸಂಚಾಲಕ ಅಜಿತ್ ಆರಾಡಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ನಿರೂಪಿಸಿದರು.