ಇಂದಿನಿಂದ ಮೈಸೂರ್ ಸ್ಯಾಂಡಲ್ ಸಾಬೂನು ಮೇಳ

| Published : Jan 11 2025, 12:47 AM IST

ಇಂದಿನಿಂದ ಮೈಸೂರ್ ಸ್ಯಾಂಡಲ್ ಸಾಬೂನು ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಸಾಬೂನು ತಯಾರಿಕೆಯಲ್ಲಿ ವಿಶ್ವದಲ್ಲಿಯೇ ಹೆಸರು ಗಳಿಸಿರುವ ಹಾಗೂ ಶತಮಾನೋತ್ಸವ ಆಚರಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ರಿಯಾಯತಿ ದರದಲ್ಲಿ ತನ್ನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಮೇಳವನ್ನು ನಗರದಲ್ಲಿ ಆಯೋಜಿಸಿದೆ ಎಂದು ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾಬೂನು ತಯಾರಿಕೆಯಲ್ಲಿ ವಿಶ್ವದಲ್ಲಿಯೇ ಹೆಸರು ಗಳಿಸಿರುವ ಹಾಗೂ ಶತಮಾನೋತ್ಸವ ಆಚರಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ರಿಯಾಯತಿ ದರದಲ್ಲಿ ತನ್ನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಮೇಳವನ್ನು ನಗರದಲ್ಲಿ ಆಯೋಜಿಸಿದೆ ಎಂದು ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಜ.11ರಿಂದ ಫೆ.20 ರವರೆಗೆ ಮೈಸೂರ್ ಸ್ಯಾಂಡಲ್ ಸಾಬೂನು ಮೇಳ ನಡೆಯಲಿದೆ. ಪ್ರತಿನಿತ್ಯ ಬೆಳಗ್ಗೆ 9.30ರಿಂದ ರಾತ್ರಿ 9.30ರ ವರೆಗೆ ಮೇಳದಲ್ಲಿ ಉತ್ಪನ್ನಗಳ ಪ್ರದರ್ಶನ ಹಾಗೂ ರಿಯಾಯತಿ ದರದಲ್ಲಿ ಮಾರಾಟ ನಡೆಯಲಿದೆ. ಸಾಬೂನು ಮೇಳವನ್ನು ಜ.11ರಂದು ಬೆಳಗ್ಗೆ 11ಗಂಟೆಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಸಿ.ಎಸ್.ನಾಡಗೌಡ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಲಿದ್ದಾರೆ ಎಂದರು.ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಾಗುವ ಕರ್ನಾಟಕ ಸೋಪ್ಸ್ ಡಿಟರ್ಜೆಂಟ್ ಲಿಮಿಟೆಡ್ ನ ಮೈಸೂರ್ ಸ್ಯಾಂಡಲ್ ಸೋಪ್‌ ಎಂದು ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿದೆ. ಕೇವಲ ಮೈಸೂರ್ ಸ್ಯಾಂಡಲ್ ಸೋಪ್ ಮಾತ್ರವಲ್ಲದೇ ಹಲವಾರು ಉತ್ಪನ್ನಗಳನ್ನು ಹೊಂದಿದ್ದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಬೂನು ಮೇಳ ನಡೆಸಲಾಗುತ್ತಿದೆ. ಇನ್ನು ಹಲವು ಉತ್ಪನ್ನಗಳ ಕುರಿತು ಜನರಿಗೆ ಮಾಹಿತಿ ಒದಗಿಸಿ, ರಿಯಾಯತಿ ದರದಲ್ಲಿ ಉತ್ಪನ್ನಗಳನ್ನು ಒದಗಿಸಲು ನಗರದಲ್ಲಿ ಸಾಬೂನು ಮೇಳ ಮಾಡಲಾಗುತ್ತಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಜನರಲ್‌ ಮ್ಯಾನೇಜರ್ ಗಂಗಪ್ಪ, ಬಿ.ಕೆ.ರುದ್ರೇಶ, ವಿಜಯಮಹಾಂತೇಶ ಕಾಮತ್, ಹನೀಫ್.ಬಿ.ಹೆಚ್, ಅರವಿಂದ ಬನಸೋಡೆ, ಜಿ.ಸಿ.ಮಂಜುನಾಥ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.108 ವರ್ಷ ಇತಿಹಾಸವುಳ್ಳ ಸಂಸ್ಥೆಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಸಚಿವ ಎಂ.ಬಿ.ಪಾಟೀಲ, ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ದೂರದೃಷ್ಟಿಯಿಂದ ಇದೀಗ ಶೇ.15ಕ್ಕೂ ಅಧಿಕವಾಗಿ ಸಂಸ್ಥೆ ಬೆಳವಣಿಗೆ ಆಗುತ್ತಿದೆ. ಜತೆಗೆ ಈ ಭಾಗದ ಶ್ರೀಗಂಧ ಬೆಳೆಗಾರರಿಗೆ ಗುರುತಿಸಿ ರೈತರಿಂದ ನೇರವಾಗಿ ಶ್ರೀಗಂಧ ಬೆಳೆಯನ್ನು ಖರೀದಿಸುತ್ತಿದ್ದು, ಈಗಾಗಲೇ 800 ಎಕರೆಯಷ್ಟು ರೈತರಿಂದ ಭೂಮಿಯನ್ನು ಕೆಎಸ್‌ಡಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಈ ವರ್ಷ 19 ಹೊಸ ಪ್ರಾಡೆಕ್ಟ್ಸ್ ಲೋಕಾರ್ಪಣೆ ಮಾಡಲಾಗಿದೆ.

-ಡಾ.ಪ್ರಶಾಂತ ಪಿಕೆಎಂ, ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು.