ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಿಸುವ ಜೊತೆಗೆ ದೇಶದ ಭವಿಷ್ಯವನ್ನು ನಿರ್ಮಿಸುವ ಮಕ್ಕಳನ್ನು ತಯಾರು ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಹೇಳಿದರು.ನಗರದ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್ ನಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬರುತ್ತಿದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅಂತಹವರನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳ ಸೌಲಭ್ಯ ಒದಗಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದು ಹೆಚ್ಚಾಗಿದೆ. ಓದುವ ಮಕ್ಕಳಲ್ಲಿ ಮೊಬೈಲ್ ಬಳಸದಂತೆ ಹಾಗೂ ಮೊಬೈಲ್ ಸಂಸ್ಕೃತಿಯನ್ನು ದೂರವಿರಿಸಿ ಶಿಕ್ಷಣದ ಕಡೆಗೆ ಗಮನಹರಿಸುವಂತೆ ಮಾಡಬೇಕು. ಪ್ರತಿಭಾವಂತ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.ಬಡವರ ಮಕ್ಕಳು ಮೆರಿಟ್ ನಲ್ಲಿ ತೇರ್ಗಡೆ ಹೊಂದುವಂತೆ ಮಾಡಬೇಕು. ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅವಕಾಶವನ್ನು ದೇವರು ಕಲ್ಪಿಸಿದ್ದಾನೆ. ಸಂಬಳಕ್ಕಾಗಿ ಕೆಲಸ ಮಾಡದೆ ನಿಸ್ವಾರ್ಥ ಸೇವೆಯನ್ನು ಇಟ್ಟುಕೊಂಡು ಕೆಲಸ ಮಾಡಬೇಕಿದೆ ಎಂದರು.ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯನ್ನು ಹದ್ದುಬಸ್ತಿನಲ್ಲಿ ಇಡಬೇಕು. ಶೌಚಾಲಯ, ಕುಡಿಯುವ ನೀರು ಕಡೆಗೆ ಗಮನ ಹರಿಸಬೇಕು. ಕೆಲವು ಗ್ರಾಮಗಳ ಶಾಲೆಗಳಲ್ಲಿ ಕಸ ಕ್ಲೀನ್ ಮಾಡದೆ ಕೆಲವು ಕಡೆ ಹಾಗೆಯೇ ಬಿದ್ದಿರುತ್ತದೆ. ಬರೀ ಪಾಠ ಮಾಡುವುದಕ್ಕೆ ಮಾತ್ರ ಮುಖ್ಯ ಶಿಕ್ಷಕರ ಕೆಲಸವಲ್ಲ. ಶಾಲೆಯನ್ನು ತಮ್ಮ ಮನೆಯಂತೆ ಜವಾಬ್ದಾರಿಯಿಂದ ಗಮನಿಸಬೇಕು. ಶಾಲೆಗಳ ಸರ್ವೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಇಒ ಸಿ. ಕೃಷ್ಣ, ಬಿಇಒ ಎಂ. ಪ್ರಕಾಶ್ ಮೊದಲಾದವರು ಇದ್ದರು.----ಕೋಟ್... ಭ್ರಷ್ಟಾಚಾರರಹಿತ ಕ್ಷೇತ್ರಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಭ್ರಷ್ಟಾಚಾರ ಇಲ್ಲದೆ ನಡೆಯುತ್ತಿರುವ ಕ್ಷೇತ್ರ ಇದ್ದರೆ ಅದು ಶಿಕ್ಷಕರ ಕ್ಷೇತ್ರವಾಗಿದೆ. ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದಾದರೇ ಅದು ಶಿಕ್ಷಕರು ಮಾತ್ರ. ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುವ ಹೊಣೆ ಹೊಂದಿದ್ದಾರೆ. ಈಗ ರಸ್ತೆ, ಬಸ್ ವ್ಯವಸ್ಥೆ ಮಾಡಿ ಕೊಡಲಾಗಿದೆ. ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ, ಯೋಗ, ಧ್ಯಾನ ಕಲಿಸಬೇಕು.- ಜಿ.ಟಿ. ದೇವೇಗೌಡ, ಶಾಸಕರು