ವಿಶ್ವವಿದ್ಯಾನಿಲಯವು ಆಧುನಿಕ ಕೈಗಾರಿಕೆಯ ಅತ್ಯುತ್ತಮ ರೂಪವನ್ನು ಧರಿಸಿದೆ

| Published : Jan 19 2025, 02:16 AM IST

ಸಾರಾಂಶ

ರ್ಧಾತ್ಮಕ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧನಾ ಮಾರ್ಗ ಹಾಗೂ ಮೂಲ ಸಂರಚನೆ ಸಧೃಢಗೊಳಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿದ್ಯಾನಿಲಯವು ಆಧುನಿಕ ಕೈಗಾರಿಕೆಯ ಅತ್ಯುತ್ತಮ ರೂಪವನ್ನು ಧರಿಸಿದೆ ಎಂದು ನವ ದೆಹಲಿಯ ಅಖಿತ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಯೋಫಿಸಿಕ್ಸ್ ವಿಭಾಗದ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ ಡಾ.ಟಿ.ಪಿ. ಸಿಂಗ್ ತಿಳಿಸಿದರು.ನಗರದ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಸ್ಪರ್ಧಾತ್ಮಕ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧನಾ ಮಾರ್ಗ ಹಾಗೂ ಮೂಲ ಸಂರಚನೆ ಸಧೃಢಗೊಳಿಸಬೇಕು ಎಂದರು.ಪ್ರಸ್ತುತ ಜಗತ್ತು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ. ಹೀಗಾಗಿ, ತರಬೇತಿ ಹೊಂದಿದ ಮಾನವ ಶಕ್ತಿಯ ಪ್ರಮಾಣವನ್ನೂ ಮತ್ತು ಗುಣಮಟ್ಟವನ್ನೂ ನಾವು ಹೆಚ್ಚಿಸಬೇಕಾಗಿದೆ. ಭವಿಷ್ಯದಲ್ಲಿ ರಾಷ್ಟ್ರಗಳ ಆರ್ಥಿಕತೆಯು ಸುಶಿಕ್ಷಿತ ಹಾಗೂ ತರಬೇತು ಹೊಂದಿದ ಯುವಜನತೆಯ ಮೇಲೆ ಅವಲಂಬಿಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ತರಬೇತು ಹೊಂದಿದ ಮಾನವ ಶಕ್ತಿಯನ್ನು ಹೊಂದಿದ ರಾಷ್ಟ್ರಗಳು ಮುಂಚೂಣಿಯಲ್ಲಿರುತ್ತವೆ ಎಂದು ಹೇಳಿದರು.ಹೀಗಾಗಿ ನಾವು ಜಗತ್ತಿನಲ್ಲಿ ಆರ್ಥಿಕತೆಯಾಗಿ ಅತ್ಯಂತ ಸದೃಢವಾಗಿ ಹೊರಹೊಮ್ಮಬೇಕಾಗಿದೆ. ನಮ್ಮಲ್ಲಿ ತರಬೇತಿ ಹೊಂದಬಹುದಾದ ಮಾನವ ಶಕ್ತಿಯಿದೆ. ಹೀಗಾಗಿಯೇ, ನಾವು ಮಾನವ ಸಂಪನ್ಮೂಲ ಹಾಗೂ ವಿಶ್ವವಿದ್ಯಾನಿಲಯಗಳ ಮೇಲೆ ಹೆಚ್ಚು ಬಂಡವಾಳ ತೊಡಗಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಾವು ಇನ್ನೂ ಉತ್ತಮ ಕೆಲಸ ಮಾಡಬೇಕಾಗಿತ್ತು. ಇನ್ನೂ ಉತ್ತಮ ಕೆಲಸ ಮಾಡಬೇಕು ಎಂದರೆ ನಮ್ಮ ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲೆ ನಾವು ಹೆಚ್ಚಿನ ಬಂಡವಾಳ ಹಾಕಬೇಕು. ಅದರಲ್ಲೂ ವಿಶೇಷವಾಗಿ ತಾಂತ್ರಿಕ ವಲಯದಲ್ಲಿ ಬಂಡವಾಳ ತೊಡಗಿಸಬೇಕು. ಇದು ಸಾಧ್ಯವಾಗಬೇಕಾದರೆ ಬೋಧಕರ ಸಂಖ್ಯೆ ಹೆಚ್ಚಬೇಕು, ಮೂಲರಚನೆ ವೃದ್ಧಿಗೊಳ್ಳಬೇಕು. ಹಳೆಯದಾದ ಮತ್ತು ಪ್ರಸಿದ್ದಿ ಪಡೆದ ವಿಶ್ವವಿದ್ಯಾಲಯಗಳಿಗೆ ಅನುದಾನ ಹೆಚ್ಚಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಹಾಗೂ ಖಾಸಗಿ ವಲಯದಲ್ಲಿ ಹೊಸ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದು, ಉತ್ತಮ ಫಲಿತಾಂಶ ದೊರೆಯುತ್ತಿದೆ. ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಮ್ಮ ಜಾಗತಿಕ ಸ್ಥಾನಮಾನಗಳು ಉತ್ತಮಗೊಂಡಿವೆ. ಆದರೆ, ಸಾಫ್ಟ್ ವೇರ್ ಸಂಬಂಧ ಸೇವೆಗಳ ವಿಷಯದಲ್ಲೂ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿಯೂ ಸಹ ನಾವು ಮೊದಲ ಸ್ಥಾನದಲ್ಲಿ ಇರಬೇಕಾಗಿತ್ತು ಎಂದು ತಿಳಿಸಿದರು.ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಇದ್ದರು.----ಕೋಟ್...ಬೇರೆ ತಾಂತ್ರಿಕ ವಲಯಗಳಿಗೆ ಹೋಲಿಸಿದರೆ ಜೈವಿಕ ತಂತ್ರಜ್ಞಾನ ಬಹಳ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಕೃತಕ ಬುದ್ದಿಮತ್ತೆಯೂ ಸ್ವಲ್ಪ ಮಟ್ಟಿಗೆ ಕಾರಣ. ಮಷಿನ್ ಲರ್ನಿಂಗ್‌ ನಿಂದಾಗಿ ಈ ವಲಯವು ಬಹಳಷ್ಟು ಚೈತನ್ಯ ಪಡೆದಿದೆ. ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಗಳ ಯಶಸ್ಸು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸುವ ದತ್ತಾಂಶವನ್ನು ಅವಲಂಬಿಸಿರುತ್ತದೆ. ಹೀಗಾಗಿ, ಪ್ರಾಯೋಗಿಕ ಸಂಶೋಧನೆಯು ಯಾವಾಗಲೂ ಪ್ರಮುಖವಾಗಿರುತ್ತದೆ.- ಪ್ರೊ.ಟಿ.ಪಿ. ಸಿಂಗ್, ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ