ವಿದ್ಯಾರ್ಥಿಗಳು ಗಟ್ಟಿಯಾದ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಇತಿಹಾಸ ಬರೆಯಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮೈಸೂರು
ನಿಮ್ಮಲ್ಲಿರುವ ಪ್ರತಿಭೆ ಗುರುತಿಸಿಕೊಂಡು ಅದನ್ನು ಪೋಷಿಸಿ, ಬೆಳೆಸಿ ಸಾಧನೆ ಮಾಡಿ ಮನೋಸ್ತರ್ಯವನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸಿ. ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಾಧನೆ ಮಾಡುವ ಛಲ ಇರಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ತಿಳಿಸಿದರು.ಮೈಸೂರು ವಿವಿ ವೃತ್ತಿ ಕೇಂದ್ರ, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರ ಹಾಗೂ ಬಿ.ಎನ್. ಬಹುದ್ದೂರ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ (ಬಿಮ್ಸ್) ಸಂಯುಕ್ತವಾಗಿ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗಟ್ಟಿಯಾದ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಇತಿಹಾಸ ಬರೆಯಲು ಸಾಧ್ಯ. ಪ್ರತಿಯೊಬ್ಬರಲ್ಲೂ ತಮ್ಮದೇ ಆದ ರೀತಿಯ ಶಕ್ತಿ ಇರುತ್ತದೆ. ಇದನ್ನು ಗುರುತಿಸಿಕೊಂಡು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.ಪ್ರಪಂಚದ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಭಾರತದ ನಾಗರೀಕ ಸೇವಾ ಪರೀಕ್ಷೆಯೂ ಒಂದು. ಇದನ್ನು ಅರಿತು ಸೂಕ್ತ ರೀತಿಯ ತಯಾರಿ ನಡೆಸಿ ಯಶಸ್ಸು ಸಾಧಿಸಬೇಕು. ಆತ್ಮವಿಶ್ವಾಸ, ಛಲ, ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು. ಗುರಿಯನ್ನು ಇರಿಸಿಕೊಂಡು ಸರಿಯಾದ ಮಾರ್ಗದಲ್ಲಿ ಮುಂದುವರೆದರೆ ಸಾಧಿಸಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಮ್ಸ್ ನಿರ್ದೇಶಕ ಪ್ರೊ.ಆರ್. ಮಹೇಶ್ ಮಾತನಾಡಿ, ಕೇವಲ ಪಠ್ಯಕ್ರಮಗಳ ಅಧ್ಯಯನ ಮಾತ್ರ ಸಾಲದು. ಇದರ ಜೊತೆಗೆ ಜೀವನ ಕೌಶಲ್ಯಗಳು ಬೇಕು. ಯಾರು ಈ ಕೌಶಲ್ಯ ಹೊಂದಿರುತ್ತಾರೆ, ಅವರಿಗೆ ಕೆಲಸ ಸಿಗುವ ಸಾಧ್ಯತೆ ಜಾಸ್ತಿ. ತಯಾರಿ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳು ನೂರಾರು ಇರುತ್ತವೆ ಅದನ್ನು ಮೆಟ್ಟಿ ನಿಲ್ಲುವ ಚೈತನ್ಯ ಬೆಳೆಸಿಕೊಳ್ಳಬೇಕು ಎಂದರು.ಮೈಸೂರು ವಿವಿ ವೃತಿ ಕೇಂದ್ರದ ಗೌರವ ಸಲಹೆಗಾರ ಡಿ. ರವಿಕುಮಾರ್, ರಾಷ್ಟ್ರ ಮಟ್ಟದ ತರಬೇತುದಾರ ಜೀಷಾ ಇದ್ದರು. ಎ.ಎಸ್. ರುಚಿತಾ ಮತ್ತು ಎಸ್. ಸಂಧ್ಯಾ ಪ್ರಾರ್ಥಿಸಿದರು. ಎಂ. ನಮಿತಾ ಸ್ವಾಗತಿಸಿದರು. ಎಚ್.ಬಿ. ಸಹನಾ ನಿರೂಪಿಸಿದರು.