ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ

| Published : Sep 03 2024, 01:31 AM IST

ಸಾರಾಂಶ

. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಸಂಪಾದಿಸುವ ಕಡೆ ಗಮನ ಕೊಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಡಾ. ಬಸವರಾಜು ಸಿ. ಜೆಟ್ಟಿಹುಂಡಿ ತಿಳಿಸಿದರು.

ಮೈಸೂರು ತಾಲೂಕು ವರುಣ ಹೋಬಳಿಯ ಬಡಗಲಹುಂಡಿ, ಮೂಡಲಹುಂಡಿ, ವರಕೂಡು ಗ್ರಾಮಗಳ ಸ್ನೇಹ ಬಳಗದ ವತಿಯಿಂದ ವರಕೂಡು ಬೀರೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಿರಂತರವಾದ ಅಧ್ಯಯನ ಮುಖ್ಯ. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಸಂಪಾದಿಸುವ ಕಡೆ ಗಮನ ಕೊಡಬೇಕು. ಸತತ ಓದು, ಬರವಣಿಗೆ ನಮ್ಮ ವ್ಯಕ್ತಿತ್ವ, ಸಾಮರ್ಥ್ಯವನ್ನು ಬದಲಾಯಿಸುತ್ತದೆ. ನಾವು ಪಡೆದ ಉತ್ತಮ ಶಿಕ್ಷಣ, ಉದ್ಯೋಗದಿಂದ ಬಡತನ ನಿವಾರಣೆಯಾಗಿ ಬದುಕು ಹಸನಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಶಿಕ್ಷಣವು ಕುಟುಂಬ, ಸಮಾಜ, ಸಮುದಾಯದ ಅಭಿವೃದ್ಧಿಗೂ ಕಾರಣವಾಗುತ್ತದೆ. ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಶಿಕ್ಷಣವೇ ಮದ್ದು. ಶಿಕ್ಷಣ ಪಡೆಯದಿದ್ದರೆ ಏನನ್ನು ಸಾಧಿಸಲಾಗದು. ಶಿಕ್ಷಣ ಇಂದು ಎಲ್ಲರಿಗೂ ಅನಿವಾರ್ಯ. ಶಿಕ್ಷಣವೇ ಆಸ್ತಿ, ಶಕ್ತಿ ಎಂದು ತಿಳಿದು ಮಕ್ಕಳನ್ನು ಓದಿಸಬೇಕು. ಸತತವಾದ ಶ್ರಮ, ಶ್ರದ್ಧೆಯಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಮೈ ಮರೆಯದೆ ಇಂತಹ ಅವಕಾಶಗಳನ್ನು ಪಡೆಯುವ ಹಾದಿಯಲ್ಲಿ ಹೆಜ್ಜೆಯನ್ನು ಇರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮೂರು ಗ್ರಾಮಗಳ 40 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ 2023-24ನೇ ಸಾಲಿನಲ್ಲಿ ಎಂ.ಕಾಂ ವಿಭಾಗದಲ್ಲಿ ಮೈಸೂರು ವಿವಿ ಚಿನ್ನದ ಪದಕ ಪಡೆದ ಬಿ. ಚೈತ್ರಾ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ಅಧಿಕಾರಿ ಕೆ. ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವರಕೂಡು ಗ್ರಾಪಂ ಅಧ್ಯಕ್ಷ ಬೀರಪ್ಪ, ಮಾಜಿ ಅಧ್ಯಕ್ಷ ಸಣ್ಣೇಗೌಡ, ಗಡಿ ಯಜಮಾನರಾದ ಮಹದೇವು, ತಮ್ಮಡಿಗೌಡ, ಉಮೇಶ್, ರವಿ, ಶಿವಣ್ಣ, ಶಿವನಂಜೇಗೌಡ, ಪ್ರೇಮ್‌ ಕುಮಾರ್, ದೇವರಗುಡ್ಡ ಚಿಕ್ಕಣ್ಣ, ಯುವರಾಜ ಕಾಲೇಜು ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ, ಶಿಕ್ಷಕ ಕಂಚಿನಕೆರೆ ಕುಮಾರ್, ಲಕ್ಷ್ಮಿ, ಸ್ಫೂರ್ತಿ ಮೊದಲಾದವರು ಇದ್ದರು. ಉಮೇಶ್ ವರಕೂಡು ನಿರೂಪಿಸಿದರು.