ಇಂದಿನಿಂದ ಗುಜರಾತ್ ಕರಕುಶಲ ಉತ್ಸವ

| Published : Jul 05 2024, 12:47 AM IST

ಸಾರಾಂಶ

ಈ ಉತ್ಸವವನ್ನು ನಗರದ ಹೆಬ್ಬಾಳ್ ಹೊರ ವರ್ತುಲ ರಸ್ತೆಯಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಜು.5ರ ಸಂಜೆ 4ಕ್ಕೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್‌ಎಸ್ ಮಹಾವಿದ್ಯಾಪೀಠದ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ ನಲ್ಲಿ ಜು.5 ರಿಂದ 14 ರವರೆಗೆ ಗುಜರಾತ್ ಕರಕುಶಲ ಉತ್ಸವ- 2024 ಆಯೋಜಿಸಲಾಗಿದೆ ಎಂದು ಗುಜರಾತ್ ಇಂಡೆಕ್ಸ್- ಸಿ ವ್ಯವಸ್ಥಾಪಕ ಆರ್.ಎಸ್. ಶಾ ತಿಳಿಸಿದರು.

ಈ ಉತ್ಸವವನ್ನು ನಗರದ ಹೆಬ್ಬಾಳ್ ಹೊರ ವರ್ತುಲ ರಸ್ತೆಯಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಜು.5ರ ಸಂಜೆ 4ಕ್ಕೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಉದ್ಘಾಟಿಸುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗುಜರಾತ್ ಕರಕುಶಲ ಉತ್ಸವದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ಕಲಾವಿದರು ಒಂದೇ ಸೂರಿನಡಿ ತಾವು ತಯಾರಿಸಿದ ಪಟೋಲಾ ಸೀರೆ, ಬಾಂದಿನಿ ಸೇರೆ, ಕಸೂತಿ ಮಾಡಿದ ಬೆಡ್‌ ಶೀಟ್, ಟವಲೆ, ಕುಶನ್ ಕವರ್, ಪರಿಸರ ಸ್ನೇಹಿ ಆಭರಣ, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಜು.5 ರಿಂದ 7 ರವರೆಗೆ ನಿತ್ಯ ಸಂಜೆ 6 ರಿಂದ 8 ರವರೆಗೆ ಗುಜರಾತ್‌ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳಿಂದ ಗರ್ಭಾ ನೃತ್ಯ ಪ್ರದರ್ಶನಗೊಳ್ಳಲಿದೆ. ಇದರೊಡನೆ ಶಾಲಾ ಮಕ್ಕಳಿಗೆ ಮತ್ತು ಕಾರ್ಪೊರೇಟ್‌ ಗಳಲ್ಲಿ ಕೆಲಸ ಮಾಡುವವರು, ಮಹಿಳೆಯರಿಗೆ ಗುಜರಾತ್‌ಪಾರಂಪರಿಕ ಕಲೆ ತರಬೇತಿ ಸಹ ಆಯೋಜಿಸಲಾಗಿದೆ ಎಂದರು.

ಇಂಡೆಕ್ಸ್- ಸಿ ವ್ಯವಸ್ಥಾಪಕ ಡಾ. ಸ್ನೇಹಲ್ ಮಕ್ವಾಲ್, ಜೆಎಸ್ಎಸ್ ಅರ್ಬನ್ ಹಾತ್ ನ ಎಂ. ಶಿವನಂಜಸ್ವಾಮಿ, ರಾಕೇಶ್ ರೈ ಇದ್ದರು.