ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹಸೀನಾ ಸಿನಿಮಾದ ಮೂಲ ಕರಿ ನಾಗರಗಳು ಕಥೆಗಾಗಿ ಗಿರೀಶ್ ಕಾಸರವಳ್ಳಿ ಅವರು ಕರೆ ಮಾಡಿದಂತೆ ಬೂಕರ್ ಪ್ರಶಸ್ತಿಯೂ ಸಿಗಬಹುದೆಂಬ ಆಶಯವಿದೆ. ಕನ್ನಡದ ಹೆಣ್ಣು ಮಗಳಿಗೆ ಬೂಕರ್ ಸಿಗಲೆಂದು ದಯವಿಟ್ಟು ಎಲ್ಲರೂ ಪ್ರಾರ್ಥಿಸಿ ಎಂದು ಲೇಖಕಿ ಬಾನು ಮುಷ್ತಾಕ್ ವಿನಮ್ರವಾಗಿ ಮನವಿ ಮಾಡಿದರುನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಹಸೀನಾ ಮತ್ತು ಇತರ ಕಥೆಗಳು ಪರಿಷ್ಕೃತ ಮುದ್ರಣದ ಬಿಡುಗಡೆಯಲ್ಲಿ ಮಾತನಾಡಿದ ಅವರು, ಹಾರ್ಟ್ ಲ್ಯಾಂಪ್ ಕಥಾಗುಚ್ಚವು ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯ 6 ಕೃತಿಗಳಲ್ಲಿ ಸ್ಥಾನ ಪಡೆದಿದೆ. ಇದೊಂದು ಹೆಮ್ಮೆಯ ಸಂಗತಿ. ಗಿರೀಶ್ ಕಾಸರವಳ್ಳಿ ಅವರು ಹೆಣ್ಣು ಮಕ್ಕಳ ಕಥೆಗಳನ್ನು ಹುಡುಕುತ್ತಿದ್ದಾಗ ಒಬ್ಬರು ನನ್ನ ಕರಿ ನಾಗರಗಳು ಕಥೆಯನ್ನು ಹುಡುಕಿಕೊಟ್ಟಿದ್ದರು. ಈ ವಿಷಯ ನನಗೆ ತಿಳಿದು ದಿನ ರಾತ್ರಿ ಕಾಸರವಳ್ಳಿ ಕರೆ ಮಾಡುತ್ತಾರೆ ಎಂದು ಕನಸು ಕಾಣುತ್ತಿದ್ದೆ. ಒಂದು ಮುಂಜಾನೆ ಕಾಸರವಳ್ಳಿ ಕರೆ ಮಾಡಿದಾಗ ನನಗೇನು ಆಶ್ಚರ್ಯವಾಗಲಿಲ್ಲ. ಈಗಲೂ ಹಾಗೇ ಆಗುತ್ತದೆ ಎಂದುಕೊಂಡಿದ್ದೇನೆ ಎಂದು ಬೂಕರ್ ಪ್ರಶಸ್ತಿ ದೊರೆಯಬಹುದೆಂಬ ಆಶಯವನ್ನು ಹೀಗೆ ವ್ಯಕ್ತಪಡಿಸಿದರು.ಮೇ 20 ರಂದು ಲಂಡನ್‌ನಲ್ಲಿ ಪ್ರಶಸ್ತಿ ಘೋಷಣೆ ಆಗಲಿದೆ. ಮೂವರು ಮಕ್ಕಳೊಂದಿಗೆ ಹೋಗುತ್ತಿದ್ದೇನೆ. ಹಸೀನಾ ಸಿನಿಮಾದ ಬಿಡುಗಡೆ ವೇಳೆ ರಾಷ್ಟ್ರ ನಟಿ ತಾರಾ ಅವರಿಗೆ ರಾಷ್ಟ್ರ ಪ್ರಶಸ್ತಿ ಬರುವುದಾಗಿ ಹೇಳಿದ್ದೆ. ಐಶ್ವರ್ಯ ರೈ ಮತ್ತು ತಾರಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ನಾನು ಹೇಳಿದಂತೆ ತಾರಾ ಅವರಿಗೆ ಪ್ರಶಸ್ತಿ ಬಂದಿತ್ತು ಎಂದು ಸ್ಮರಿಸಿದರು.ನನ್ನ ಕಥೆಗಳನ್ನು ಇಂಗ್ಲಿಷ್ ಗೆ ಯಾರು ಅನುವಾದ ಮಾಡುತ್ತಾರೆ ಎಂಬ ಗೊಂದಲದಲ್ಲಿದ್ದೆ. ಆಗ ಪತ್ರಕರ್ತ ಬಸವ ಬಿರಾದರ್ ಅವರು, ದೀಪಾ ಭಸ್ತಿ ಅವರ ಮೊಬೈಲ್ ನಂಬರ್ ಕೊಟ್ಟಿದ್ದರು. ಹೃದಯ ಶಸ್ತ್ರಚಿಕಿತ್ಸೆಯಲ್ಲಿರುವಾಗ ದೀಪಾ ಅವರು ಕರೆ ಮಾಡಿ ನಿಮ್ಮ ಕಥಾ ಸಂಕಲನ ಯುನೈಟೆಡ್ ಕಿಂಗ್‌ಡಮ್ ನಲ್ಲಿಯೇ ಪ್ರಕಟವಾಗಬೇಕು, ಅನುಮತಿ ನೀಡಿ ಎಂದು ಕೋರಿದ್ದರು. ನಾನೂ ಸಹಿ ಮಾಡಿದ್ದೆ. ಅದಕ್ಕೆ ‘ಪೆನ್’ ಪ್ರಶಸ್ತಿಯೂ ಸಿಕ್ಕಿತು. ಈಗ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿವರೆಗೂ ಬರುತ್ತದೆಂದು ಅಂದುಕೊಂಡಿರಲಿಲ್ಲ ಎಂದರು.ಸಂವಾದದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ವಿಜ್ಞಾನ ಲೇಖಕಿ ಪದ್ಮಾ ಶ್ರೀರಾಮ, ಪತ್ರಕರ್ತೆ ಪ್ರೀತಿ ನಾಗರಾಜು, ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್ ನ ಶುಭಾ ಸಂಜಯ ಅರಸ್, ಪ್ರಕಾಶಕ ಅಭಿರುಚಿ ಗಣೇಶ್ ಇದ್ದರು.