ಸಾರಾಂಶ
ಮಂಡ್ಯ : ಮೈಷುಗರ್ ಪ್ರೌಢಶಾಲೆ ಯಾರಪ್ಪಂದು ಅಂತ ಗುತ್ತಿಗೆ ಕೊಡಲು ಹೊರಟಿದ್ದಾರೆ. ಶಾಲೆ ಇರುವ ಜಾಗದ ಬೆಲೆ ಎಷ್ಟೂಂತ ಗೊತ್ತಾ ಅವರಿಗೆ. ಗುತ್ತಿಗೆ ವಿಚಾರವಾಗಿ ನನ್ನ ಬಳಿ ಯಾವನು ಬಂದು ಈ ವಿಷಯವಾಗಿ ಚರ್ಚಿಸಿದ್ದಾನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿಯೇ ಹೇಳಿದರು.
ಪುಣ್ಯಾತ್ಮರು ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಕಟ್ಟಿದ ಶಾಲೆಯನ್ನು ಗುತ್ತಿಗೆ ನೀಡಲು ಹೊರಟಿದ್ದಾರೆ. ನಾಚಿಕೆಯಾಗುವುದಿಲ್ಲವೇ ಇವರಿಗೆ. ಶಾಲೆಯ ಅಭಿವೃದ್ಧಿಗೆ ಎಷ್ಟು ಕೋಟಿ ಬೇಕಾದರೂ ಕೊಡಲು ತಯಾರಿದ್ದೇನೆ. ಶಿಕ್ಷಕರಿಗೆ ಸಂಬಳ ನೀಡಲು ಹಣವನ್ನು ಠೇವಣಿ ಇಡಲೂ ತಯಾರಿದ್ದೇನೆ. ಶಾಲೆ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ಗೆ ನಾನೂ ಕೂಡ ಒಬ್ಬ ಟ್ರಸ್ಟಿ. ನನ್ನ ಬಳಿ ಯಾವನು ಬಂದು ಈ ವಿಷಯವನ್ನು ಚರ್ಚೆ ಮಾಡಿದ್ದಾನೆ. ಯಾವ ಕಾನೂನು ಆಧಾರದ ಮೇಲೆ ಗುತ್ತಿಗೆ ಕೊಡಲು ಹೊರಟಿದ್ದಾರೆ. ಗುತ್ತಿಗೆ ನೀಡುವುದಕ್ಕೆ ನಾನೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಮೇಕೆದಾಟು ಗೌಡರ ಕುಟುಂಬದಿಂದ ಮಾತ್ರ ಸಾಧ್ಯ: ಎಚ್‌ಡಿಕೆ
ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ದೇವೇಗೌಡರ ಕುಟುಂಬದಿಂದಲೇ ಆಗಬೇಕು. ಇವರ ಯಾರ ಕೈಯಲ್ಲೂ ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ಹೇಳಿದರು.
ನಾನು ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸುವ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅದಕ್ಕೂ ಮೊದಲು ಕಾಂಗ್ರೆಸ್‌ನವರು ಮೊದಲು ತಮಿಳುನಾಡಿನವರನ್ನು ಒಪ್ಪಿಸಿಕೊಂಡು ಬರಲಿ. ಇದು ಸುಲಭದ ಕೆಲಸ. ಏಕೆಂದರೆ, ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್‌ನವರು ಪರಸ್ಪರ ಸ್ನೇಹಿತರು. ಅವರ ಒಪ್ಪಿಗೆ ಪಡೆದುಕೊಂಡು ಬಂದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು..
ನನಗೆ ಸಂಬಂಧವಿಲ್ಲ:
ಸಿಎಂ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನನಗೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಇಲ್ಲ. ಸಿಎಂ ಮುಂದುವರಿಯುತ್ತಾರೋ, ಬೇರೆಯವರು ಆಗ್ತಾರೋ ನನಗೆ ಸಂಬಂಧ ಇಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅವರೇ ತೀರ್ಮಾನ ಮಾಡಬೇಕು. ನಾನೇಕೆ ತಲೆಕೆಡಿಸಿಕೊಳ್ಳಲಿ, ಅದರ ಅವಶ್ಯಕತೆ ನನಗೆ ಇಲ್ಲ ಎಂದು ಚುಟುಕಾಗಿ ಉತ್ತರಿಸಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ನಿಖಿಲ್ ಓಡಾಡುತ್ತಿದ್ದಾರೆ. ಮೈತ್ರಿಗೂ ಇದಕ್ಕೂ ಸಂಬಂಧ ಇಲ್ಲ. ನಾವು ೨೨೪ ಸ್ಥಾನಗಳಿಗೆ ಜೆಡಿಎಸ್ ಸ್ಪರ್ಧಿಸಲು ಸಾಧ್ಯವಿಲ್ಲದ ಕಾರಣ ನಮಗೆ ಶಕ್ತಿ ಇರುವ ಕಡೆ ಸಂಘಟನೆ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ಕೇಂದ್ರ ನಾಯಕರ ಜೊತೆ ಕ್ಷೇತ್ರಗಳ ಬಗ್ಗೆ ಮಾತಾಡುತ್ತೇವೆ ಎಂದು ನುಡಿದರು.