ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲು ಮೈಸೂರಿನಿಂದ ಬರುವಾಗ ಶನಿವಾರ ಮಧ್ಯಾಹ್ನ 2.15ಕ್ಕೆ ಹರಪನಹಳ್ಳಿ ಮೂಲಕ ಹಾದು ಹೋಗುತ್ತದೆ. ಅಜ್ಮೀರ್‌ನಿಂದ ಬರುವಾಗ ಬುಧವಾರ ಮಧ್ಯಾಹ್ನ 12.30ಕ್ಕೆ ಹಾದು ಹೋಗುತ್ತದೆ. ಆದರೆ ಹರಪನಹಳ್ಳಿಯಲ್ಲಿ ನಿಲ್ಲುವುದಿಲ್ಲ.
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಮೈಸೂರಿನಿಂದ ಅಜ್ಮೀರ್ ವರೆಗೆ ರೈಲು ಸಂಚಾರ ಆರಂಭಗೊಂಡಿದ್ದು, ಹರಪನಹಳ್ಳಿ ಮೇಲೆ ಹಾಯ್ದು ಹೋದರೂ ನಿಲುಗಡೆ ನೀಡಿಲ್ಲ. ಈ ಭಾಗದ ಜನರಿಗೆ ಅದರಿಂದ ತೀವ್ರ ಅಸಮಾಧಾನ ಉಂಟಾಗಿದೆ. ರೈಲ್ವೆ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.16281/82 ಸಂಖ್ಯೆಯ ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಹಾಸನ, ಅರಸೀಕೆರೆ, ದಾವಣಗೆರೆ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಟಿ.ಬಿ. ಡ್ಯಾಂ, ಕೊಪ್ಪಳ, ಗದಗ, ಹುಬ್ಬಳ್ಳಿ, ಬೆಳಗಾವಿ, ಪುಣೆ, ವಡೋದರ ಮಾರ್ಗವಾಗಿ ಸಂಚರಿಸಲಿದೆ.
ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲು ಮೈಸೂರಿನಿಂದ ಬರುವಾಗ ಶನಿವಾರ ಮಧ್ಯಾಹ್ನ 2.15ಕ್ಕೆ ಹರಪನಹಳ್ಳಿ ಮೂಲಕ ಹಾದು ಹೋಗುತ್ತದೆ. ಅಜ್ಮೀರ್‌ನಿಂದ ಬರುವಾಗ ಬುಧವಾರ ಮಧ್ಯಾಹ್ನ 12.30ಕ್ಕೆ ಹಾದು ಹೋಗುತ್ತದೆ. ಆದರೆ ಹರಪನಹಳ್ಳಿಯಲ್ಲಿ ನಿಲ್ಲುವುದಿಲ್ಲ.18 ಬೋಗಿಗಳನ್ನು ಹೊಂದಿರುವ ಈ ರೈಲಿಗೆ 4 ಸಾಮಾನ್ಯ ಬೋಗಿಗಳು, 2 ಟೈರ್ ಎಸಿ ಸ್ಲೀಪರ್, 7 ಸಾಮಾನ್ಯ ಸ್ಲೀಪರ್ ಕೋಚ್, 2 ತ್ರೀ-ಟೈರ್ ಎಸಿ ಸ್ಲೀಪರ್ ಕೋಚ್, ಒಂದು ಫಸ್ಟ್ ಕ್ಲಾಸ್ ಸ್ಲೀಪರ್ ಕೋಚ್‌ಗಳನ್ನು ಅಳವಡಿಸಲಾಗಿದೆ.
ಆದರೆ ಈ ರೈಲಿಗೆ ಹರಪನಹಳ್ಳಿಯಲ್ಲಿ ನಿಲುಗಡೆ ನೀಡದೇ ಇರುವುದು ಇಲ್ಲಿಯ ಜನರಲ್ಲಿ ಬೇಸರ ಮೂಡಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹೊಸಪೇಟೆ ಹೊರತುಪಡಿಸಿದರೆ ಹರಪನಹಳ್ಳಿಯೇ ದೊಡ್ಡ ತಾಲೂಕು ಹಾಗೂ ಕಂದಾಯ ಮತ್ತು ಪೊಲೀಸ್ ಉಪವಿಭಾಗವೂ ಹೌದು. ಈ ತಾಲೂಕಿನಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಅತಿ ಹೆಚ್ಚಾಗಿರುವ ಇಲ್ಲಿ ವಿದ್ಯಾಕಾಶಿ ಎನಿಸಿಕೊಂಡಿದೆ. ಫಾರ್ಮಸಿ ಅಭ್ಯಾಸ ಮಾಡಲು ಹೊರ ರಾಜ್ಯಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಜ್ಮೀರ್-ಮೈಸೂರು ರೈಲಿಗೆ ನಿಲುಗಡೆ ನೀಡಿದರೆ ಇಲ್ಲಿಗೆ ಬಂದು ಹೋಗುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ.ಈ ಸಂಬಂಧ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಲು ಚಿಂತನೆ ನಡೆಸಿದ್ದಾರೆ. ಆದ್ದರಿಂದ ಈ ಭಾಗದ ಸಂಸದರು, ಶಾಸಕರು, ರಾಜ್ಯದವರೇ ಆದ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ, ಈ ಬಗ್ಗೆ ಮನವರಿಕೆ ಮಾಡಿ, ಮೈಸೂರು-ಅಜ್ಮೀರ್ ರೈಲನ್ನು ಹರಪನಹಳ್ಳಿಯಲ್ಲಿ ನಿಲುಗಡೆ ಮಾಡಿಸಬೇಕು ಎಂಬುದು ಇಲ್ಲಿಯ ಜನತೆಯ ಒತ್ತಾಸೆಯಾಗಿದೆ.
ಪ್ರಯತ್ನ: ವಿವಿಧ ಸಂಘಟನೆಯವರು, ಮುಖಂಡರು, ಕಾರ್ಯಕರ್ತರು, ಹೋರಾಟಗಾರರು ಅಜ್ಮೀರ್ ರೈಲು ಹರಪನಹಳ್ಳಿಯಲ್ಲಿ ನಿಲುಗಡೆ ಕುರಿತು ಅರ್ಜಿ ಬರೆದು ತಂದು ಕೊಟ್ಟರೆ ನಾನು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರನ್ನು ಕಂಡು ಅರ್ಜಿ ಕೊಟ್ಟು ಮಾತನಾಡಿ, ನಿಲುಗಡೆಗೆ ಪ್ರಯತ್ನಿಸುತ್ತೇನೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.ನಿಲುಗಡೆಯಾಗಲಿ: ಹರಪನಹಳ್ಳಿ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ತಾಲೂಕು, ಬ್ರಿಟಿಷರ ಕಾಲದಲ್ಲಿಯೇ ತಾಲೂಕು ಕೇಂದ್ರವಾಗಿದೆ. ಪ್ರಯಾಣಿಕರ ಸಂಖ್ಯೆ ಸಹ ಹೆಚ್ಚು ಇದೆ. ಆದ್ದರಿಂದ ಮೈಸೂರು -ಅಜ್ಮೀರ್ ರೈಲನ್ನು ಹರಪನಹಳ್ಳಿಯಲ್ಲಿ ನಿಲುಗಡೆ ಮಾಡಬೇಕು. ಈ ಬಗ್ಗೆ ವಿವಿಧ ಸಂಘಟನೆಯವರು ಚರ್ಚಿಸಿ ಶೀಘ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ತಿಳಿಸಿದರು.