ಸಾರಾಂಶ
ಕ್ರೀಡಾ ಸ್ಫೂರ್ತಿ ಮತ್ತು ಸತತ ಪರಿಶ್ರಮವೇ ನನ್ನನ್ನ ಸಾಧನೆಗೆ ಪ್ರೇರೇಪಿಸಿತು
ಕನ್ನಡಪ್ರಭ ವಾರ್ತೆ ಮೈಸೂರು
ಕ್ರೀಡಾ ಸ್ಫೂರ್ತಿಯು ಜೀವನಕ್ಕೆ ಉತ್ಸಾಹ ತುಂಬುತ್ತದೆ. ಸಮಾಜದ ಒಳಿತಿಗೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾ ಮನೋಭಾವವೂ ಸಾಮರ್ಥ್ಯ ನೀಡುತ್ತದೆ ಎಂದು ಜೆಎಸ್ಎಸ್ ದಂತ ವೈದ್ಯಕೀಯ ಆಸ್ಪತ್ರೆಯ ಪ್ರಾಧ್ಯಾಪಕಿ, ಹಿಮಾಲಯ ಪರ್ವತಾರೋಹಿ ಡಾ. ಉಷಾ ಹೆಗ್ಡೆ ಅಭಿಪ್ರಾಯಪಟ್ಟರು.ಜಿಲ್ಲಾ ಪತ್ರಕರ್ತರ ಸಂಘವು ಮೈವಿವಿ ಓವಲ್ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ಕ್ರೀಡಾಕೂಟದ ಸಮಾರೋಪದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಕರ್ತರು ಹಾಗೂ ಕುಟುಂಬದವರು ವಿವಿಧ ಕ್ರೀಡೆಗಳಿಗೆ ಭಾಗವಹಿಸಿದ್ದು ನೋಡಿ ಸಂತೋಷವಾಗಿದೆ. ಈ ಚಟುವಟಿಕೆ ನಿರಂತರವಾಗಿರಬೇಕು. ನಾನು ಎವರೆಸ್ಟ್ ಪರ್ವತ ಏರಲು ನಿರ್ಧಾರ ಕೈಗೊಂಡಾಗ 52 ವರ್ಷ. ಕ್ರೀಡಾ ಸ್ಫೂರ್ತಿ ಮತ್ತು ಸತತ ಪರಿಶ್ರಮವೇ ನನ್ನನ್ನ ಸಾಧನೆಗೆ ಪ್ರೇರೇಪಿಸಿತು ಎಂದು ಅವರು ಹೇಳಿದರು.ಬಹುಮಾನ ವಿತರಿಸಿ ಮಾತನಾಡಿದ ಹುಣಸೂರು ಶಾಸಕ ಜೆ.ಡಿ. ಹರೀಶ್ ಗೌಡ, ಪತ್ರಕರ್ತರು ನಿತ್ಯವೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ರಾಜಕೀಯ, ರಾಜ್ಯ, ದೇಶ ಹಾಗೂ ವಿದೇಶದ ಸುದ್ದಿಯ ಮೇಲೂ ನಿಗಾವಹಿಸಿ ಕೆಲಸ ಮಾಡಬೇಕಿದೆ. ತಮ್ಮ ಆರೋಗ್ಯದ ಮೇಲೂ ಕಾಳಜಿವಹಿಸದೇ ಶ್ರಮಿಸುವ ನೀವೆಲ್ಲಾ ಇಂತಹ ಕ್ರೀಡಾಕೂಟದಲ್ಲಿ ಒಗ್ಗೂಡಿ ಕಾಲಕಳೆಯುತ್ತಿರುವುದು ಸ್ವಾಗತಾರ್ಹ. ನಿಮ್ಮ ಕ್ರೀಡಾ ಸ್ಫೂರ್ತಿ ಹೀಗೆಯೇ ಮುಂದುವರೆಯಲಿದೆ ಎಂದು ಹೇಳಿದರು.
ಬೆಳಗ್ಗೆ ಮಹಾರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿಗೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ದಿ ಟೈಮ್ಸ್ ಕ್ರಿಯೇಷನ್ಸ್ ಸ್ಥಾಪಕ ಹರೀಶ್
, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಹಾಗೂ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮೊದಲಾದವರು ಇದ್ದರು.