ಮಲೆನಾಡಿನಲ್ಲಿ ನಡೆದ ಪರಿಸರಕ್ಕೆ ಸಂಬಂಧಿಸಿದ ಅನೇಕ ಹೋರಾಟಗಳ ಯಶಸ್ಸಿನ ಹಿಂದೆ ನಾ.ಡಿಸೋಜ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ಕಾರದ ನೆರವಿಲ್ಲದೆ ಈ ಭಾಗದಲ್ಲಿ ಕೈಗೊಂಡ ಕೆರೆಗಳ ಕಾಯಕಲ್ಪಕ್ಕೂ ನಾ.ಡಿಸೋಜ ಕೈಜೋಡಿಸಿದ್ದಾರೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಮಲೆನಾಡಿನಲ್ಲಿ ನಡೆದ ಪರಿಸರಕ್ಕೆ ಸಂಬಂಧಿಸಿದ ಅನೇಕ ಹೋರಾಟಗಳ ಯಶಸ್ಸಿನ ಹಿಂದೆ ನಾ.ಡಿಸೋಜ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ಕಾರದ ನೆರವಿಲ್ಲದೆ ಈ ಭಾಗದಲ್ಲಿ ಕೈಗೊಂಡ ಕೆರೆಗಳ ಕಾಯಕಲ್ಪಕ್ಕೂ ನಾ.ಡಿಸೋಜ ಕೈಜೋಡಿಸಿದ್ದಾರೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳಿದರು.

ಪಟ್ಟಣದ ಶಿವಗೋಪಾಲಕೃಷ್ಣ ದೇವಸ್ಥಾನ ಸಭಾ ಭವನದಲ್ಲಿ ನಡೆದ ನಾ.ಡಿಸೋಜ ಸ್ಮರಣೆ ಕಾರ್ಯಕ್ರಮದಲ್ಲಿ ಶಿಕಾರಿಪುರದ ಸುವ್ವಿ ಪ್ರಕಾಶನ ನವೀನ್ ಡಿಸೋಜರ ಸಂಪಾದಕತ್ವದಲ್ಲಿ ಹೊರ ತಂದಿರುವ ನಾ.ಡಿಸೋಜರ ` "ಮುಳುಗಡೆಯ ಕತೆಗಳು'''' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಡಿಸೋಜ ನಿಧನರಾದ ನಂತರ ಜಿಲ್ಲೆ ಹಾಗೂ ತಾಲೂಕು ಆಡಳಿತ ಅವರಿಗೆ ನೀಡಬೇಕಾದ ಗೌರವ ತೋರದೆ ಕೃತಘ್ನವಾಗಿದೆ. ಸಾಗರದಲ್ಲಿ ನಿರ್ಮಾಣವಾಗಲಿರುವ ನೂತನ ರಂಗಮಂದಿರಕ್ಕೆ ಡಿಸೋಜರ ಹೆಸರು ಇಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ನಾ.ಡಿಸೋಜ ದಂತಗೋಪುರದಲ್ಲಿ ಬೆಳೆದ ಸಾಹಿತಿಯಲ್ಲ, ಬದಲಾಗಿ ಜನಸಮುದಾಯದ ನಡುವೆ ರೂಪುಗೊಂಡ ಬರಹಗಾರ. ಜನಸಮುದಾಯದ ನಡುವೆ ರೂಪುಗೊಂಡ ಕಾರಣಕ್ಕಾಗಿಯೇ ಅವರ ಬರಹಗಳಲ್ಲಿ ಸಮುದಾಯದ ನೋವು, ನಲಿವುಗಳಿಗೆ, ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಗುಣ ಎದ್ದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಯನಶೀಲತೆಯ ಗುಣ ನಾ.ಡಿಸೋಜರ ಬರವಣಿಗೆಯ ಜೀವದ್ರವ್ಯವಾಗಿದೆ ಎಂದ ಅವರು, ಮಲೆನಾಡಿನ ತಳ ಸಮುದಾಯಗಳ ಹಬ್ಬ ಹರಿದಿನ, ಸಾಂಪ್ರದಾಯಿಕ ಆಚರಣೆ, ಹಸೆಚಿತ್ತಾರ ಕಲೆ ಮೊದಲಾದ ಸಂಗತಿಗಳ ಕುರಿತು ಅಧ್ಯಯನ ನಡೆಸಿಯೇ ಅವರು ದಾಖಲು ಮಾಡಿದ್ದಾರೆ. ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ನಾ.ಡಿಸೋಜರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರವೊಂದು ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ಬಿಡುಗಡೆಯಾದ ಕೃತಿಯ ಕುರಿತು ಮಾತನಾಡಿದ ಬರಹಗಾರ ಜಿ.ಟಿ.ಸತ್ಯನಾರಾಯಣ, ಮುಳುಗಡೆ ಸಂತ್ರಸ್ತರಿಗೆ `ವಿಳಾಸ ಕೊಟ್ಟ ಲೇಖಕರಲ್ಲಿ ಡಿಸೋಜ ಅಗ್ರಗಣ್ಯರಾಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕೈಗೊಳ್ಳುವ ಯೋಜನೆಯಿಂದ ನೋವುಂಡವರು ಯಾರು, ಫಲಾನುಭವಿಗಳಾದವರು ಯಾರು ಎಂಬ ವಾಸ್ತವಕ್ಕೆ ಅವರ ಕತೆಗಳು ಕನ್ನಡಿ ಹಿಡಿದಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ವಿಜಯವಾಮನ್, ಡಿಸೋಜ ಸಾಗರದ ಒಂದು ಪ್ರಬಲ ಮತ್ತು ಪ್ರಖರವಾದ ರೂಪಕವಿದ್ದಂತೆ. ವ್ಯಕ್ತಿಗಳು ಕಣ್ಮರೆಯಾಗಬಹುದು. ಆದರೆ ರೂಪಕಗಳು ಯಾವತ್ತೂ ನಶಿಸುವುದಿಲ್ಲ. ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಕ್ಕೆ ಡಿಸೋಜ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸುವ್ವಿ ಪ್ರಕಾಶನದ ಸುನಿಲ್ ಕುಮಾರ್, ಫಿಲೋಮಿನಾ ಡಿಸೋಜ, ನವೀನ್ ಡಿಸೋಜ ಇದ್ದರು. ರೇಷ್ಮಾ ಡಿಸೋಜ ಸ್ವಾಗತಿಸಿ, ಶೋಭ ನರೇಶ್ ನಿರೂಪಿಸಿದರು.