ಶಿರಸಿಯಲ್ಲಿ ನಾ ರಾಜಗುರು ಸಂಗೀತ ನಾಟಕ ಪ್ರದರ್ಶನ

| Published : Jan 08 2025, 12:17 AM IST

ಶಿರಸಿಯಲ್ಲಿ ನಾ ರಾಜಗುರು ಸಂಗೀತ ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆಗಳ ಅವಧಿಯಲ್ಲಿ ಹಾಡಿನ ಜತೆ ರಾಜಗುರು ಅವರ ಜೀವನ ಚರಿತ್ರೆ, ಹಾಡು ಮಾತಿನ ನಡುವೆ ಬದುಕಿನ ಪುಟಗಳು ಅನಾವರಣಗೊಂಡವು.

ಶಿರಸಿ: ಸಂಗೀತ ಕ್ಷೇತ್ರಕ್ಕೆ ಸಾವಿರಾರು ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದ ಸ್ವರ ಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು ಅವರ ಬದುಕಿನ ವೃತ್ತಾಂತ ನಾ ರಾಜಗುರು ಸಂಗೀತ ನಾಟಕ ಪ್ರದರ್ಶನ ನಗರದ ಟಿಎಂಎಸ್ ಸಭಾಂಗಣದಲ್ಲಿ ಭಾನುವಾರ ಪ್ರದರ್ಶನ ಕಂಡಿತು.ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆಗಳ ಅವಧಿಯಲ್ಲಿ ಹಾಡಿನ ಜತೆ ರಾಜಗುರು ಅವರ ಜೀವನ ಚರಿತ್ರೆ, ಹಾಡು ಮಾತಿನ ನಡುವೆ ಬದುಕಿನ ಪುಟಗಳು ಅನಾವರಣಗೊಂಡವು.

ರಾಜಗುರು ಅವರ ಮೊಮ್ಮಗ ವಿಶ್ವರಾಜ ರಾಜಗುರು ಅವರು ಹಾಡು, ಅಭಿನಯದ ಮೂಲಕ ರಂಗ ಪ್ರಯೋಗ ಮೆಚ್ಚುಗೆ ಗಳಿಸಿದವು. ರಂಗ ನಿರ್ದೇಶಕ ಮಹಾದೇವ ಹಡಪದ ರಂಗರೂಪ ಪರಿಕಲ್ಪನೆಯ ಈ ಸಂಗೀತ ನಾಟಕದಲ್ಲಿ ತಬಲಾದಲ್ಲಿ ಅಕ್ಷಯ ಜೋಶಿ, ಹಾರ್ಮೋನಿಯಂನಲ್ಲಿ ವೆಂಕಟೇಶ ರೆಡ್ಡಿ ಸಾಥ್ ನೀಡಿದರು. ಸಂಗಮೇಶ ಸೊರಗಾಂವಿ ಬೆಳಕಿನ ವ್ಯವಸ್ಥೆ, ಉದಯ ಪೂಜಾರ ಧ್ವನಿ ವ್ಯವಸ್ಥೆ ಮಾಡಿದ್ದರು. ಇದಕ್ಕೂ ಮೊದಲು ಹಾಸಣಗಿ ಗಣಪತಿ ಭಟ್ಟರ ಶಿಷ್ಯೆ ವಿದುಷಿ ಮೇಧಾ ಭಟ್ಟ ಅವರಿಂದ ಗಾಯನ ಪ್ರಸ್ತುತಗೊಂಡಿತು. ತಬಲಾದಲ್ಲಿ ಗುರುರಾಜ ಆಡುಕಳ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ಪಕ್ಕ ವಾದ್ಯದಲ್ಲಿ ಐಶ್ವರ್ಯ ಹೆಗಡೆ, ಅನಂತಮೂರ್ತಿ ಹೆಗಡೆ ಸಾಥ್ ನೀಡಿದರು.

ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿ ಮಾತನಾಡಿ, ರಾಜುಗುರು ಅವರ ಪರಂಪರೆ ಸದಾ ಉಳಿಯುತ್ತದೆ. ರಾಜಗುರು ಅವರ ಶ್ರೇಷ್ಠ ಕಲಾವಿದರು. ಸಾಧಕ ವ್ಯಕ್ತಿಗಳ ಬಗ್ಗೆ ಏಕವ್ಯಕ್ತಿ ನಾಟಕ ನಡೆಸುವುದು ಅಪರೂಪ. ಇದೊಂದು ಸಂಗೀತಮಯ ನಾಟಕ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಟ್ರಸ್ಟಿನ ಕಾರ್ಯದ ಕುರಿತು ಹೇಳಿದರು.ಈ ವೇಳೆ ಟ್ರಸ್ಟ್ ಸದಸ್ಯೆ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಮಂಜುಳಾ ನಿಜಗುಣ, ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ, ರಂಜಾನ್ ಮತ್ತಿತರರು ಇದ್ದರು. ಪಂಡಿತ್ ಕೃಷ್ಣಮೂರ್ತಿ ಭಟ್ಟ ನಿರ್ವಹಿಸಿದರು.ಬನವಾಸಿಯಲ್ಲಿ ಅಯ್ಯಪ್ಪ ಸೇವಾ ಸನ್ನಿಧಿಯ ಮಹಾಪೂಜೆ

ಶಿರಸಿ: ಬನವಾಸಿಯ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ಮಂಗಳವಾರ ವಿಜೃಂಭಣೆಯಿಂದ ಜರಗಿತು. ಬೆಳಗ್ಗೆ ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ತುಪ್ಪ, ಹಾಲು, ಜೇನುತುಪ್ಪ, ಗೋಡಂಬಿ, ದ್ರಾಕ್ಷಿ, ಕಲ್ಲು ಸಕ್ಕರೆ ಹಾಗೂ ವಿವಿಧ ಬಗೆಯ ಹಣ್ಣುಗಳಿಂದ ಅಭಿಷೇಕಗೈದು, ಮಾಲಾಧಾರಿ ಸ್ವಾಮಿಗಳು ಭಜನೆ ಹಾಡಿ ಸಂಭ್ರಮಿಸಿದರು.ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ಪರಶುರಾಮ ಗುರುಸ್ವಾಮಿ ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಸಾವಿರಾರು ಭಕ್ತರು ಹಣ್ಣುಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ನಂತರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.ಪೂಜಾ ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ಶಿವರಾಜ ಆಚಾರ್ಯ, ಗುರುನಾಥ ಮೇಸ್ತ್ರಿ, ಸಚೀನ್ ಸಾಲಿ, ಮಾಲಾಧಾರಿಗಳಾದ ಪಾಪಣ್ಣ, ಮಾರುತಿ, ತೇಜಸ್, ಚಂದ್ರು, ಪ್ರಕಾಶ ಮತ್ತುಗುಣಿ, ಮಾಲತೇಶ, ಅಶೋಕ ಕಡಗೋಡ, ಮಂಜು ಕುರುಬರ, ರಾಘವೇಂದ್ರ, ದರ್ಶನ್ ಪಿಳ್ಳೈ ಹಾಗೂ ಸಾವಿರಾರು ಭಕ್ತರು ಇದ್ದರು.