ಸಾರಾಂಶ
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಸರ್ಜರಿಗೆ ಚಿಂತನೆ ನಡೆಯುತ್ತಿರುವ ನಡುವೆಯೇ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಈಗಾಗಲೇ ಇರುವ ಸಚಿವರಲ್ಲಿಯೇ ಕೆಲವರಿಗೆ ಕೊಕ್ ಕೊಟ್ಟು ಕೆಲವರಿಗೆ ಅವಕಾಶ ನೀಡಲು ತೆರೆ ಮರೆಯ ಕಸರತ್ತು ಕೂಡ ನಡೆಯುತ್ತಿದೆ.
ಈ ನಡುವೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸರ್ಜರಿಗೆ ವರಿಷ್ಠರೊಂದಿಗೆ ಚರ್ಚಿಸುವೆ. ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿರುವುದು ಕೂಡ ಸಚಿವರ ಬದಲಾವಣೆ ಬಹುತೇಕ ಪಕ್ಕಾ ಎಂದೇ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಸಚಿವ ಸ್ಥಾನದ ಪೈಪೋಟಿಯಲ್ಲಿದ್ದಾರೆ. ಮಾತ್ರವಲ್ಲ, ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕೂಡ ಕ್ಷೇತ್ರದಲ್ಲಿ ಮತ್ತು ಜಿಲ್ಲೆಯಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.ಇಲಾಖೆಗಳಲ್ಲಿ ಕಳಪೆ ಸಾಧನೆ ತೋರಿದ ಕ್ರಿಯಾಶೀಲರಲ್ಲದ ಸಚಿವರನ್ನು ಕೈ ಬಿಟ್ಟು, ಕೆಲವೊಂದು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿರುವ ನಡುವೆಯೇ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಕೂಡ ಹೆಚ್ಚಾಗುತ್ತಿದೆ.
ಸರಳ, ಸಜ್ಜನಿಕೆ ಹಾಗೂ ಸಂಭಾವಿತ ರಾಜಕಾರಣಿಗಳಾಗಿ ಬಲದಿನ್ನಿ ಧಣಿ ಎಂದೇ ಕರೆಸಿಕೊಳ್ಳುವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಕಳೆದ 40 ವರ್ಷಗಳಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಕ್ಲೀನ್ ಹ್ಯಾಂಡ್ ರಾಜಕಾರಣಿಯಾಗಿ ಬೆಳೆದು ಬಂದಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ, ಈ ಹಿಂದೆ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಮಿಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಜತೆಗೆ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚೇತಕರಾಗಿ, ಸಿಎಲ್‌ಪಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ, ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಅನುಭವ ಹೊಂದಿರುವ ಸಿ.ಎಸ್.ನಾಡಗೌಡರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಮಾನಿಗಳು ನಾಡಗೌಡರ ಈ ಸಾಧನೆಯ ಪಟ್ಟಿಯನ್ನು ವರಿಷ್ಠರ ಮುಂದೆ ತೋರಿಸುತ್ತಿದ್ದಾರೆ.
ಈ ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಜೆ.ಎಸ್.ದೇಶಮುಖ ಅವರು ಸಚಿವರಾಗಿ ಜನಸೇವೆ ಮಾಡಿದ್ದರು. ಬಳಿಕ ಜೆ.ಎಸ್ ದೇಶಮುಖ ನಿಧನಾ ನಂತರ ಅವರ ಪತ್ನಿ ವಿಮಲಾಬಾಯಿ ದೇಶಮುಖ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಈಗ ಮತ್ತೆ ಕ್ಷೇತ್ರಕ್ಕೆ ಮತ್ತೊಂದು ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿದೆ. ಹೀಗಾಗಿ ಸಿ.ಎಸ್.ನಾಡಗೌಡರನ್ನು ಹಿರಿಯರ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸುತ್ತಿದ್ದಾರೆ.ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಎಂ.ಬಿ.ಪಾಟೀಲ ಮತ್ತು ಬ.ಬಾಗೇವಾಡಿ ಮತಕ್ಷೇತ್ರದ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಂದು ವೇಳೆ ಇನ್ನೊಂದು ಸಚಿವ ಸ್ಥಾನ ನೀಡುವುದಾದರೆ ಅದನ್ನು ಸಿ.ಎಸ್.ನಾಡಗೌಡರಿಗೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಮಾತ್ರವಲ್ಲ, ಇದಕ್ಕಾಗಿ ತೆರೆಮರೆಯಲ್ಲಿ ಯತ್ನ ಕೂಡ ನಡೆಯುತ್ತಿದೆ ಎಂದು ಹೇಳಲಾಗಿದೆ.
---------------ಕೋಟ್....
ಮೊದಲೇ ನಾಡಗೌಡರು ದೇಶಗತ್ತಿ ಮನೆತನದಿಂದ ಬಂದವರು. ಅವರೊಬ್ಬ ಅನುಭವಿ ಹಿರಿಯ ರಾಜಕಾರಣಿಯಾಗಿದ್ದರಿಂದ ಕಾಂಗ್ರೆಸ್ ಹೈ ಕಮಾಂಡ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು.- ಬಿ.ಎಂ.ಹಿರೇಮಠ, ಹಿರಿಯ ಸಾಹಿತಿ
-------ಈ ಬಾರಿ ಸಿ.ಎಸ್.ನಾಡಗೌಡರನ್ನು ಜನತೆ ಗೆಲ್ಲಿಸಿದ್ದಾರೆ. ಇದು ಅವರ ಕೊನೆ ಚುನಾವಣೆಯಾಗಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿ ಗೌರವಿಸಿದರೇ ಇಡಿ ಮತಕ್ಷೇತ್ರದ ಜನತೆಗೆ ಗೌರವಿಸಿದಂತಾಗುತ್ತದೆ. ಜೊತೆಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟನೆ ಮಾಡಲು ಶಕ್ತಿ ತುಂಬಿದಂತಾಗುತ್ತದೆ.- ಎಂ.ಬಿ.ನಾವದಗಿ, ನ್ಯಾಯವಾದಿಗಳು.