ಸಾರಾಂಶ
ಸಮುದಾಯವು ರಾಜಕೀಯ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ.
ಹೂವಿನಹಡಗಲಿ: ತಾಲೂಕಿನ ಇಟ್ಟಗಿ ಗ್ರಾಮದಲ್ಲಿ ನದಾಫ್ ಹಾಗೂ ಪಿಂಜಾರ್ ಸಮುದಾಯದ ಸಮಾವೇಶ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನದಾಫ್- ಪಿಂಜಾರ್ ಸಮುದಾಯದ ರಾಜ್ಯಾಧ್ಯಕ್ಷ ಜಲೀಲಸಾಬ್, ಸಮುದಾಯವು ರಾಜಕೀಯ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಎಲ್ಲರೂ ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶನದ ಮೂಲಕ ರಾಜಕೀಯವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಆಗಬೇಕಿದೆ. ಶಿಕ್ಷಣದಿಂದ ಎಲ್ಲ ಸಾಧನೆ ಮಾಡಲು ಸಾಧ್ಯವಿದೆ. ರಾಜಕೀಯವಾಗಿ ನಾಯಕರಾಗಲು ಉತ್ತಮ ಗುಣಗಳನ್ನು ಬೆಳೆಸಿಕೊಂಡು, ಎಲ್ಲ ಸಮುದಾಯದ ಪ್ರೀತಿ, ವಿಶ್ವಾಸವನ್ನು ಗಳಿಸಬೇಕೆಂದು ಹೇಳಿದರು.
ಸಮಾವೇಶಕ್ಕೆ ಚೌಕಿ ಮಠದ ಸದ್ಗುರು ಗಾಡಿತಾತಾ ಚಾಲನೆ ನೀಡಿ ಮಾತನಾಡಿ, ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದಾಗ, ಈ ದೇಶದ ಉತ್ತಮ ಪ್ರಜೆಗಳಾಗುತ್ತಾರೆಂದು ಹೇಳಿದರು.ಇದೇ ಸಂದರ್ಭದಲ್ಲಿ ರಾಜ್ಯ ಉಪ ಸಮಿತಿಗಳ ಪದಗ್ರಹಣ, ಹಾಗೂ ಜಿಲ್ಲೆಯ ವಿವಿಝ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ಹೊನ್ನೂರು ಸಾಬ್, ಉಪಾಧ್ಯಕ್ಷ ಮೊಹ್ಮದ್ ರಫಿ, ತಾಲೂಕ ಅಧ್ಯಕ್ಷ ಹುಸೇನ್ ಸಾಬ್ ಕೊಂಬಳಿ, ಫಕೃದ್ಧೀನ್ ಬಳಿಗಾರ, ಲೋಕಪ್ಪ, ಕುಂಚೂರು ಕೊಟ್ರೇಶ ಇದ್ದರು.