ನದಾಫ್, ಪಿಂಜಾರ್ ಸಮಾಜಕ್ಕೆ ನಿಗಮ ಸ್ಥಾಪಿಸಲು ಆಗ್ರಹ

| Published : Mar 05 2024, 01:31 AM IST

ಸಾರಾಂಶ

ನದಾಫ್‌, ಪಿಂಜಾರ್ ಸಮಾಜದ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು.

ಹೊಸಪೇಟೆ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಪಿಂಜಾರ್ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ನಿಗಮದಲ್ಲಿ ಸಮಾಜಕ್ಕೆ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ನದಾಫ್, ಪಿಂಜಾರ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಕಲ್ಪಿಸಬೇಕು. ಇಸ್ಲಾಂ ಧರ್ಮದಲ್ಲಿ ಶೇ. 35ರಷ್ಟು ಜನಸಂಖ್ಯೆ ಪಿಂಜಾರ್, ನದಾಫ್ ಸಮಾಜದ ಜನಗಳಿದ್ದಾರೆ. ಹೀಗಿದ್ದರೂ ಶೈಕ್ಷಣಿಕವಾಗಿ ನಮ್ಮ ಸಮಾಜ ಹಿಂದುಳಿದಿದೆ ಎಂದು ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲ್ ಸಾಬ್ ಕಳವಳ ವ್ಯಕ್ತಪಡಿಸಿದರು.

ನಗರದ ಕಮ್ಮಾ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ವಿಜಯನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ನದಾಫ್‌, ಪಿಂಜಾರ್ ಸಮಾಜದ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ನದಾಫ್, ಪಿಂಜಾರ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನ ಭಾವೈಕ್ಯ ಗುರುಪೀಠದ ಶ್ರೀ ಸಂಗಂ ಪೀರ್ ಚಿಸ್ತಿ ಗುರುಗಳು ಸಾನ್ನಿಧ್ಯ ವಹಿಸಿ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಜಿ ಎಚ್. ಇಬ್ರಾಹಿಂಸಾಬ್‌ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ಮುಖಂಡರಾದ ಎಚ್.ಎನ್.ಎಫ್. ಇಮಾಮ್ ನಿಯಾಜಿ ಮಾತನಾಡಿ, ಪಿಂಜಾರ್ ಸಮಾಜ ಸರ್ಕಾರದ ಸೌಲಭ್ಯ ಪಡೆಯುವ ಸಂಬಂಧ ಯಾವುದೇ ಹೋರಾಟ ಹಮ್ಮಿಕೊಂಡರೂ ನಮ್ಮ ಅಂಜುಮನ್ ಸಂಸ್ಥೆ ಬೆಂಬಲ ಸೂಚಿಸಿ ಜತೆಗೆ ನಿಲ್ಲುತ್ತದೆ ಎಂದರು. ಇದೇ ಸಂರ್ಭದಲ್ಲಿ ವಿಜಯನಗರ ಜಿಲ್ಲೆಗೆ ನೂತನವಾಗಿ ಆಯ್ಕೆಯಾದ ನದಾಫ್‌, ಪಿಂಜಾರ್ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.