ಕಳೆದ 16 ವರ್ಷಗಳಿಂದ ಇಡೀ ನವೆಂಬರ್ ತಿಂಗಳನ್ನು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಹಬ್ಬವನ್ನಾಗಿ ಆಚರಿಸುತ್ತಿದೆ.
ಧಾರವಾಡ:
ಕಳೆದ 16 ವರ್ಷಗಳಿಂದ ಇಡೀ ನವೆಂಬರ್ ತಿಂಗಳನ್ನು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಹಬ್ಬವನ್ನಾಗಿ ಆಚರಿಸುತ್ತಿದೆ. ಇದೀಗ 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡಹಬ್ಬದ ಅಂಗವಾಗಿ ನ. 1ರಿಂದ 30ರ ವರೆಗೆ ಸಂಗೀತ, ನೃತ್ಯ, ಜನಪದ, ಪರಿಸರ, ನಾಟಕ, ಸಾಧಕರಿಗೆ ಸನ್ಮಾನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ನ.1ರಂದು ಸಂಜೆ 5.30ಕ್ಕೆ ರಾಜ್ಯಸಭಾ ಸದಸ್ಯ ಎಂ. ನಾಗರಾಜ ನಾಡಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಅರವಿಂದ ಬೆಲ್ಲದ ವಾಗ್ಭೂಷಣ ಸಂಚಿಕೆ ಬಿಡುಗಡೆ ಮಾಡುವರು. ಹಿರಿಯ ಸಂಗೀತಗಾರ ಪಂ.ಎಂ. ವೆಂಕಟೇಶಕುಮಾರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಪಾಂಡುರಂಗ ಪಾಟೀಲ, ಶ್ರೀನಿವಾಸ ವಾಡಪ್ಪಿ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದರು.
ನ. 2ರಿಂದ 13ರ ವರೆಗೆ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಿತ್ಯ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಸಂಗೀತ, ಜನಪದ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ನ. 14ರಂದು ಮಕ್ಕಳ ರಾಜ್ಯೋತ್ಸವ ಜರುಗಲಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಚಿತ್ರಕಲೆ, ನಾಡು-ನುಡಿಯ ಕುರಿತ ಹಾಡುಗಳು, ಭಾಷಣ, ವೇಷಭೂಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು ಜರುಗಲಿವೆ. ಬಾಲವಿಕಾರ ಅಕಾಡೆಮಿ ಅಧ್ಯಕ್ಷ ಅಡವೇಶ ಇಟಗಿ ಅಂದು ಸಂಜೆ 5.30ಕ್ಕೆ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.ಈ ಬಾರಿ ನಾಡಹಬ್ಬದಲ್ಲಿ ಪರಿಸರ ಕಾಳಜಿಯನ್ನು ಯುವ ಪೀಳಿಗೆಗೆ ಅರ್ಥೈಸುವ ಸಲುವಾಗಿ ಪರಿಸರ ಜಾತ್ರೆ ಹೆಸರಿನಲ್ಲಿ ಪರಿಸರ ಸ್ನೇಹಿ ಬದುಕು, ಪರಿಸರದ ವಾಸ್ತವಾಂಶಗಳು, ಧಾರವಾಡ ನಾಗರಿಕರ ಸಮಸ್ಯೆಗಳು, ಪರಿಸರ ಸಂರಕ್ಷಣೆ, ಮಹತ್ವ ಸಾರುವ ಉಪನ್ಯಾಸ, ಚರ್ಚೆ, ಪ್ರದರ್ಶನ, ಪ್ರಾತ್ಯಕ್ಷಿಕೆಯನ್ನು ನ. 15 ಹಾಗೂ 16ರಂದು ಸಂಘದ ಆವರಣದಲ್ಲಿ ಆಯೋಜಿಸಿದೆ. ನ.15ರಿಂದ 19ರ ವರೆಗೆ ಸಂಜೆ 6ರಿಂದ 8ರ ವರೆಗೆ ಐದು ದಿನ ಸಾವಯವ ಆಹಾರ, ಪರಿಸರ ಸ್ನೇಹಿ ಬಟ್ಟೆ, ಕಟ್ಟಡ ನಿರ್ಮಾಣ, ಹಾವು, ಪಕ್ಷಿಗಳ ಸಂರಕ್ಷಣೆ, ಸೈಕಲ್ ಹವ್ಯಾಸ, ತಾರಸಿ ತೋಟ ಅಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ವಿಷಯವಾಗಿಯೇ ಸಂಘವು ವೆಬ್ಸೈಟ್ ಆರಂಭಿಸುತ್ತಿದೆ ಎಂದು ಹಲಗತ್ತಿ ಹಾಗೂ ಕುಲಕರ್ಣಿ ತಿಳಿಸಿದರು.
12 ದಿನ ನಾಟಕೋತ್ಸವ:ವಿದ್ಯಾವರ್ಧಕ ಸಂಘವು ನಾಡಹಬ್ಬದ ಅಂಗವಾಗಿ ನ. 18ರಿಂದಗ 30ರ ವರೆಗೆ ನಿತ್ಯ ಸಂಜೆ 5.30ಕ್ಕೆ ನಾಟಕೋತ್ಸವ ಹಮ್ಮಿಕೊಂಡಿದೆ. ಪ್ರತಿನಿತ್ಯ ನಾಟಕದೊಂದಿಗೆ ರಂಗ ಕಲಾ ಸನ್ಮಾನಸಹ ಇರಲಿದೆ. ನ. 18ರಂದು ಸನ್ಮತಿ ಅಂಗಡಿ ನಿರ್ದೇಶಿಸಿದ ಪೇಯಿಂಗ್ ಗೆಸ್ಟ್ ನಾಟಕವನ್ನು ಕೊಟ್ಟೊರೇಶ್ವರ ನಾಟಕ ಮಂಡಳಿಯು ಪ್ರಸ್ತುತಪಡಿಸಲಿದೆ. ನ. 19ರಂದು ಕಲ್ಲಯ್ಯಸ್ವಾಮಿ ಹಿರೇಮಠ ನಿರ್ದೇಶನದ ನಿಜಗುಣ ಶಿವಯೋಗಿ ನಾಟಕವನ್ನು ರೇಣುಕಾಚಾರ್ಯ ನಾಟಕ ಸಂಘವು ಪ್ರಸ್ತುತಪಡಿಸಲಿದೆ. ನ. 20ರಂದು ಮಂಜುನಾಥ ಬಡಿಗೇರ ನಿರ್ದೇಶನದ ಅತ್ತಲಾ ಕಿಷ್ಕಿಂದೆಯೊಳ್ ನಾಟಕವನ್ನು ಮಂಡ್ಯದ ಸದ್ವಿದ್ಯಾ ರಂಗ ತಂಡವು ಪ್ರಸ್ತುತಪಡಿಸಲಿದೆ. ನ. 21ರಂದು ವೈ.ಡಿ. ಬದಾಮಿ ನಿರ್ದೇಶನದ ಬಯಲು ಬಯಲಾಯಿತು ನಾಟಕವನ್ನು ಬನಹಟ್ಟಿಯ ವಾತ್ಯಲ್ಯ ವಿಚಾರ ವೇದಿಕೆ ಪ್ರಸ್ತುತ ಪಡಿಸಲಿದೆ ಎಂದರು.
ನ. 22ರಂದು ಗದಿಗಯ್ಯ ಹಿರೇಮಠ ನಿರ್ದೇಶನದಲ್ಲಿ ಮಂಡೋದರಿ ಕಲ್ಯಾಣ ನಾಟಕವನ್ನು ಹುಬ್ಬಳ್ಳಿಯ ಜೀವಿ ಕಲಾಬಳಗ ಪ್ರಸ್ತುತಪಡಿಸಲಿದೆ. ನ. 23ರಂದು ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಈದಿ ನಾಟಕವನ್ನು ಉಡುಪಿಯ ಸುಮನಸಾ ಕೊಡವೂರು ತಂಡ ಪ್ರಸ್ತುತಪಡಿಸಲಿದೆ. ನ. 24ರಂದು ಮಹಾಂತೇಶ ರಾಮದುರ್ಗ ನಿರ್ದೇಶನದಲ್ಲಿ ಬರಕೋ ಪದ ಬರಕೋ ನಾಟಕವನ್ನು ಸಿರಿಗೆರೆಯ ಧಾತ್ರಿ ರಂಗ ಸಂಸ್ಥೆ ಪ್ರಸ್ತುತಪಡಿಸಲಿದೆ. ನ. 25ರಂದು ಭೀಮೇಶ ಎಚ್.ಎನ್. ನಿರ್ದೇಶನದಲ್ಲಿ ಸಿರಿಗೆರೆ ಧಾತ್ರಿ ಸಂಸ್ಥೆಯು ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕವಿದೆ. ನ. 26ರಂದು ಶ್ರುತಿ ತಿಪಟೂರ ನಿರ್ದೇಶನದಲ್ಲಿ ಸಿರಿಗೆರೆ ಧಾತ್ರಿ ತಂಡವು ಸೈಲೆನ್ಸ್ ಇಂಟರಪ್ಟಡ್ ನಾಟಕ ನಡೆಯಲಿದೆ. ನ. 27ರಂದು ಮಹಾದೇವ ಹೊಸೂರ ನಿರ್ದೇಶನದ ಸುಪಾರಿ ಸರೋಜ ನಾಟಕವನ್ನು ಗದಗ ಪಂಚಾಕ್ಷರಿ ಗವಾಯಿಗಳ ನಾಟಕ ಸಂಘವು ಪ್ರಸ್ತುತಪಡಿಸಲಿದೆ. ನ. 28ರಂದು ಝಾಕೀರ ನದಾಫ್ ನಿರ್ದೇಶನದಲ್ಲಿ ನೆಲ ಮುಗಿಲು, ನ. 29ರಂದು ಹಾಲು ಬಟ್ಟಲದೊಳಗಿನ ಪಾಲು ಎರಡೂ ನಾಟಕವನ್ನು ರಂಗ ಆರಾಧನಾ ಸಂಸ್ಥೆ ಪ್ರಸ್ತುತಪಡಿಸಲಿವೆ. ನ. 20ರಂದು ಸಮಾರೋಪ ಇರಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ.ಜಿನದತ್ತ ಹಡಗಲಿ, ಗುರು ಹಿರೇಮಠ ಇದ್ದರು.ಕರ್ನಾಟಕ ವಿದ್ಯಾವರ್ಧಕ ಸಂಘ ಬರೀ ಧಾರವಾಡಕ್ಕೆ ಮಾತ್ರ ಸೀಮಿತವಾಗಿದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕನ್ನಡದ ಕಾರ್ಯ ಮಾಡುತ್ತಿದೆ. ರಾಜ್ಯೋತ್ಸವ ನಿಮಿತ್ತ ರಾಜ್ಯದ 12 ಜಿಲ್ಲೆಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳು ಜರುಗುತ್ತಿವೆ. ಹತ್ತಾರು ಕಾಲೇಜುಗಳಲ್ಲಿ ಹಚ್ಚೇವು ಕನ್ನಡದ ದೀಪ ತಲೆಬರದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಮನಸ್ಸುಗಳು ಇಡೀ ನವೆಂಬರ್ ತಿಂಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.
ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ