ಸಾರಾಂಶ
ಬೆಂಗಳೂರು : ಬಿಬಿಎಂಪಿಯಿಂದ ಆಯೋಜಿಸುವ ‘ಕೆಂಪೇಗೌಡ ಜಯಂತಿ’ ಮತ್ತು ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಜುಲೈ 27ರೊಳಗಾಗಿ ಆಚರಣೆಗೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 28ಕ್ಕೆ ರಾಜ್ಯ ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅದಕ್ಕೆ ಬಿಬಿಎಂಪಿಯಿಂದ ಕೈಗೊಳ್ಳಬೇಕಾದ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಮಾಗಡಿ ಹಾಗೂ ಕೆಂಪೇಗೌಡರ ಜನ್ಮ ಸ್ಥಳದಿಂದ ಹೆಚ್ಚುವರಿ ಎರಡು ಸೇರಿದಂತೆ 6 ಸ್ಥಳದಿಂದ ರಥಯಾತ್ರೆ ನಡೆಯಲಿದೆ. ಮೆರವಣಿಗೆ ಮತ್ತು ಹೂವಿನ ಅಲಂಕಾರವನ್ನು ಬಿಬಿಎಂಪಿಯಿಂದ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮ ಮುಕ್ತಾಯಗೊಂಡ ಒಂದು ತಿಂಗಳ ಒಳಗೆ ಅಂದರೆ, ಜುಲೈ 27ಕ್ಕಿಂತ ಮೊದಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಸಮಯ ನೋಡಿಕೊಂಡು ಬಿಬಿಎಂಪಿಯಿಂದ ಸಹ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುವುದು. ಸಂಪ್ರದಾಯದಂತೆ ಬಿಬಿಎಂಪಿ ನೌಕರರಿಗೆ ಅಂದು ಬೆಳಗ್ಗೆ ಪದಕ ಪ್ರದಾನ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಸಂಜೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಗೊಂದಲಕ್ಕೆ ಅವಕಾಶ ನೀಡಲ್ಲ:
ಈ ಹಿಂದೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನದ ವೇಳೆ ಬಹಳಷ್ಟು ಗೊಂದಲ ಉಂಟಾಗಿವೆ. ಈ ಬಾರಿ ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮೊದಲೇ ಪ್ರಶಸ್ತಿ ಸಂಖ್ಯೆಯನ್ನು ನಿಗದಿ ಪಡಿಸಲಾಗುವುದು. ಜತೆಗೆ, ಪ್ರಶಸ್ತಿ ಮಾನದಂಡ ಪರಿಷ್ಕರಿಸಿ ಪ್ರಶಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದರು.