ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೃಷಿ ಸಂಸ್ಕೃತಿಗೆ ಪೂರಕವಾದ ನಗರ ನಿರ್ಮಾಣ ಪರಿಕಲ್ಪನೆ ಹೊಂದಿದ್ದ ನಾಡಪ್ರಭು ಕೆಂಪೇಗೌಡರು ದೇಶದ ಮಾದರಿ ಆಡಳಿತಗಾರ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ದೂರದೃಷ್ಟಿಯ ಜನಪರ ಆಡಳಿತಗಾರರಾಗಿದ್ದ ಕೆಂಪೇಗೌಡರು ಶ್ರಮಿಕ ವರ್ಗಗಳು ಸೇರಿದಂತೆ ನಾಡಿನ ಅನ್ನದಾತರಾದ ರೈತರ ಹಿತವನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ದಕ್ಷ ಪ್ರಾಮಾಣಿಕ ಆಡಳಿತ ನೀಡಿದರು ಎಂದರು.

ನೂರಾರು ಕೆರೆಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರು ಹಾಗೂ ಬೇಸಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದ ಗೌಡರು, ವರ್ತಕರು ಹಾಗೂ ವ್ಯಾಪಾರಿಗಳು ವ್ಯಾಪಾರ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಪೇಟೆಗಳನ್ನು ನಿರ್ಮಿಸಿ ಜನನಾಯಕರೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ ಎಂದು ಶ್ಲಾಘಿಸಿದರು.

ವಿಜಯನಗರದ ಅರಸರ ಅಡಿಯಲ್ಲಿ ಸಾಮಾನ್ಯ ಪಾಳೇಗಾರರಾಗಿದ್ದ ಕೆಂಪೇಗೌಡರು ಬೆಂಗಳೂರು ನಗರವನ್ನು ಕೃಷಿ ಸಂಸ್ಕೃತಿಗೆ ಪೂರಕವಾಗಿ ಒಂದು ಯೋಜಿತ ನಗರವನ್ನಾಗಿ ನಿರ್ಮಿಸಿದರು. ಇಂದಿನ ಬೆಂಗಳೂರು ಮಹಾನಗರದ ಪ್ರತಿಯೊಂದು ಹೆಜ್ಜೆಯಲ್ಲೂ ಕೆಂಪೇಗೌಡರ ಕನಸುಗಳಿವೆ ಎಂದು ಸ್ಮರಿಸಿದರು.


ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಕೆಂಪೇಗೌಡರನ್ನು ಕುರಿತು ಮಾತನಾಡಿದರು. ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಾಲೂಕು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಉಪಸ್ಥಿತರಿದ್ದರು.ಕೆಂಪೇಗೌಡರ ಜಯಂತಿ ನೀರಸ: ಸಾರ್ವಜನಿಕರಿಂದ ಟೀಕೆ

ಕೆ.ಆರ್.ಪೇಟೆ:ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಆಚರಿಸಿದ ಕೆಂಪೇಗೌಡರ ಜಯಂತ್ಯುತ್ಸವ ಅತ್ಯಂತ ನೀರಸವಾಗಿತ್ತು.

ಈ ಹಿಂದೆ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತ ಅತ್ಯಂತ ವ್ಯವಸ್ಥಿತವಾಗಿ ಆಚರಿಸುತ್ತಿತ್ತು. ಆಹ್ವಾನ ಪತ್ರಿಕೆ ಮುದ್ರಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವ ಪ್ರಯತ್ನ ಮಾಡುತ್ತಿತ್ತು.ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಕೆಂಪೇಗೌಡರ ಭಾವಚಿತ್ರವನ್ನು ಅಲಂಕೃತ ರಥದಲ್ಲಿಟ್ಟು ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಮಿನಿ ವಿಧಾನ ಸೌಧದ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಿ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿತ್ತು.

ಸರ್ಕಾರಿ ಅನುದಾನ ಬಳಕೆ ಮಾಡಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿತ್ತು. ಸಾಲು ಸಾಲು ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆಗೆ ತಿಲಾಂಜಲಿ ನೀಡಿದ ತಾಲೂಕು ಆಡಳಿತ ತನ್ನ ಕಚೇರಿಯ ಒಳಗೆ ಸರಳವಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.ತಾಲೂಕು ಆಡಳಿತ ಆಯೋಜಿದ್ದ ಇಂದಿನ ಕೆಂಪೇಗೌಡರ ಜಯಂತ್ಯುತ್ಸವಕ್ಕೆ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರಲ್ಲದೆ ಸಾರ್ವಜನಿಕರ ಕೊರತೆಯೂ ಇತ್ತು. ನಾಡಪ್ರಭುವಿಗೆ ತಾಲೂಕು ಆಡಳಿತ ಅಪಮಾನ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಆರೋಪಿಸಿದ್ದಾರೆ.