ಬೆಂಗಳೂರು ವಿಶ್ವದೆಲ್ಲೆಡೆ ಪರಿಚಯವಾಗಲು ನಾಡಪ್ರಭು ಕೆಂಪೇಗೌಡರು ಕಾರಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Jun 28 2024, 01:00 AM IST

ಬೆಂಗಳೂರು ವಿಶ್ವದೆಲ್ಲೆಡೆ ಪರಿಚಯವಾಗಲು ನಾಡಪ್ರಭು ಕೆಂಪೇಗೌಡರು ಕಾರಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡರ ಸಾಧನೆಯ ಗೌರವ ಪೂರ್ವಕ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ಗೌರವ ಸಲ್ಲಿಸಲಾಗಿದೆ. ಜೊತೆಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಹನೀಯರ ಜಯಂತಿಗಳನ್ನು ಕೇವಲ ಆಚರಣೆ ಮಾತ್ರ ಸೀಮಿತಗೊಳಿಸಬಾರದು. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತನ್ನೊಳಗಿನ ಸ್ವಾರ್ಥವನ್ನು ಬಿಟ್ಟು ಜನ ಸೇವೆಗಾಗಿ ತಮ್ಮ ಕಲ್ಪನೆಯ ಮೂಲಕ ಕಟ್ಟಿದ ಬೆಂಗಳೂರು ಇಂದು ವಿಶ್ವದಲ್ಲೆಡೆ ಪರಿಚಯವಾಗಲು ನಾಡಪ್ರಭು ಕೆಂಪೇಗೌಡರು ಕಾರಣ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ಮರಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆಯಿಂದ ನಡೆದ ನಾಡಪ್ರಭು ಕೆಂಪೇಗೌಡ ರವರ 515 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಹಾಗೂ ಬೆಂಗಳೂರಿಗೆ ಇರುವ ಸಂಬಂಧವೇ ದೊಡ್ಡ ಇತಿಹಾಸ ಎಂದರು.

ಹಳೇಬೇಲೂರು ಎಂಬ ಹೆಸರನ್ನು ಬೆಂಗಳೂರು ಎಂದು ನಾಮಕರಣ ಮಾಡಿ ಎಲ್ಲ ಸಮುದಾಯದ ಜನರ ಹಿತಕ್ಕಾಗಿ ಆಧುನಿಕ ಮಾರುಕಟ್ಟೆ ನಿರ್ಮಿಸಿ ಒಕ್ಕಲುತನವನ್ನು ಪ್ರೋತ್ಸಾಹಿಸಲು ಕೆರೆ-ಕಟ್ಟೆ ನಿರ್ಮಿಸಿ ಜನರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಸಾಧನೆ ಮಾಡಿದ ಕೆಂಪೇಗೌಡರ ಹೆಸರು ಎಂದೆಂದಿಗೂ ಶಾಶ್ವತವಾಗಿತ್ತದೆ ಎಂದರು.

ನಾಡಪ್ರಭು ಕೆಂಪೇಗೌಡರ ಸಾಧನೆಯ ಗೌರವ ಪೂರ್ವಕ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ಗೌರವ ಸಲ್ಲಿಸಲಾಗಿದೆ. ಜೊತೆಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಮಹನೀಯರ ಜಯಂತಿಗಳನ್ನು ಕೇವಲ ಆಚರಣೆ ಮಾತ್ರ ಸೀಮಿತಗೊಳಿಸಬಾರದು. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಅಳಿಲು ಸೇವೆ ಮೂಲಕ ರಾಜ್ಯ, ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆ ನೀಡಿ ಋಣ ತೀರಿಸಲು ಯುವ ಜನತೆ ಮುಂದಾಗಬೇಕು ಎಂದರು.

ಶಿಕ್ಷಣ ಇಲಾಖೆಯ ಸಿದ್ದರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೆರೆ ಕಟ್ಟೆಗಳ ನಿಮಾ೯ಣಕ್ಕೆ ಹೆಚ್ಚು ಒತ್ತು ನೀಡಿದರು. ದೊಡ್ಡ ನಗರವನ್ನಾಗಿ ಸ್ಥಾಪಿಸಿ ಎಲ್ಲಾ ಸಮುದಾಯದ ಜನರ ಹಿತ ಕಾಯುವಲ್ಲಿ ಬದ್ದರಾಗಿದ್ದರು. ಅವರ ಅಪಾರ ಸಾಧನೆ ಮತ್ತು ಸೇವೆಯಿಂದಾಗಿ ಕೆಂಪೇಗೌಡರು ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದರು.

ತಹಸೀಲ್ದಾರ್ ಲೋಕೇಶ್ ಮಾತನಾಡಿ, ಹೊಸ ನಾಡನ್ನು ಕಟ್ಟಬೇಕೆಂಬ ಹಂಬಲದಿಂದ ಕೆಂಪೇಗೌಡರು ತಮ್ಮ ಕನಸ್ಸನ್ನು ನನಸು ಮಾಡಿಕೊಂಡರು. ಅದೇ ರೀತಿ ಯುವ ಜನಂಗ ಸಾಧನೆ ಮಾಡಬೇಕೆಂಬ ಗುರಿ ಹೊಂದಿ ಉತ್ತಮ ಸಾಧಕರಾಗಬೇಕು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ವಿವಿಧ ಹೂಗಳಿಂದ ಆಲಂಕೃತಗೊಂಡ ಕೆಂಪೇಗೌಡ ಭಾವಚಿತ್ರಕ್ಕೆ ಚೆಸ್ಕಾಂ ಎಇಇ ಪ್ರೇಮ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.

ಕೆಂಪೇಗೌಡ ಜಯಂತಿ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಗೆ ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಈ ವೇಳೆ ಸಹಾಯಕ ಎಂಜಿನಿಯರ್ ಪ್ರಕಾಶ್, ನಾಗೇಂದ್ರ, ರಾಜೇಶ್ವರಿ, ಜೂನಿಯರ್ ಎಂಜಿನಿಯರ್ ಮಧು ಸೇರಿದಂತೆ ಸಿಬ್ಬಂದಿ ಮತ್ತು ಗುತ್ತಿಗೆದಾರರು ಇದ್ದರು.