- ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಾಡಪ್ರಭು ಕೆಂಪೇಗೌಡ ಅವರು ಈ ನಾಡಿಗೆ ನೀಡಿದ ಕೊಡುಗೆಗಳು ಅನನ್ಯವಾಗಿವೆ. ಅವರ ದೂರದೃಷ್ಟಿಯ ಯೋಜನೆಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಪಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬೆಂಗಳೂರು ಇಷ್ಟೊಂದು ಬೃಹತ್ತಾಗಿ, ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲಲು ಕೆಂಪೇಗೌಡರ ಶ್ರಮ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣ. ಅವರು ಅಂದೇ ನಿರ್ಮಿಸಿದ ಕೆರೆ-ಕಟ್ಟೆಗಳು, ಮಾರುಕಟ್ಟೆಗಳು ಹಾಗೂ ವಾಣಿಜ್ಯ ವ್ಯವಸ್ಥೆಗಳು ಇಂದಿನ ಅಭಿವೃದ್ಧಿಗೆ ಭದ್ರ ಬುನಾದಿಯಾಗಿವೆ. ಕೆಂಪೇಗೌಡರು ಕೇವಲ ಒಬ್ಬ ರಾಜರಾಗಿರದೆ, ಅದ್ಭುತ ಮುತ್ಸದ್ದಿ ಹಾಗೂ ನಾಯಕರಾಗಿದ್ದರು ಎಂದು ತಿಳಿಸಿದರು.


ಮನುಷ್ಯನಿಗೆ ಜನನ ಮತ್ತು ಮರಣ ಸಹಜ. ಆದರೆ ಇವೆರಡರ ಮಧ್ಯೆ ನಾವು ಮಾಡುವ ಸಾಧನೆ ಅತ್ಯಂತ ಮುಖ್ಯವಾದುದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರಂತಹ ಮಹನೀಯರನ್ನು ಅವರ ಸಾಧನೆಗಾಗಿಯೇ ಇಂದು ನಾವು ನೆನೆಯುತ್ತಿದ್ದೇವೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೇ, ಕೆಂಪೇಗೌಡರಂತಹ ಮಹನೀಯರ ಜೀವನ ಚರಿತ್ರೆಯನ್ನು ಓದಿ ಅಳವಡಿಸಿಕೊಳ್ಳಬೇಕು. ಅಂಕಗಳ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ವ್ಯಂಗ್ಯ ಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ನಾಡಪ್ರಭು ಕೆಂಪೇಗೌಡರ ಕುರಿತು ಉಪನ್ಯಾಸದಲ್ಲಿ, ರಾಜಪ್ರಭುತ್ವದ ಕಾಲದಲ್ಲಿ ಈ ಕೇವಲ ಕೋಟೆಗಳ ನಿರ್ಮಾಣಕ್ಕೆ ರಾಜ-ಮಹಾರಾಜರು ಆದ್ಯತೆ ನೀಡುತ್ತಿದ್ದರು. ಆದರೆ, ಪ್ರಜಾಶಾಹಿಯ ಆಶಯಗಳನ್ನು ಅಂದೇ ಗುರುತಿಸಿ, ಕೋಟೆ ಹಾಗೂ ಪೇಟೆ ಎರಡಕ್ಕೂ ಸಮಾನ ಮಹತ್ವ ನೀಡಿ ಬೆಂಗಳೂರನ್ನು ನಿರ್ಮಿಸಿದ ಶ್ರೇಯಸ್ಸು ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

ಕ್ರಿ.ಶ. 1510ರ ಜೂನ್ 27ರಂದು ಯಲಹಂಕದ ಸಮೀಪ ಕೆಂಪನಂಜೇಗೌಡ ಮತ್ತು ಲಿಂಗಾಂಬೆಯ ದಂಪತಿ ಪುತ್ರನಾಗಿ ಜನಿಸಿದ ಕೆಂಪೇಗೌಡ ಅವರ ಪೂರ್ವಜರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. 1515ರಲ್ಲಿ ಕೇವಲ ಐದು ವರ್ಷದ ಬಾಲಕನಾಗಿದ್ದಾಗ ತಂದೆಯೊಂದಿಗೆ ವಿಜಯನಗರದ ದಸರಾ ವೀಕ್ಷಿಸಲು ಹೋಗಿದ್ದ ಕೆಂಪೇಗೌಡರು, ಅಲ್ಲಿನ ಸಂಪದ್ಭರಿತ ರಾಜಧಾನಿಯನ್ನು ನೋಡಿ ತಮ್ಮದೇ ಆದ ಒಂದು ಸುಂದರ ನಗರಿ ನಿರ್ಮಿಸುವ ಕನಸು ಕಂಡರು. 1529ರಲ್ಲಿ ಅಚ್ಯುತರಾಯರ ಪಟ್ಟಾಭಿಷೇಕ ಮಹೋತ್ಸವಕ್ಕೆ ಪುನಃ ಹಂಪಿಗೆ ಭೇಟಿ ನೀಡಿದಾಗ, ತಮ್ಮ ಪ್ರದೇಶದಲ್ಲೂ ಇಂತಹದ್ದೇ ಒಂದು ನಗರ ಕಟ್ಟುವ ದೃಢಸಂಕಲ್ಪ ಮಾಡಿದರು. ತಮ್ಮ ಸಂಕಲ್ಪ ಸಾಕಾರಗೊಳಿಸಲು ಕೆಂಪೇಗೌಡರು 9 ವರ್ಷಗಳ ಕಾಲ ಸುದೀರ್ಘ ಶಿಕ್ಷಣದ ಜೊತೆಗೆ ರಾಜ್ಯಶಾಸ್ತ್ರ, ಆಡಳಿತ ನೀತಿ, ಯುದ್ಧಕಲೆ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ಪರಿಣತಿ ಪಡೆದುಕೊಂಡರು. ಈ ಶಿಕ್ಷಣವೇ ಅವರ ದೃಢಸಂಕಲ್ಪಕ್ಕೆ ಪ್ರಮುಖ ಬಲವಾಯಿತು ಎಂದರು.

ಬೆಂಗಳೂರಿಗೆ ಮರಳಿದ ಕೆಂಪೇಗೌಡರು, ವಿಜಯನಗರದ ಅಧಿಪತಿ ಅಚ್ಯುತರಾಯರ ಅನುಮತಿ ಪಡೆದು ಕ್ರಿ.ಶ. 1537ರಲ್ಲಿ ಬೆಂಗಳೂರು ನಗರ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಿದರು. ನಗರದ ಗಡಿಯನ್ನು ನಿರ್ಣಯಿಸಲು ನಾಲ್ಕು ದಿಕ್ಕುಗಳಿಗೆ ಜೋಡೆತ್ತುಗಳನ್ನು ಕಟ್ಟಿ ಕಳುಹಿಸಲಾಯಿತು. ಅವು ತಲುಪಿ ನಿಂತ ಸ್ಥಳಗಳನ್ನೇ ಗಡಿಯಾಗಿಸಿ, ನಾಲ್ಕು ಸುಂದರ ಗೋಪುರಗಳನ್ನು ನಿರ್ಮಿಸಿದರು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರು ಕೇವಲ ಒಬ್ಬ ಆಡಳಿತಗಾರರಾಗಿರದೇ, ಉನ್ನತ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಮಹಾನ್ ಪ್ರಜಾವತ್ಸಲ ರಾಜರಾಗಿದ್ದರು. ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ಬೆಂಗಳೂರು ನಗರವು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲಲು ಕೆಂಪೇಗೌಡರು ಅಂದೇ ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣವಾಗಿದೆ . ಕ್ರಿ.ಶ. 1529ರಲ್ಲಿ ನಾಡು ಕಟ್ಟುವ ಸಂಕಲ್ಪ ಮಾಡಿ ಕೇವಲ 59 ವರ್ಷ ಬದುಕಿದ ಮಹಾಪುರುಷ ಕೆಂಪೇಗೌಡರು ಕ್ರಿ.ಶ. 1569ರಲ್ಲಿ ಮಾಗಡಿ ಸಮೀಪದ ಕೆಂಪಾಪುರದಲ್ಲಿ ದೈವಾಧೀನರಾದರು ಎಂದರು.

ಕಾರ್ಯಕ್ರಮದಲ್ಲಿ ಕೆಂಪೇಗೌಡರ ಕುರಿತು ಏರ್ಪಡಿಸಿದ್ದ ಗಾಯನ, ರಸಪ್ರಶ್ನೆ, ಭಾಷಣ, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜಿ. ನಾಗರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಮಹಿಳಾ ಮುಖಂಡರಾದ ನಾಗರತ್ನಮ್ಮ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-27ಕೆಡಿವಿಜಿ31: ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಅವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. -27ಕೆಡಿವಿಜಿ32: ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.