ಸಾರಾಂಶ
ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಚಿಕ್ಕ ಸಮುದಾಯವಾಗಿರುವ ನಾಡವರ ಸಮಾಜ ವಿದ್ಯೆ ಮತ್ತು ಸಾಧನೆಯಲ್ಲಿ ಎಲ್ಲರೂ ಗಮನ ಸೆಳೆಯುವಂತಹ ಕೆಲಸ ಮಾಡುತ್ತಿದೆ ಎಂದು ಕಾರವಾರದ ನಿವೃತ್ತ ಪ್ರಾಚಾರ್ಯ ಜಿ.ಪಿ. ನಾಯಕ ಹೇಳಿದರು.
ದಾಂಡೇಲಿ: ನಾಡವರು ಸಮಾಜದೊಳಗಿರುವ ಜನಪದ ಸಂಸ್ಕೃತಿ, ಗ್ರಾಮೀಣ ಸೊಬಗನ್ನು, ಆಡುಭಾಷೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಕಾರವಾರದ ನಿವೃತ್ತ ಪ್ರಾಚಾರ್ಯ ಜಿ.ಪಿ. ನಾಯಕ ಹೇಳಿದರು.
ದಾಂಡೇಲಿಯ ನಾಡವರ ಸಮಾಜ ಹಮ್ಮಿಕೊಂಡಿದ್ದ ನಿವೃತ್ತರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಚಿಕ್ಕ ಸಮುದಾಯವಾಗಿರುವ ನಾಡವರ ಸಮಾಜ ವಿದ್ಯೆ ಮತ್ತು ಸಾಧನೆಯಲ್ಲಿ ಎಲ್ಲರೂ ಗಮನ ಸೆಳೆಯುವಂತಹ ಕೆಲಸ ಮಾಡುತ್ತಿದೆ ಎಂದರು.ನಾಡವರ ಸಮಾಜದಲ್ಲಿ ಸಾಕಷ್ಟು ಸಾಂಸ್ಕೃತಿಕ ಶ್ರೀಮಂತಿಕೆಯಿದೆ. ಆದರೆ ಇಂದಿನ ತಲೆಮಾರು ಆಧುನಿಕತೆಯ ಭರಾಟೆಯಲ್ಲಿ ಅದರಿಂದ ದೂರವಾಗುತ್ತಿರುವಂತೆ ಕಂಡುಬರುತ್ತಿದೆ. ಹಾಗೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದರು.
ಕಾರವಾರ ತಾಲೂಕು ನಾಡವರ ಸಮಾಜದ ಅಧ್ಯಕ್ಷ ಪ್ರಶಾಂತ ಗಾಂವಕರ ಮಾತನಾಡಿ, ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸಾಧಕರನ ಗೌರವಿಸುವುದು, ಒಳ್ಳೆಯ ಕೆಲಸ. ದಾಂಡೇಲಿ ನಾಡವರ ಸಂಘ ಹಲವಾರು ವರ್ಷಗಳಿಂದ ಇಂತಹ ಕಾರ್ಯ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್ .ವಾಸರೆ ಮಾತನಾಡಿ, ಯಾವುದೇ ಸಮಾಜವಿರಲಿ, ಅದು ತನ್ನ ಸಂಸ್ಕೃತಿ, ಜನಪದ ಸೊಗಡನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸಂಸ್ಕೃತಿ ನಶಿಸಿದರೆ ಸಮಾಜ ಕೂಡಾ ದುರ್ಬಲವಾಗುತ್ತದೆ ಎಂದರು.
ನಾಡವರ ಸಮಾಜದ ಹಿರಿಯರಾದ ಮಾಣೇಶ್ವರ ನಾಯಕ ಉಪಸ್ಥಿತರಿದ್ದರು. ದಾಂಡೇಲಿ ನಾಡವರ ಸಂಘದ ಅಧ್ಯಕ್ಷ ಸುರೇಶ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೇವಾ ನಿವೃತ್ತರಾದ ರಾಮಾ ನಾಯಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೆಂಕಮ್ಮ ನಾಯಕ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸೃಷ್ಟಿ ಪ್ರವೀಣ ನಾಯಕ ಪ್ರಾರ್ಥಿಸಿದರು. ನಾಡವರ ಸಮಾಜದ ಉಪಾಧ್ಯಕ್ಷೆ ಜೀವನಾ ನಾಯಕ ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ, ಸುಭಾಸ ನಾಯಕ ವರದಿ ವಾಚಿಸಿದರು. ನಿರುಪಮಾ ನಾಯಕ ಬಹುಮಾನಿತರ ಯಾದಿ ವಾಚಿಸಿದರು. ದೀಪ್ತಿ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಖಜಾಂಚಿ ಮಿಥುನ್ ನಾಯಕ ವಂದಿಸಿದರು. ಜಲಜಾ ಬಿ. ವಾಸರೆ ನಿರೂಪಿಸಿದರು. ರವಿ ಗಾಂವ್ಕರ್, ವರದಾ ಗಾಂವಕರ, ಪುನೀತ್ ನಾಯಕ, ಮೌರ್ಯ ನಾಯಕ ಮುಂತಾದವರು ಸಹಕರಿಸಿದರು.