ನಾಡೋಜ ವಿ.ಟಿ. ಕಾಳೆಗೆ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

| Published : Apr 28 2025, 12:48 AM IST

ನಾಡೋಜ ವಿ.ಟಿ. ಕಾಳೆಗೆ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಬೆಳಗಲ್ಲು ವೀರಣ್ಣನವರು ಅಂತಾರಾಷ್ಟ್ರೀಯ ಮಟ್ಟದ ತೊಗಲುಗೊಂಬೆ ಕಲಾವಿದರಾಗಿದ್ದವರು

ಬಳ್ಳಾರಿ: ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ನಾಡೋಜ ಡಾ. ವಿ.ಟಿ. ಕಾಳೆ ಅವರಿಗೆ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಡಿನ ಹಿರಿಯ ಲೇಖಕರು, ಕಲಾವಿದರು, ಸಾಹಿತಿಗಳು ಸೇರಿದಂತೆ ನೂರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರಲ್ಲದೆ, ಬೆಳಗಲ್ಲು ವೀರಣ್ಣನವರು ರಂಗಭೂಮಿ ಹಾಗೂ ತೊಗಲುಗೊಂಬೆ ಕಲಾ ಪ್ರಕಾರಕ್ಕೆ ನೀಡಿದ ಕೊಡುಗೆ ಹಾಗೂ ಬೆಳಗಲ್ಲು ವೀರಣ್ಣನವರ ಆತ್ಮೀಯ ಸ್ನೇಹಿತರಾಗಿದ್ದ ನಾಡೋಜ ಡಾ. ವಿ.ಟಿ. ಕಾಳೆ ಅವರು ಚಿತ್ರಕಲಾ ಜಗತ್ತಿಗೆ ನೀಡಿದ ಅನನ್ಯ ಸೇವೆಯನ್ನು ಸಮಾರಂಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಲೇಖಕ ಡಾ. ವಸುಂಧರಾ ಭೂಪತಿ, ರಂಗಕರ್ಮಿ ಬೆಳಗಲ್ಲು ವೀರಣ್ಣನವರ ಜೊತೆಗಿನ ಒಡನಾಟ ನೆನಪು ಮಾಡಿಕೊಂಡರು. ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಬೆಳಗಲ್ಲು ವೀರಣ್ಣನವರು ಅಂತಾರಾಷ್ಟ್ರೀಯ ಮಟ್ಟದ ತೊಗಲುಗೊಂಬೆ ಕಲಾವಿದರಾಗಿದ್ದವರು. ಬಸವಪ್ರಜ್ಞೆ ಹಾಗೂ ಕಾಯಕತತ್ವ ಮೈಗೂಡಿಸಿಕೊಂಡಿದ್ದರು. ರಾಮಾಯಣ-ಮಹಾಭಾರತದ ಮಹಾಕಾವ್ಯಗಳಲ್ಲಿ ಬರುವ ಅನೇಕ ಘಟನಾವಳಿಗಳನ್ನು ತೆರೆಯ ಮೇಲೆ ತಂದರಲ್ಲದೆ, ಸಮಕಾಲೀನ ಸಂದರ್ಭಕ್ಕೆ ತೊಗಲುಗೊಂಬೆ ಪ್ರದರ್ಶನ ಅಳವಡಿಸಿದ್ದರು. ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕಲಾವಿದ ಬೆಳಗಲ್ಲು ವೀರಣ್ಣನವರ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ನಾಡಿನ ದಿಗ್ಗಜರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಚ್ಚು ಸಂಭ್ರಮಿಸುವ ಸಂಗತಿಯಾಗಿದೆ ಎಂದು ತಿಳಿಸಿದರು.

ಬೆಳಗಲ್ಲು ವೀರಣ್ಣನವರ ಕೊಡುಗೆ ಚಿರಸ್ಥಾಯಿಯಾಗಿ ಉಳಿಯಬೇಕು. ಅವರ ಜೀವನ ಚರಿತ್ರೆ ಪ್ರೌಢಶಾಲೆಯ ಪಠ್ಯಕ್ಕೆ ಅಳವಡಿಸಬೇಕು. ಬಳ್ಳಾರಿಯ ಪ್ರಮುಖ ವೃತ್ತವೊಂದಕ್ಕೆ ಬೆಳಗಲ್ಲು ವೀರಣ್ಣನವರ ಹೆಸರಿಡಬೇಕು. ಬೆಳಗಲ್ಲು ವೀರಣ್ಣನವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರತಿವರ್ಷ ಕಲಾವಿದರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ನಾಡೋಜ ವಿ.ಟಿ. ಕಾಳೆ ಚಿತ್ರಬದುಕು ಕುರಿತು ಮೆಲುಕು ಹಾಕಿದ ಡಾ. ವಸುಂಧರಾ ಭೂಪತಿ ಅವರು ಚಿತ್ರಕಲೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿ.ಟಿ. ಕಾಳೆ ಹೆಸರು ಮಾಡಿದ್ದಾರೆ. ಅನೇಕ ದೇಶಗಳಲ್ಲಿ ವಿ.ಟಿ. ಕಾಳೆ ಅವರು ರಚಿಸಿದ ಕಲಾಕೃತಿಗಳು ಪ್ರದರ್ಶನಕ್ಕಿವೆ. ವಿಧಾನಸೌಧ ಸೇರಿದಂತೆ ರಾಜ್ಯ ಸರ್ಕಾರಿ ಕಚೇರಿಗಳಲ್ಲಿರುವ ಬಸವಣ್ಣನವರ ಭಾವಚಿತ್ರ ರಚಿಸಿದವರು ಸಹ ವಿ.ಟಿ. ಕಾಳೆ ಅವರಾಗಿದ್ದಾರೆ. ಈ ವರೆಗೆ ಸುಮಾರು 50 ಸಾವಿರ ಚಿತ್ರಗಳನ್ನು ಬರೆದಿರುವ ಕಾಳೆ ಅವರು 92 ವರ್ಷದ ವಯಸ್ಸಿನಲ್ಲೂ ದಿನಕ್ಕೆ ಎಂಟು ತಾಸು ಚಿತ್ರಬಿಡುಸುತ್ತಾರೆ. ಸದಾ ಲವಲವಿಕೆಯ ಬದುಕ ಕಟ್ಟಿಕೊಂಡಿರುವ ಕಾಳೆ ಈ ನಾಡು ಹಾಗೂ ದೇಶ ಕಂಡ ಅತ್ಯಂತ ಶ್ರೇಷ್ಠ ಕಲಾವಿದರಾಗಿದ್ದು, ಇಂತಹ ಮಹನೀಯರಿಗೆ ಬೆಳಗಲ್ಲು ವೀರಣ್ಣನವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಖುಷಿ ನೀಡಿದೆ ಎಂದು ಹೇಳಿದರು.

ಕಲಬುರಗಿಯ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅವರು ಬೆಳಗಲ್ಲು ವೀರಣ್ಣನವರು ತೊಗಲುಗೊಂಬೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.

ಹಿರಿಯ ಸಿನಿಮಾ ಹಾಗೂ ರಂಗಭೂಮಿ ಕಲಾವಿದ ಮೈಸೂರು ರಮಾನಂದ ಅವರು ಬೆಳಗಲ್ಲು ವೀರಣ್ಣನವರ ಜೊತೆ ಸುಮಾರು ಮೂರೂವರೆ ದಶಕದ ಒಡನಾಟವಿತ್ತು. ದುಡಿವವರ ಜತೆ ಜೀವನ ಮಾಡಬೇಕು ಎಂಬುದು ಅವರು ಕಂಡುಕೊಂಡ ನಿಲುವಾಗಿತ್ತು ಎಂದು ತಿಳಿಸಿದರು.

ಹಿರಿಯ ಲೇಖಕ ಗಂಗಾಧರ ಪತ್ತಾರ ಮಾತನಾಡಿದರು. ಕಮ್ಮರಚೇಡುಮಠದ ಶ್ರೀ ಕಲ್ಯಾಣಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮೈಸೂರಿನ ವಸ್ತ್ರಾಲಂಕಾರ ಕಲಾವಿದ ಮೈಸೂರು ಬಿ.ಎಂ. ರಾಮಚಂದ್ರ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಉಪನ್ಯಾಸಕ ಸಿ. ಮಂಜುನಾಥ, ರಂಗಭೂಮಿ ಕಲಾವಿದ ಗಾದಿಗನೂರು ಹಾಲಪ್ಪ, ವೆಂಕಟಯ್ಯ ಅಪ್ಪಗೆರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಭಾಗವಹಿಸಿದ್ದರು.

ಬೆಳಗಲ್ಲು ಹನುಮಂತು ಪ್ರಾಸ್ತಾವಿಕ ಮಾತನಾಡಿದರು. ವೀಣಾ ಎರ್ರಿಗೌಡ ಹಾಗೂ ಗಗನ್ ಬೆಳಗಲ್ಲು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಬೆಳಗಲ್ಲು ವೀರಣ್ಣನವರ ಧ್ವನಿಯಲ್ಲಿ ಮುದ್ರಿತಗೊಂಡ ಬಾಪೂಜಿ ತೊಗಲುಗೊಂಬೆ ಪ್ರದರ್ಶನಗೊಂಡಿತು.