ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ಪ್ರಾಂತ್ಯ ಗ್ರಾಮದ 13 ಶತಮಾನಗಳ ಇತಿಹಾಸ ಹೊಂದಿರುವ ನಾಡೂರಿ, ಈಗ ಲಾಡಿ ಎಂದು ಕರೆಯಲ್ಪಡುವ ಕ್ಷೇತ್ರದ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ ಇದೀಗ ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡಿದೆ. ಬುಧವಾರದಿಂದ ಫೆ.16ರ ತನಕ ನೂತನ ಶಿಲಾಮಯ ದೇವಳದ ಅನಾವರಣ, ಶ್ರೀ ಚತುರ್ಮುಖ ಬ್ರಹ್ಮ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನೆರವೇರಲಿದೆ.ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯುವುದು.ಊರ ಪರವೂರ ಭಜಕರ ಹೊರೆಕಾಣಿಕೆ ನಿರೀಕ್ಷೆಗೂ ಮೀರಿ ಹರಿದು ಬಂದಿದ್ದು ಉತ್ಸಾಹಿ ಸ್ವಯಂ ಸೇವಕರ ಬಳಗ ಇಲ್ಲಿ ಕಾರ್ಯನಿರತವಾಗಿದೆ. ಸಮಗ್ರ ಜೀರ್ಣೋದ್ಧಾರ: 1960ರ ದಶಕದಲ್ಲಿ ಸ್ಥಳೀಯ ಹೊಟೇಲ್ ಉದ್ಯಮಿ ಬಾಬು ಭಟ್ ಯಾನೆ ಶ್ರೀನಿವಾಸ ಭಟ್ಟರ ಹಿರಿತನದಲ್ಲಿ ಈ ಸ್ಥಳ ಅಭಿವೃದ್ಧಿಪಡಿಸಿ 1964 ರಲ್ಲಿ ಕಲ್ಲು ಹಂಚಿನ ದೇವಾಲಯ ನಿರ್ಮಾಣವಾಗಿತ್ತು. 2000 ದಲ್ಲಿ ಮತ್ತೆ ಬ್ರಹ್ಮಕಶಲ ನಡೆದಿದೆ. ಇದೀಗ ಸಂಪೂರ್ಣ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ,ಪರಿವಾರ ದೇವರು, ನಾಗ ಬನದ ಜೀರ್ಣೋದ್ಧಾರ, ಗಣಪತಿ, ನಾಡು, ದೈವದ ಗುಡಿಗಳ ಸಹಿತ ಕೆರೆ, ಬಾವಿ, ಗೋಪುರ, ಆವರಣ ಹೀಗೆ ಒಟ್ಟು 5 ಕೋಟಿ ರು. ಅಂದಾಜು ವೆಚ್ಚದ ಕಾಮಗಾರಿಗಳು ಭಜಕರು ಮತ್ತು ದಾನಿಗಳ ನೆರವಿನಿಂದ ನಡೆದಿವೆ.
ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ನೇತೃತ್ವದಲ್ಲಿ ಪದ್ಮನಾಭ ಶಿಲ್ಪಿ ಬಳಗವು ಇಲ್ಲಿನ ಒಟ್ಟು 5 ಸಾವಿರ ಅಡಿ ವಿಸ್ತಾರದಲ್ಲಿನ ಸಂಪೂರ್ಣ ಶಿಲಾಮಯ ಛಾವಣಿಯ ಆಕರ್ಷಕ ವಿಶಿಷ್ಟ ಗುಡಿ ಗೋಪುರಗಳನ್ನು ರೂಪಿಸಿದೆ.ಬ್ರಹ್ಮಕಲಶೋತ್ಸವ ಸಂಭ್ರಮ: ಬುಧವಾರದಿಂದ ಹವನಾದಿ ಪೂಜೆ, ದಿನವಿಡೀ ಸಾಂಸ್ಕೃತಿಕ ಕಲಾಪಗಳು ಜರುಗಲಿವೆ.
ಪ್ರತೀ ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಲಾಪಗಳು, ಅನ್ನಸಂತರ್ಪಣೆ ಜರಗಲಿವೆ. 15ರಂದು ಕುಂಭ ಲಗ್ನ ಸುಮೂಹೂರ್ತದಲ್ಲಿ ಎಡನೀರಿನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ದೇವಳದ ಅನಾವರಣ, ಚತುರ್ಮುಖ ಬ್ರಹ್ಮ- ಬಲಮುರಿ ಗಣಪತಿ, ನಾಡು ಸಹಿತ ಕುಂಭಕಂಠಿಣಿ, ರಕೇಶ್ವರಿ ದೈವಗಳ ಬಿಂಬ ಪ್ರತಿಷ್ಠೆ ತನ್ನ ಹೋಮ, ತತ್ವಕಲಶಾಭಿಷೇಕ ಜರಗಲಿವೆ.ಸಂಜೆ ಮಂಡಲ ಪೂಜೆ,ಸಹಸ್ರ (1001) ಕಲಶ ಬ್ರಹ್ಮ ದೇವರಿಗೆ 108 ಕಲಶ, ಗಣಪತಿ ದೇವರಿಗೆ 48 ಕಲಶ ನಾಡುವಿಗೆ 48 ಕಲಶ, ಪರಿವಾರ ದೈವಗಳಿಗೆ ದ್ರವ್ಯ ಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು ನಡೆಯಲಿವೆ.
ಧಾರ್ಮಿಕ ಸಭೆ: 15ರಂದು ಸಂಜೆ 4.30ರಿಂದ ಜರಗುವ ಧಾರ್ಮಿಕ ಸಭೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಅಧ್ಯಕ್ಷತೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಪುರಸಭಾ ಸದಸ್ಯ ಸುರೇಶ್ ಪ್ರಭು ಭಾಗವಹಿಸಲಿದ್ದಾರೆ.16ರಂದು ಅಪರಾಹ್ನ 12.105 ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ಪೇಜಾವರ ಮಠಾಧೀಶರಿಂದ ಬ್ರಹ್ಮಕಲಶಾಭಿಷೇಕ, ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ ರಂಗಪೂಜೆ, ಬಲಿ ಮಹೋತ್ಸವ, ಹಾಗೂ ಪರಿವಾರ ಧರ್ಮದೈವಗಳಿಗೆ ನೇಮೋತ್ಸವ, 17ರಂದು ಮಂಗಲ ಗಣಯಾಗ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ.
.........................ದೇಶದಲ್ಲೇ ಅಪರೂಪದ ಕ್ಷೇತ್ರ
ದೇಶದ ಅಪರೂಪದ ಬ್ರಹ್ಮ ದೇವರ ಸಾನಿಧ್ಯ ಎನ್ನಲಾದ ಶ್ರೀ ಬ್ರಹ್ಮ ದೇವರ ಸನ್ನಿಧಿಯ ಶಿಲಾಮೂರ್ತಿ ಹಂಸವಾಹನ, ಜಪಮಾಲೆ, ಅಮೃತಕಲಶ, ವೇದ ಪುಸ್ತಕಧಾರಿಯಾಗಿ ಅಭಯ ಹಸ್ತ ಹೊಂದಿದ್ದು ಧನ್ವಂತರಿಯ ಸ್ವರೂಪದ ಅಪೂರ್ವ ಬ್ರಹ್ಮಶಿಲ್ಪವೆಂದು ತಜ್ಞರ ಅಂಬೋಣ. ಕಾರಣಿಕದ ಕ್ಷೇತ್ರವಾಗಿ ಕಂಕಣ ಭಾಗ್ಯ, ಸಂತಾನ ಭಾಗ್ಯ, ಹಾಗೂ ಚರ್ಮವ್ಯಾಧಿಗ್ರಸ್ತರಿಗೆ ಆರೋಗ್ಯಭಾಗ್ಯ ಸಿದ್ಧಿಯ ಕ್ಷೇತ್ರವಾಗಿಯೂ ಲಾಡಿ ಪ್ರಸಿದ್ಧ. ಅಪರೂಪದ ಚತುರ್ಮುಖ ಬ್ರಹ್ಮನ ದೇವಸ್ಥಾನವಿದು. ಈ ಪವಿತ್ರ ತಾಣದ ಪೂರ್ವ ಭಾಗದ ಅಂಗಜಾಲ ಬರ್ಕೆಯಲ್ಲಿ ಉಗಮ ಸ್ಥಾನ ಹೊಂದಿರುವ ಶಾಂಭವಿ ನದಿ ಈ ಲಾಡಿ ದೇವಸ್ಥಾನದ ಪರಿಸರದ ವಿಶೇಷ.ಬ್ರಹ್ಮನಿಗೆ ದೇವಳ, ಪೂಜೆಯಿಲ್ಲ ಎನ್ನುವ ಪ್ರತೀತಿಯ ನಡುವೆ ರಾಜಾಸ್ತಾನದ ಪುಷ್ಕರ್ ಹೊರತುಪಡಿಸಿದರೆ ದಕ್ಷಿಣದ ಮೂಡುಬಿದಿರೆಯಲ್ಲಿ ಈ ಪ್ರಾಚೀನ ತಾಣ ಇದೀಗ ಪರಂಪರೆಯ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.